Gujarat HC, Morbi Bridge 
ಸುದ್ದಿಗಳು

ಮೋರ್ಬಿ ಸೇತುವೆ ದುರಸ್ತಿಗಾಗಿ ಪಾಲಿಕೆ ಹಾಗೂ ಗುತ್ತಿಗೆದಾರ ನೇಮಿಸಿದ್ದ ಸಂಸ್ಥೆ ಅಸಮರ್ಥವಾಗಿತ್ತು: ಗುಜರಾತ್ ಹೈಕೋರ್ಟ್

ಭದ್ರತೆ ಮತ್ತು ಸುರಕ್ಷತೆ ಕುರಿತು ಸೂಕ್ತ ಪರಿಶೀಲನೆ ಮಾಡದೆ ಮೋರ್ಬಿ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು ಎಂದು ಎಸ್ಐಟಿಯ ತನಿಖೆ ಉಲ್ಲೇಖಿಸಿ ನ್ಯಾಯಾಲಯ ಹೇಳಿದೆ.

Bar & Bench

ನೂರಕ್ಕೂ ಹೆಚ್ಚು ಜನರನ್ನು ಬಲಿಪಡೆದ ಮೋರ್ಬಿ ಸೇತುವೆ ದುರಸ್ತಿ ಕಾರ್ಯಗಳನ್ನು ಮೋರ್ಬಿ ನಗರ ಪಾಲಿಕೆ (ಎಂಎನ್‌ಪಿ) ಮತ್ತು ಖಾಸಗಿ ಗುತ್ತಿಗೆದಾರ ಕಂಪೆನಿಯಾದ ಅಜಂತಾ, "ಅಸಮರ್ಥ" ಸಂಸ್ಥೆಯೊಂದಕ್ಕೆ ಹೊರಗುತ್ತಿಗೆ ನೀಡಿದ್ದವು ಎಂದು ಗುಜರಾತ್‌ ಹೈಕೋರ್ಟ್‌ ಹೇಳಿದೆ [ಗುಜರಾತ್‌ ಹೈಕೋರ್ಟ್‌ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಪಿಐಎಲ್‌ ಮತ್ತು ಗುಜರಾತ್‌ ಸರ್ಕಾರ ನಡುವಣ ಪ್ರಕರಣ].

ತೂಗುಸೇತುವೆ ದುರಂತದ ತನಿಖೆಗೆ ರಚಿಸಲಾದ ವಿಶೇಷ ತನಿಖಾ ತಂಡದ (ಎಸ್‌ಐಟಿ) ಮುಚ್ಚಿದ ಲಕೋಟೆಯಲ್ಲಿ ಸಲ್ಲಿಸಿರುವ ವರದಿ ಉಲ್ಲೇಖಿಸಿದ  ಮುಖ್ಯ ನ್ಯಾಯಮೂರ್ತಿ ಅರವಿಂದ್ ಕುಮಾರ್ ಮತ್ತು ನ್ಯಾಯಮೂರ್ತಿ ಅಶುತೋಷ್ ಜೆ ಶಾಸ್ತ್ರಿ ಅವರಿದ್ದ ಪೀಠ ಭದ್ರತೆ ಮತ್ತು ಸುರಕ್ಷತೆ ಕುರಿತು ಸೂಕ್ತ ಪರಿಶೀಲನೆ ಮಾಡದೆ ಮೋರ್ಬಿ ಸೇತುವೆಯನ್ನು ಸಾರ್ವಜನಿಕರಿಗೆ ಮುಕ್ತಗೊಳಿಸಲಾಗಿತ್ತು ಎಂದು ಹೇಳಿದೆ.

“(ತೂಗುಸೇತುವೆಯ) ಮುಖ್ಯ ಕೇಬಲ್‌ಅನ್ನು ಏಳು ಉಕ್ಕಿನ ತಂತಿಗಳನ್ನು ಸೇರಿಸಿ ತಯಾರಿಸಲಾಗಿತ್ತು ಎಂದು ಸಮಿತಿಯ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಹಾಗೆ , ಒಟ್ಟು 49 ತಂತಿಗಳನ್ನು ಬಳಸಲಾಗಿದೆ. ಅವುಗಳಲ್ಲಿ 22 ಕ್ಕೂ ಹೆಚ್ಚು ತುಕ್ಕು ಹಿಡಿದಿದದ್ದವು ಇಲ್ಲವೇ ತುಂಡಾಗಿದ್ದವು. ಉಳಿದ 27 ತಂತಿಗಳು ಇತ್ತೀಚೆಗೆ ತುಂಡಾಗಿವೆ ಸಮಿತಿಯ ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ. ಸೇತುವೆಯನ್ನು ಸಂಚಾರಕ್ಕೆ ಮುಕ್ತಗೊಳಿಸುವ ಮುನ್ನ ನಿರ್ಮಿತಿಯ ಪರೀಕ್ಷೆ ಮತ್ತು ಭಾರಹೊರುವ ಸಾಮರ್ಥ್ಯದ ಪರೀಕ್ಷೆ ಕೂಡ ನಡೆಸಿರಲಿಲ್ಲ ಎಂದು ಕಂಡುಬಂದಿದೆ. ಸೇತುವೆಯ ಅಲುಗಾಟ ಕೂಡ ನಿಯಂತ್ರಣದಲ್ಲಿರಲಿಲ್ಲ ಮತ್ತು ವಿನ್ಯಾಸದಲ್ಲಿ ದೋಷ ಇದ್ದುದರಿಂದ ಸೇತುವೆ ವಿಫಲವಾಯಿತು” ಎಂದು ಅದು ಹೇಳಿದೆ.

ಮೋರ್ಬಿಯಲ್ಲಿ 135 ಮಂದಿ ಸಾವಿಗೀಡಾಗಿ, ನೂರಾರು ಮಂದಿ ಗಾಯಗೊಂಡಿದ್ದ ತೂಗು ಸೇತುವೆಯ ದುರಂತ ತನಿಖೆಗೆಂದು ಈ ತಿಂಗಳ ಆರಂಭದಲ್ಲಿ ಪೀಠ ದಾಖಲಿಸಿಕೊಂಡಿದ್ದ ಸ್ವಯಂ ಪ್ರೇರಿತ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯ (ಪಿಐಎಲ್‌)  ವಿಚಾರಣೆ ವೇಳೆ ನ್ಯಾಯಾಲಯ ಈ ವಿಚಾರ ತಿಳಿಸಿದೆ.

ಸಾರ್ವಜನಿಕರು ಬಳಸುವ ಎಲ್ಲಾ ಕಟ್ಟಡಗಳ ನಿಯಮಿತ ಪರಿಶೀಲನೆ ಮತ್ತು ತಪಾಸಣೆಗೆ ಎಸ್‌ಐಟಿ ಶಿಫಾರಸು ಮಾಡಿದೆ. ಮುಂದಿನ ವಿಚಾರಣೆ ವೇಳೆಗೆ ಸರ್ಕಾರ ತನ್ನ ಪ್ರಸ್ತಾವಿತ ನೀತಿ ಸಾರ್ವಜನಿಕ ಬಳಕೆಯ ನಿರ್ಮಿತಿಗಳ ಸಂಖ್ಯೆಯ ಅಧಿಕೃತ ಅಂಕಿಅಂಶಗಳನ್ನು ಒದಗಿಸಬೇಕು. ಅಲ್ಲದೆ ಎಸ್‌ಐಟಿ ಶಿಫಾರಸುಗಳನ್ನು ಜಾರಿಗೆ ತರಲು ತಾನು ಕೈಗೊಂಡ ಕ್ರಮಗಳ ಕುರಿತಂತೆಯೂ ಅಫಿಡವಿಟ್‌ ಸಲ್ಲಿಸಬೇಕು ಎಂದು ನ್ಯಾಯಾಲಯ ಹೇಳಿದೆ.

ಇದಕ್ಕೆ ಪೂರಕವಾಗಿ ಸರ್ಕಾರವು ತನ್ನ ಅಫಿಡವಿಟ್‌ನಲ್ಲಿ ತ್ವರಿತವಾಗಿ ಕ್ರಮ ಕೈಗೊಳ್ಳುವ ಹಾಗೂ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಮುಂದಾಗುವ ಭರವಸೆ ನೀಡಿತು. ಆದರೆ, ನ್ಯಾಯಾಲಯವು "135 ಜನರ ಅಮೂಲ್ಯ ಜೀವ ಹೋಗಿದ್ದರೂ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಯಾವುದೇ ಆರೋಪಗಳನ್ನು ಹೊರಿಸಲಾಗಿದೆಯೇ ಎಂಬುದಕ್ಕೆ ಉತ್ತರ ದೊರೆತಿಲ್ಲ” ಎಂದು ತನ್ನ ಅಸಮಾಧಾನ ಸೂಚಿಸಿತು. ಪ್ರಕರಣದ ಮುಂದಿನ ವಿಚಾರಣೆ ಜನವರಿ 16 ರಂದು ನಡೆಯಲಿದೆ.