ಸುದ್ದಿಗಳು

ರಾಜಸ್ಥಾನ ವಕೀಲರ ರಕ್ಷಣಾ ಕಾಯಿದೆ ಅಧ್ಯಯನ ಮಾಡಿ, ಕರ್ನಾಟಕದಲ್ಲೂ ಜಾರಿ: ಮುಖ್ಯಮಂತ್ರಿ ಸಿದ್ದರಾಮಯ್ಯ

ಕೆಎಸ್‌ಬಿಸಿ ವತಿಯಿಂದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ವಕೀಲರ ಸಮಾವೇಶ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಔಪಚಾರಿಕವಾಗಿ ಆಹ್ವಾನಿಸಲಾಗಿದೆ.

Bar & Bench

ರಾಜಸ್ಥಾನದಲ್ಲಿ ಈಗಾಗಲೇ ವಕೀಲರ ರಕ್ಷಣಾ ಕಾಯಿದೆ ಜಾರಿಗೊಳಿಸಲಾಗಿದ್ದು, ಅದನ್ನು ತರಿಸಿಕೊಂಡು ಅಧ್ಯಯನ ಮಾಡಲಾಗುವುದು. ಆನಂತರ ನಮ್ಮಲ್ಲಿಯೂ ವಕೀಲ ರಕ್ಷಣಾ ಕಾಯಿದೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.

ಕರ್ನಾಟಕ ರಾಜ್ಯ ವಕೀಲರ ಪರಿಷತ್‌ (ಕೆಎಸ್‌ಬಿಸಿ) ಅಧ್ಯಕ್ಷ ಎಚ್ ಎಲ್ ವಿಶಾಲ ರಘು ಮತ್ತು ಪದಾಧಿಕಾರಿಗಳು ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸೌಹಾರ್ದಯುತವಾಗಿ ಭೇಟಿ ಮಾತುಕತೆ ನಡೆಸಿದರು.

ಕೆಎಸ್‌ಬಿಸಿ ವತಿಯಿಂದ ಆಗಸ್ಟ್‌ನಲ್ಲಿ ಮೈಸೂರಿನಲ್ಲಿ ವಕೀಲರ ಸಮಾವೇಶ ಮಾಡಲು ನಿರ್ಧರಿಸಲಾಗಿದ್ದು, ಅದಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಔಪಚಾರಿಕವಾಗಿ ಆಹ್ವಾನಿಸಲಾಯಿತು.

ಹಿಂದೆ ಮುಖ್ಯಮಂತ್ರಿಯಾಗಿದ್ದಾಗ ಸಿದ್ದರಾಮಯ್ಯನವರು ವಕೀಲರ ಕಲ್ಯಾಣಕ್ಕಾಗಿ 10 ಕೋಟಿ ರೂಪಾಯಿ ಅನುದಾನ ನೀಡಿದ್ದರು. ಈ ಬಾರಿಯೂ ಅನುದಾನ ಕೋರಿದ್ದೇವೆ. ಮುಂದಿನ ದಿನಗಳಲ್ಲಿ ಅದರ ಬಗ್ಗೆ ಗಮನಹರಿಸುವುದಾಗಿ ತಿಳಿಸಿದ್ದಾರೆ ಎಂದು ಕೆಎಸ್‌ಬಿಸಿ ಮಾಜಿ ಅಧ್ಯಕ್ಷ ಅನಿಲ್‌ಕುಮಾರ್‌ ಅವರು ʼಬಾರ್‌ ಅಂಡ್‌ ಬೆಂಚ್‌ʼಗೆ ತಿಳಿಸಿದರು.

ಕೆಎಸ್‌ಬಿಸಿಗೆ ಶಾಶ್ವತ ಸ್ಥಳವಿಲ್ಲವಾಗಿದ್ದು, ಪ್ರಸ್ತುತ ಪ್ರೆಸ್ ಕ್ಲಬ್ ಬಳಿ ಇರುವ ಸ್ಥಳದಲ್ಲಿಯೇ ಶಾಶ್ವತವಾಗಿ ಸ್ಥಳಾವಕಾಶ ಮಾಡಿಕೊಡುವಂತೆ ಮನವಿ ಮಾಡಲಾಯಿತು. ಈ ನಿಟ್ಟಿನಲ್ಲಿ ಪರಿಶೀಲಿಸಿ ಕ್ರಮಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿ ನೀಡಿದ್ದಾರೆ ಎಂದರು.