GBA 
ಸುದ್ದಿಗಳು

ಜಿಬಿಎ ಐದು ಪಾಲಿಕೆಗಳ ಚುನಾವಣೆ ವಿಳಂಬ: ಮೂರು ತಿಂಗಳು ಕಾಲಾವಕಾಶ ವಿಸ್ತರಣೆ ಕೋರಿ ಸುಪ್ರೀಂಗೆ ಅರ್ಜಿ ಸಲ್ಲಿಸಿದ ಆಯೋಗ

ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಕಳಕಳಿಯು ಮೇಲ್ನೋಟಕ್ಕೆ ನೈಜವಾಗಿದ್ದು, ಚುನಾವಣೆ ನಡೆಸುವುದು ವಿಳಂಬವಾಗಲಿದೆ. ಸಮಯ ವಿಸ್ತರಣೆ ಕೋರಿರುವುದು ಪ್ರಾಮಾಣಿಕ ನಡೆಯಾಗಿದೆ ಎಂದಿರುವ ರಾಜ್ಯ ಚುನಾವಣಾ ಆಯೋಗ.

Bar & Bench

ಗ್ರೇಟರ್‌ ಬೆಂಗಳೂರು ಪ್ರಾಧಿಕಾರದ ಅಡಿ ಬರುವ ಐದು ಮಹಾನಗರ ಪಾಲಿಕೆಗಳಿಗೆ ಚುನಾವಣೆಗೆ ನಿಗದಿಪಡಿಸಿರುವ ಗಡುವನ್ನು ಮೂರು ತಿಂಗಳು ವಿಸ್ತರಿಸುವಂತೆ ಸುಪ್ರೀಂ ಕೋರ್ಟ್‌ಗೆ ರಾಜ್ಯ ಚುನಾವಣಾ ಆಯೋಗ ಮನವಿ ಮಾಡಿದೆ. ಈಗಾಗಲೇ ನಾನಾ ಕಾರಣಗಳಿಗೆ ವಿಳಂಬವಾಗಿರುವ ಚುನಾವಣೆಯು ಮತ್ತಷ್ಟು ತಡವಾಗಲಿದೆ.

ಕೇಂದ್ರ ಸರ್ಕಾರ ಆರಂಭಿಸಿರುವ ಜನಗಣತಿ ಮತ್ತು ಭಾರತೀಯ ಚುನಾವಣಾ ಆಯೋಗದಿಂದ ನಡೆಯಲಿರುವ ವಿಶೇಷ ಸಮಗ್ರ ಪರಿಷ್ಕರಣೆಯಲ್ಲಿ (ಎಸ್‌ಐಆರ್)‌ ಅಧಿಕಾರಿ ವರ್ಗ ನಿರತರಾಗುವುದರಿಂದ ಸರ್ವೋಚ್ಚ ನ್ಯಾಯಾಲಯಕ್ಕೆ ಆಯೋಗವು ಕಾಲಾವಕಾಶ ವಿಸ್ತರಣೆ ಕೋರಿ ಮೇ 11ರಂದು ಅರ್ಜಿ ಸಲ್ಲಿಸಿದೆ.

30.06.2026ರೊಳಗೆ ಐದೂ ಪಾಲಿಕೆಗಳಿಗೆ ಚುನಾವಣೆ ಪೂರ್ಣಗೊಳಿಸಲು ಆಯೋಗ, ರಾಜ್ಯ ಸರ್ಕಾರ ಮತ್ತು ಸಂಬಂಧಿತ ಇಲಾಖೆಗಳಿಗೆ ಕೊನೆಯ ಅವಕಾಶ ನೀಡಲಾಗುತ್ತಿದೆ ಎಂದು ಸುಪ್ರೀಂ ಕೋರ್ಟ್‌ ಜನವರಿ 12ರಂದು ನಿರ್ದೇಶಿಸಿತ್ತು. ಇದರ ಅನ್ವಯ ಮಾರ್ಚ್‌ 7ರಂದು ರಾಜ್ಯ ಸರ್ಕಾರವು ಐದೂ ಪಾಲಿಕೆಗಳಿಗೆ ಅಂತಿಮ ಮೀಸಲಾತಿ ಅಧಿಸೂಚನೆ ಹೊರಡಿಸಿತ್ತು ಆನಂತರ ಏಪ್ರಿಲ್‌ 18ರಂದು ಅಂತಿಮ ಮತದಾರರ ಪಟ್ಟಿಯನ್ನು ರಾಜ್ಯ ಚುನಾವಣಾ ಆಯೋಗ ಪ್ರಕಟಿಸಿತ್ತು.

ಈ ನಡುವೆ, ಏಪ್ರಿಲ್‌ 6ರಂದು ಜಿಬಿಎ ಮುಖ್ಯ ಆಯುಕ್ತ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಜನಗಣತಿ ಚಟುವಟಿಕೆಗಳು ಏಪ್ರಿಲ್‌ 16ರಿಂದ ಆರಂಭವಾಗಿ ಮೇ 15ರವರೆಗೆ ಮುಂದುವರಿಯಲಿವೆ. ಹೀಗಾಗಿ, ಚುನಾವಣೆಯನ್ನು ಸೆಪ್ಟೆಂಬರ್‌ 30ರವರೆಗೆ ವಿಸ್ತರಿಸುವಂತೆ ಕೋರಿದ್ದಾರೆ. ಭಾರತೀಯ ಚುನಾವಣಾ ಆಯೋಗವು ಎಸ್‌ಐಆರ್‌ ಪ್ರಕ್ರಿಯೆ ಆರಂಭಿಸಲಿದೆ. ಈ ಸಂದರ್ಭದಲ್ಲಿ ಜಿಬಿಎ ಬಡಿ ಬರುವ ಆಡಳಿತಾತ್ಮಕ ಸಿಬ್ಬಂದಿಯನ್ನು ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ನಿಯೋಜಿಸುವುದರಿಂದ ಐದೂ ಪಾಲಿಕೆಗಳಿಗೆ ಚುನಾವಣೆ ನಡೆಸಲು ಸಿಬ್ಬಂದಿ ಒದಗಿಸುವುದು ಕಷ್ಟ ಎಂದು ಜಿಬಿಎ ಆಯುಕ್ತರು ವಿವರಿಸಿದ್ದಾರೆ ಎಂದು ಆಯೋಗ ತಿಳಿಸಿದೆ.

ಇದರ ಬೆನ್ನಿಗೇ, ಜೂನ್‌ 30ರ ಒಳಗೆ ರಾಜ್ಯ ಸರ್ಕಾರದ ನೆರವಿನೊಂದಿಗೆ ಚುನಾವಣೆ ನಡೆಸುವಂತೆ ಸುಪ್ರೀಂ ಕೋರ್ಟ್‌ ನಿರ್ದೇಶಿಸಿರುವುದನ್ನು ಏಪ್ರಿಲ್‌ 8ರಂದು ರಾಜ್ಯ ಸರ್ಕಾರದ ಗಮನಕ್ಕೆ ತರಲಾಗಿತ್ತು. ಇದಕ್ಕೆ ಏಪ್ರಿಲ್‌ 15ರಂದು ರಾಜ್ಯ ಸಿಬ್ಬಂದಿ ಮತ್ತು ಆಡಳಿತ ಸುಧಾರಣ ಇಲಾಖೆಯ ಕಾರ್ಯದರ್ಶಿಯು ಜಿಬಿಎ ಆಯುಕ್ತರ ಪತ್ರ ಉಲ್ಲೇಖಿಸಿ, ಚುನಾವಣೆಯನ್ನು ಸೆಪ್ಟೆಂಬರ್‌ 30ರವರೆಗೆ ಮುಂದೂಡುವಂತೆ ಕೋರಿದ್ದರು. ಇದನ್ನು ಏಪ್ರಿಲ್‌ 28ರಂದು ರಾಜ್ಯ ಚುನಾವಣಾ ಆಯೋಗವು ಸುಪ್ರೀಂ ಕೋರ್ಟ್‌ ಮುಂದಿಟ್ಟಿತ್ತು ಎಂದು ವಿವರಿಸಲಾಗಿದೆ.

ಸುಪ್ರೀಂ ಕೋರ್ಟ್‌ ಗಡುವಿನ ಪ್ರಕಾರ ಚುನಾವಣೆ ನಡೆಸಲು ಆಯೋಗವು ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ರಾಜ್ಯ ಸರ್ಕಾರ ವ್ಯಕ್ತಪಡಿಸಿರುವ ಕಳಕಳಿಯು ಮೇಲ್ನೋಟಕ್ಕೆ ನೈಜವಾಗಿದ್ದು, ಚುನಾವಣೆ ನಡೆಸುವುದು ವಿಳಂಬವಾಗಲಿದೆ. ಸಮಯ ವಿಸ್ತರಣೆ ಕೋರಿರುವುದು ಪ್ರಾಮಾಣಿಕ ನಡೆಯಾಗಿದೆ ಎಂದು ಆಯೋಗವು ಅರ್ಜಿಯಲ್ಲಿ ವಿವರಿಸಿದೆ.

ಮೇ 8ರಂದು ಮತ್ತೊಮ್ಮೆ ಆಯೋಗವು ಜಿಬಿಎ ಆಯುಕ್ತರ ಜೊತೆ ನಡೆಸಿದ ಸಭೆಯಲ್ಲೂ ಚುನಾವಣೆ ಸಮಯ ವಿಸ್ತರಣೆಗೆ ಮನವಿ ಮಾಡಲಾಗಿದೆ. ಆಯೋಗವು ಚುನಾವಣೆಗೆ ಎಲ್ಲಾ ಸಿದ್ಧತೆ ಮಾಡಿಕೊಂಡಿದೆ. ಆದರೆ, ಜಿಬಿಎ ವ್ಯಾಪ್ತಿಯ ಸಿಬ್ಬಂದಿಯನ್ನು ಜನಗಣತಿ ಮತ್ತು ಎಸ್‌ಐಆರ್‌ ಪ್ರಕ್ರಿಯೆ ನಡೆಸಲು ನಿಯೋಜಿಸಿರುವುದರಿಂದ ಅವರು ಚುನಾವಣೆ ನಡೆಸಲು ಲಭ್ಯ ಇರುವುದಿಲ್ಲ. ಹೀಗಾಗಿ, ಚುನಾವಣೆ ಪೂರ್ಣಗೊಳಿಸಲು ಹೆಚ್ಚುವರಿಯಾಗಿ ಮೂರು ತಿಂಗಳು ಕಾಲಾವಕಾಶ ನೀಡಬೇಕು ಎಂದು ಸರ್ವೋಚ್ಚ ನ್ಯಾಯಾಲಯಕ್ಕೆ ಆಯೋಗ ಮನವಿ ಮಾಡಿದೆ.

2015ರಲ್ಲಿ ಕೊನೆಯ ಬಾರಿಗೆ ಬಿಬಿಎಂಪಿ ಚುನಾವಣೆ ನಡೆದಿದ್ದು, 2021ರಲ್ಲಿ ಅವಧಿ ಮುಗಿದಿತ್ತು.