Prime Minister Narendra Modi 
ಸುದ್ದಿಗಳು

ಕೋರ್ಟ್‌ನ ಅಧಿಕೃತ ಇಮೇಲ್‌ಗಳಲ್ಲಿ ಮೋದಿ ಭಾವಚಿತ್ರ: ಸುಪ್ರೀಂ ಕೋರ್ಟ್‌ ಆಕ್ಷೇಪಣೆಯ ನಂತರ ಕೈಬಿಟ್ಟ ಎನ್‌ಐಸಿ

ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಎನ್‌ಐಸಿಗೆ ಸುಪ್ರೀಂ ಕೋರ್ಟ್‌ ಪತ್ರವನ್ನು ಬರೆದ ನಂತರ ಚಿತ್ರವನ್ನು ತೆಗೆದು ಹಾಕಲಾಗಿದೆ.

Bar & Bench

ಸರ್ವೋಚ್ಚ ನ್ಯಾಯಾಲಯದ ಆಕ್ಷೇಪಣೆಯ ನಂತರ ಸುಪ್ರೀಂ ಕೋರ್ಟಿನ ಅಧಿಕೃತ ಇಮೇಲ್‌ಗಳ ಕೆಳ ಅಂಚಿನಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಭಾವಚಿತ್ರವುಳ್ಳ ಜಾಹಿರಾತು ಬ್ಯಾನರ್‌ಗಳನ್ನು ರಾಷ್ಟ್ರೀಯ ಮಾಹಿತಿ ಕೇಂದ್ರವು (ಎನ್‌ಐಸಿ) ತೆಗೆದು ಹಾಕಿದೆ.

ನ್ಯಾಯಾಂಗದೊಂದಿಗೆ ಈ ಜಾಹಿರಾತು ಚಿತ್ರಕ್ಕೆ ಯಾವುದೇ ರೀತಿಯ ಸಂಬಂಧವಿಲ್ಲ ಎಂದು ಆಕ್ಷೇಪಿಸಿ ಸುಪ್ರೀಂ ಕೋರ್ಟ್‌ ಎನ್‌ಐಸಿಗೆ ಪತ್ರವನ್ನುಬರೆದ ನಂತರ ಎನ್‌ಐಸಿ ಮೋದಿ ಭಾವಚಿತ್ರವುಳ್ಳ ಬ್ಯಾನರ್‌ ಅಂಚನ್ನು ಸುಪ್ರೀಂ ಕೋರ್ಟ್‌ನ ಅಧಿಕೃತ ಇಮೇಲ್‌ಗಳಿಂದ ತೆಗೆದುಹಾಕಿದೆ. ಈ ಕುರಿತು ಸುಪ್ರೀಂ ಕೋರ್ಟ್‌ ಅಧಿಕೃತ ಪ್ರಕಟಣೆಯನ್ನು ಹೊರಡಿಸಿದೆ. ಆದರೆ, ಈ ಪ್ರಕಟಣೆಯಲ್ಲಿ ತನ್ನ ಇಮೇಲ್‌ಗಳ ಅಂಚಿಗೆ ಲಗತ್ತಿಸಿದ್ದ ಚಿತ್ರದ ನಿಖರದ ಸ್ವರೂಪದ ಬಗ್ಗೆ ಯಾವುದೇ ಉಲ್ಲೇಖವನ್ನು ಮಾಡಿಲ್ಲ.

ಈ ಬಗೆಗಿನ ವಿವರಣಾ ಪ್ರಕಟಣೆಯಲ್ಲಿ ಸುಪ್ರೀಂ ಕೋರ್ಟ್‌, “ಭಾರತದ ಸುಪ್ರೀಂ ಕೋರ್ಟ್‌ನ ಅಧಿಕೃತ ಇಮೇಲ್‌ಗಳ ಕೆಳಅಂಚಿನಲ್ಲಿ ನ್ಯಾಯಾಂಗದ ಕಾರ್ಯಕ್ಕೆ ಯಾವುದೇ ರೀತಿಯಲ್ಲಿಯೂ ಸಂಬಂಧಪಡದ ಚಿತ್ರವೊಂದನ್ನು ಅಳವಡಿಸಲಾಗಿರುವುದನ್ನು ಸುಪ್ರೀಂ ಕೋರ್ಟ್‌ ರೆಜಿಸ್ಟ್ರಿಗೆ ನಿನ್ನೆ ತಡ ಸಂಜೆ ಗಮನಕ್ಕೆ ತರಲಾಯಿತು. ಸುಪ್ರೀಂ ಕೋರ್ಟ್‌ನಿಂದ ಕಳುಹಿಸಲಾಗುವ ಇಮೇಲ್‌ಗಳಿಂದ ಆ ಚಿತ್ರವನ್ನು ಕೈಬಿಡುವಂತೆ ಸರ್ವೋಚ್ಚ ನ್ಯಾಯಾಲಯಕ್ಕೆ ಇಮೇಲ್‌ ಸೇವೆಯನ್ನು ಒದಗಿಸುವ ರಾಷ್ಟ್ರೀಯ ಮಾಹಿತಿ ಕೇಂದ್ರಕ್ಕೆ ನಿರ್ದೇಶಿಸಲಾಯಿತು,” ಎಂದು ಮಾಹಿತಿ ನೀಡಿದೆ.

ಇದಲ್ಲದೆ ಇಮೇಲ್‌ಗಳಲ್ಲಿ ಸುಪ್ರೀಂ ಕೋರ್ಟ್‌ನ ಚಿತ್ರವನ್ನು ಬಳಸುವಂತೆಯೂ ಸಹ ಸರ್ವೋಚ್ಚ ನ್ಯಾಯಾಲಯವು ಎನ್‌ಐಸಿಗೆ ಸೂಚನೆ ನೀಡಿದ್ದು ಅದರ ಪಾಲನೆಯನ್ನು ಮಾಡಲಾಗಿದೆ. ‌