ಸುದ್ದಿಗಳು

ಸುಪ್ರೀಂ ಕೋರ್ಟ್ ಕಿವಿಹಿಂಡಿದ ನಂತರ ನ್ಯಾಯಾಧೀಶೆಗೆ ಮಕ್ಕಳ ಆರೈಕೆ ರಜೆ ನೀಡಿದ ಜಾರ್ಖಂಡ್ ಹೈಕೋರ್ಟ್

ಆದರೆ ಕೋರಿದ್ದಕ್ಕಿಂತಲೂ ಕಡಿಮೆ ರಜೆ ನೀಡಲಾಗಿದೆ ಎಂದು ನ್ಯಾಯಾಧೀಶೆ ಪರ ವಕೀಲರು ಕಳವಳ ವ್ಯಕ್ತಪಡಿಸಿದರು.

Bar & Bench

ಒಂಟಿ‌ ಪೋಷಕಿಯಾಗಿದ್ದ ಜಿಲ್ಲಾ ನ್ಯಾಯಾಧೀಶೆಯೊಬ್ಬರಿಗೆ ಮಕ್ಕಳ ಆರೈಕೆ ರಜೆ ಸಂಬಂಧ ಜಾರ್ಖಂಡ್‌ ಹೈಕೋರ್ಟ್‌ ತಾತ್ಕಾಲಿಕವಾಗಿ ಭಾಗಶಃ ಪರಿಹಾರ ಒದಗಿಸಿದೆ ಎಂದು ಬುಧವಾರ ಸುಪ್ರೀಂ ಕೋರ್ಟ್‌ಗೆ ತಿಳಿಸಲಾಯಿತು [ಕಾಶಿಕಾ ಎಂ ಪ್ರಸಾದ್ ಮತ್ತು ಜಾರ್ಖಂಡ್ ಸರ್ಕಾರ ನಡುವಣ ಪ್ರಕರಣ].

ರಜೆ ನಿರಾಕರಿಸಿದ್ದನ್ನು ಪ್ರಶ್ನಿಸಿ ಜಾರ್ಖಂಡ್‌ನ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶೆ ಕಾಶಿಕಾ ಎಂ ಪ್ರಸಾದ್ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ್ದರು. ಈ ಹಿಂದಿನ ವಿಚಾರಣೆ ವೇಳೆ ರಜೆ ಕೋರಿದ್ದ ಅರ್ಜಿಯನ್ನು ಮರುಪರಿಶೀಲಿಸುವಂತೆ ಸರ್ವೋಚ್ಚ ನ್ಯಾಯಾಲಯ ಹೈಕೋರ್ಟ್‌ಗೆ ಸೂಚಿಸಿತ್ತು.

ಹೈಕೋರ್ಟ್ ಈಗ ಮಕ್ಕಳ ಆರೈಕೆ ರಜೆಯನ್ನು ಮಂಜೂರು ಮಾಡಿದ್ದರೂ, ಅದು ಕೋರಿದ್ದಕ್ಕಿಂತ ಗಮನಾರ್ಹವಾಗಿ ಕಡಿಮೆಯಾಗಿದೆ. 194 ದಿನಗಳ ರಜೆ ಕೇಳಿದ್ದರೂ 92 ದಿನಗಳಷ್ಟೇ ರಜೆ ಎಂದು ನ್ಯಾಯಾಧೀಶೆ ಪರ ವಕೀಲರು ಕಳವಳ ವ್ಯಕ್ತಪಡಿಸಿದರು.

 ಅಲ್ಲದೆ ತನ್ನ ಕಕ್ಷಿದಾರರು ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿದ ಬಳಿಕ ತನಗೆ ಸಂಬಂಧಿಸಿದ ವಾರ್ಷಿಕ ಗೌಪ್ಯ ವರದಿಯಲ್ಲಿ ಪ್ರತಿಕೂಲ ಟೀಕೆ ಮಾಡಲಾಗಿದೆ. ನ್ಯಾಯಾಧೀಶೆಯ ಕಾರ್ಯಕ್ಷಮತೆ ಕುರಿತ ವಾರ್ಷಿಕ ಗೌಪ್ಯ ವರದಿ ಬಗ್ಗೆ ಈ ಹಿಂದಿನ ವಿಚಾರಣೆಯ ವೇಳೆ ನ್ಯಾಯಾಲಯಕ್ಕೆ ತಿಳಿಸಲಾಗಿದೆ  ಎಂದು ನ್ಯಾಯಾಧೀಶೆ ಪರ ವಕೀಲರು ಗಮನ ಸೆಳೆದರು. ಈ ವಿಚಾರವಾಗಿ ಪ್ರತ್ಯೇಕ ಅರ್ಜಿ ಸಲ್ಲಿಸುವಂತೆ ನ್ಯಾಯಾಲಯ ಹೇಳಿತು.

ಆದರೆ ವರ್ಗಾವಣೆ ಆದೇಶದ ಕಾರಣಕ್ಕೆ ಪ್ರಸ್ತುತ ಮೊಕದ್ದಮೆ ಹೂಡಲಾಗಿದೆ ಎಂದು ಜಾರ್ಖಂಡ್‌ ಆಡಳಿತಾತ್ಮಕ ವಿಭಾಗದ ಪರ ವಾದ ಮಂಡಿಸಿದ ಹಿರಿಯ ವಕೀಲ ಅಜಿತ್‌ ಕುಮಾರ್‌ ಸಿನ್ಹಾ ದೂರಿದರು. ಜಿಲ್ಲಾ ನ್ಯಾಯಾಧೀಶೆಗೆ ವಿಸ್ತೃತ ರಜೆ ನೀಡುವುದು ಸಮರ್ಥನೀಯವಲ್ಲದ ಪೂರ್ವನಿದರ್ಶನವನ್ನು ಹುಟ್ಟುಹಾಕಬಹುದು ಎಂದು ಅವರು ಹೇಳಿದರು.

ವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್‌ ಮಂಜೂರು ಮಾಡಲಾದ 92 ದಿನಗಳ ರಜೆಯನ್ನು ಮುಂದುವರಿಸಬಹುದು ಎಂದು ಹೇಳಿತು. ಅಲ್ಲದೆ ಹೈಕೋರ್ಟ್‌ ನಾಲ್ಕು ವಾರಗಳಲ್ಲಿ ಪ್ರತಿ ಅಫಿಡವಿಟ್‌ ಸಲ್ಲಿಸುವಂತೆ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಆಗಸ್ಟ್‌ ಮೊದಲ ವಾರದಲ್ಲಿ ನಡೆಯಲಿದೆ.