Delhi High Court with Agnipath scheme 
ಸುದ್ದಿಗಳು

ಅಗ್ನಿವೀರರದು ಸೈನಿಕರ ಕೆಳಗಿನ ಶ್ರೇಣಿ, ಅವರ ಸೇವೆ ಸೇನಾಪಡೆಯ ಖಾಯಂ ಸೇವೆಯ ಭಾಗವಲ್ಲ: ನ್ಯಾಯಾಲಯಕ್ಕೆ ಕೇಂದ್ರದ ವಿವರಣೆ

ನಾಲ್ಕು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಅಗ್ನಿವೀರರು ಸಶಸ್ತ್ರ ಪಡೆಗೆ ಸೇರಿದರೆ, ಅದನ್ನು ಹೊಸ ನೇಮಕಾತಿ ಎಂದು ಪರಿಗಣಿಸಲಾಗುವುದು ಎಂಬುದಾಗಿ ಸರ್ಕಾರ ಹೇಳಿದೆ.

Bar & Bench

ಅಗ್ನಿವೀರ್ ಸಂಪೂರ್ಣವಾಗಿ ಪ್ರತ್ಯೇಕ ವೃಂದವಾಗಿದ್ದು, ಭಾರತೀಯ ಸಶಸ್ತ್ರ ಪಡೆಗಳಲ್ಲಿ ಅಗ್ನಿವೀರರು ಸಲ್ಲಿಸುವ ನಾಲ್ಕು ವರ್ಷಗಳ ಸೇವೆಯನ್ನು ಭಾರತೀಯ ಸೇನೆ, ನೌಕಾಪಡೆ ಅಥವಾ ವಾಯುಪಡೆಯ ಖಾಯಂ ಸೇವೆಯ ಭಾಗವಾಗಿ ಪರಿಗಣಿಸುವುದಿಲ್ಲ ಎಂಬುದಾಗಿ ಕೇಂದ್ರ  ಸರ್ಕಾರವು ಬುಧವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ನಾಲ್ಕು ವರ್ಷದ ಅವಧಿ ಪೂರ್ಣಗೊಂಡ ಬಳಿಕ ಅಗ್ನಿವೀರರು ಸಶಸ್ತ್ರ ಪಡೆಗೆ ಸೇರಿದರೆ, ಅದನ್ನು ಹೊಸ ನೇಮಕಾತಿ ಎಂದು ಪರಿಗಣಿಸಲಾಗುವುದು. ಅಗ್ನಿವೀರನಾಗಿ ನಾಲ್ಕು ವರ್ಷಗಳ ಅವಧಿಯಲ್ಲಿ ಒಬ್ಬ ವ್ಯಕ್ತಿ ಆರಂಭಿಕ ತರಬೇತಿ ಪಡೆಯುತ್ತಾನೆ. ಮುಂದೆ ಅವನು/ಅವಳು ಸಿಪಾಯಿಯಾಗಿ ಸೈನ್ಯಕ್ಕೆ ಸೇರಿದರೆ ಉನ್ನತ ಮಟ್ಟದ ತರಬೇತಿ ಪಡೆಯಬೇಕು ಎಂಬುದು ಇದರ ಹಿಂದಿನ ತರ್ಕವಾಗಿದೆ. ವಾಸ್ತವದಲ್ಲಿ ಮುಂದಿನ ಸುಮಾರು 10-15 ವರ್ಷಗಳ ನಂತರ ಅಗ್ನಿವೀರನಲ್ಲದ ಯಾವುದೇ ಸಿಪಾಯಿ ಸೇನೆಯಲ್ಲಿ ಇರುವುದಿಲ್ಲ ಎಂದು ಸರ್ಕಾರ ಹೇಳಿದೆ.

ಮುಖ್ಯ ನ್ಯಾಯಮೂರ್ತಿ ಸತೀಶ್ ಚಂದ್ರ ಶರ್ಮಾ ಮತ್ತು ನ್ಯಾಯಮೂರ್ತಿ ಸುಬ್ರಮೋಣಿಯಂ ಪ್ರಸಾದ್ ಅವರಿದ್ದ ವಿಭಾಗೀಯ ಪೀಠದ ಮುಂದೆ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಐಶ್ವರ್ಯಾ ಭಾಟಿ ಅವರು ಈ ಅಂಶಗಳನ್ನು ಉಲ್ಲೇಖಿಸಿದರು.

ಸಮಾನ ಕೆಲಸಕ್ಕೆ ಸಮಾನ ವೇತನದ ವಿಷಯದ ಬಗ್ಗೆ ಇಂದು ಎಎಸ್‌ಜಿ ಅವರನ್ನು ಪ್ರಶ್ನಿಸಿದ ನ್ಯಾಯಾಲಯ, ಅಗ್ನಿವೀರನ ಜವಾಬ್ದಾರಿಯು ಸಿಪಾಯಿಯಂತೆಯೇ ಇದ್ದರೆ, ಅದೇ ಕೆಲಸಕ್ಕೆ ಅವರಿಗೆ ಕಡಿಮೆ ವೇತನವನ್ನು ಹೇಗೆ ನೀಡುತ್ತೀರಿ ಎಂದು ಪ್ರಶ್ನಿಸಿತು. ಇದಕ್ಕೆ ಎಎಸ್‌ಜಿ ಅವರು ಇವರಿಬ್ಬರ ನಡುವಿನ ಜವಾಬ್ದಾರಿ ಒಂದೇ ಆಗಿರುವುದಿಲ್ಲ, ಅಗ್ನಿವೀರರು ಸಿಪಾಯಿಗಳಿಗೆ ಪ್ರಣಾಮ ಸಲ್ಲಿಸಬೇಕಾಗುತ್ತದೆ ಎಂದು ತಿಳಿಸಿದರು. ಆಗ ಅದನ್ನು ಅಫಿಡವಿಟ್‌ನಲ್ಲಿ ಉಲ್ಲೇಖಿಸುವಂತೆ ನ್ಯಾಯಾಲಯ ಸೂಚಿಸಿತು.

ನಾಲ್ಕು ವರ್ಷಗಳು ಪೂರ್ಣಗೊಂಡ ನಂತರ ಸೇನಾ ಪಡೆಗಳಿಗೆ ಸೇರ್ಪಡೆಯಾಗದ 75% ಅಗ್ನಿವೀರ ಯುವಕರನ್ನು ಹೇಗೆ ಬಳಸಿಕೊಳ್ಳಬೇಕು ಎನ್ನುವ ಬಗ್ಗೆ ಸರ್ಕಾರದ ಬಳಿ ಏನು ಯೋಜನೆ ಇದೆ ಎಂದು ನ್ಯಾಯಮೂರ್ತಿ ಪ್ರಸಾದ್ ಪ್ರಶ್ನಿಸಿದರು. ಶಸ್ತ್ರಾಸ್ತ್ರ ತರಬೇತಿ ಪಡೆದ ಈ ಯುವಕರು ನಾಲ್ಕು ವರ್ಷಗಳ ನಂತರ ನಿರುದ್ಯೋಗಿಗಳಾಗುತ್ತಾರೆ ಅಲ್ಲವೇ ಎಂದು ಅವರು ಕೇಳಿದರು.

ಆಗ ನಿವೃತ್ತ ಅಗ್ನಿವೀರರಿಗೆ ವಿವಿಧ ಕ್ಷೇತ್ರಗಳಲ್ಲಿ ಮೀಸಲಾತಿ ನೀಡಲು ಸರ್ಕಾರ ಯೋಜಿಸಿದೆ ಎಂದು ಎಎಸ್‌ಜಿ ಹೇಳಿದರು. ಮೀಸಲಾತಿಯ ಹೊರತಾಗಿ, ಅಗ್ನಿವೀರರಿಗೆ ಸಾಕಷ್ಟು ತಾಂತ್ರಿಕ ಪರಿಣತಿಯನ್ನು ಸಹ ಒದಗಿಸಲಾಗುವುದು. ಅವರಿಗೆ 10 ಮತ್ತು 12ನೇ ತರಗತಿ ಪದವಿಗಳನ್ನು ನೀಡಲು ನಿಯಮಾವಳಿ ರೂಪಿಸಲಾಗಿದೆ ಎಂದು ಅವರು ವಿವರಿಸಿದರು.

ಅಗ್ನಿಪಥ್‌ ಯೋಜನೆಯಿಂದಾಗಿ ನೇಮಕಾತಿ ಅಂತಿಮಗೊಳ್ಳದ ಅರ್ಜಿದಾರರೊಬ್ಬರ ಪರವಾಗಿ ವಕೀಲರಾದ ಪ್ರಶಾಂತ್ ಭೂಷಣ್ ಮತ್ತು ಅಂಕುರ್ ಚಿಬ್ಬರ್ ವಾದ ಮಂಡಿಸಿದರು. ಅಗ್ನಿಪಥ್‌ ಯೋಜನೆಯಿಂದ ಉಂಟಾದ ತೊಂದರೆಗಳನ್ನು ವಿವರಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಎಎಸ್‌ಜಿ ಅಗ್ನಿಪಥ್‌ಗಾಗಿ ಸೇನಾ ನೇಮಕಾತಿ ಪ್ರಕ್ರಿಯೆ ತಡೆಹಿಡಿದಿಲ್ಲ. ಎಲ್ಲೆಲ್ಲಿ ಅದನ್ನು ಅಂತಿಮಗೊಳಿಸಬೇಕೋ ಅಲ್ಲೆಲ್ಲಾ ಅಂತಿಮಗೊಳಿಸಲಾಗಿದೆ ಎಂದರು. ಆದರೆ ಈ ವಾದ ತೀರಾ ಅಸ್ಪಷ್ಟವಾಗಿದೆ ಎಂದು ನ್ಯಾಯಾಲಯ ಹೇಳಿತು.

ಆದ್ದರಿಂದ, ಪ್ರಕರಣದ ಬಗ್ಗೆ ಸಂಬಂಧಪಟ್ಟವರಿಂದ ಸೂಚನೆಗಳನ್ನು ತೆಗೆದುಕೊಳ್ಳುವಂತೆ ಭಾಟಿ ಅವರಿಗೆ ಸೂಚಿಸಿದ ನ್ಯಾಯಾಲಯವು ಗುರುವಾರ (ನಾಳೆ) ಮುಂದಿನ ವಿಚಾರಣೆಗೆ ಪ್ರಕರಣವನ್ನು ಪಟ್ಟಿ ಮಾಡಿದೆ.