Kerala High Court  
ಸುದ್ದಿಗಳು

ಅತ್ಯಾಚಾರ ಪ್ರಕರಣ ಇತ್ಯರ್ಥಪಡಿಸಿಕೊಳ್ಳುವ ಒಪ್ಪಂದ ಅನೂರ್ಜಿತ, ಸಾರ್ವಜನಿಕ ನೀತಿಗೆ ವಿರುದ್ಧ: ಕೇರಳ ಹೈಕೋರ್ಟ್

ಕೊಲೆ, ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಂತಹ ಸಾರ್ವಜನಿಕ ಅಪರಾಧಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಒಪ್ಪಂದಗಳಿಗೆ ಇರುವ ಕಾನೂನುಬದ್ಧತೆಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

Bar & Bench

ಸಾರ್ವಜನಿಕ ನೀತಿಗೆ ವಿರುದ್ಧವಾದ ಕಾರಣ ಅತ್ಯಾಚಾರ ಪ್ರಕರಣವನ್ನು ಇತ್ಯರ್ಥಪಡಿಸಿಕೊಳ್ಳುವ ಒಪ್ಪಂದ ಅನೂರ್ಜಿತವಾದುದು ಎಂದು ಕೇರಳ ಹೈಕೋರ್ಟ್ ಇತ್ತೀಚೆಗೆ ತೀರ್ಪು ನೀಡಿದೆ [ಅಬ್ದುಲ್ ಜಲೀಲ್ ಮತ್ತು ಕೇರಳ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ಹಿನ್ನೆಲೆಯಲ್ಲಿ, ಅತ್ಯಾಚಾರಕ್ಕೊಳಗಾದ ಸಂತ್ರಸ್ತೆ ಹಾಗೂ ಆರೋಪಿ ನಡುವೆ ಒಪ್ಪಂದ ಏರ್ಪಟ್ಟಿದ್ದು ಇದರ ಆಧಾರದಲ್ಲಿ ಅತ್ಯಾಚಾರ ಪ್ರಕರಣ ರದ್ದುಗೊಳಿಸಬೇಕು ಎಂದು ಕೋರಿದ್ದ ಮನವಿಯೊಂದನ್ನು ನ್ಯಾಯಮೂರ್ತಿ ಎ ಬದರುದ್ದೀನ್‌ ತಿರಸ್ಕರಿಸಿದರು.

ಅತ್ಯಾಚಾರ ಪ್ರಕರಣವನ್ನು ರದ್ದುಗೊಳಿಸುವಂತೆ ಕೋರಿದ್ದ ಅರ್ಜಿಯಲ್ಲಿ, ಕೊಲೆ, ಅತ್ಯಾಚಾರ ಮತ್ತು ಮಕ್ಕಳ ಮೇಲಿನ ದೌರ್ಜನ್ಯಗಳಂತಹ ಸಾರ್ವಜನಿಕ ಅಪರಾಧಗಳನ್ನು ಇತ್ಯರ್ಥಗೊಳಿಸಿಕೊಳ್ಳುವ ಒಪ್ಪಂದಗಳಿಗೆ ಇರುವ ಕಾನೂನುಬದ್ಧತೆಯನ್ನು ನ್ಯಾಯಾಲಯ ಗಣನೆಗೆ ತೆಗೆದುಕೊಂಡಿದೆ.

 “ಇಂತಹ ಯಾವುದೇ ಒಪ್ಪಂದ ಸಾರ್ವಜನಿಕ ನೀತಿಗೆ ವಿರುದ್ಧವಾಗಿರುವುದರಿಂದ ಅದು ಅನೂರ್ಜಿತವಾದುದು ಎಂಬುದು ಈಗಾಗಲೇ ಸ್ಥಾಪಿತವಾದ ಕಾನೂನಾಗಿದೆ. ಅದೇ ರೀತಿ ಕಾನೂನು ಕ್ರಮ ಜರುಗದಂತೆ ಮಾಡಿಕೊಳ್ಳಲಾಗುವ ಒಪ್ಪಂದ ಸಾರ್ವಜನಿಕ ಅಪರಾಧವನ್ನು ಒಳಗೊಂಡ ವಿಚಾರಣೆಯನ್ನು ನಿಗ್ರಹಿಸುವುದರ ಹೊರತಾಗಿ ಬೇರೇನೂ ಅಲ್ಲ. ಇದು ಸಾರ್ವಜನಿಕ ನೀತಿಗೆ ವಿರುದ್ಧ” ಎಂದು ನ್ಯಾಯಾಲಯ ನುಡಿದಿದೆ.

ಗ್ರಾಮ ಪಂಚಾಯಿತಿಯೊಂದರ ಸಹಾಯಕ ಕಾರ್ಯದರ್ಶಿಯಾಗಿದ್ದ ಆರೋಪಿ ಅಬ್ದುಲ್ ಜಲೀಲ್ (54) ಎಂಬಾತ 2016ರ ಮಾರ್ಚ್ 13ರಂದು ಪಿರ್ಯಾದಿದಾರರಾದ ಅಲ್ಲಿನ ಉದ್ಯೋಗಿಯೊಬ್ಬರನ್ನು ತುರ್ತು ಕೆಲಸದ ನಿಮಿತ್ತ ಕಚೇರಿಗೆ ಕರೆದೊಯ್ದಾಗ ಅತ್ಯಾಚಾರವೆಸಗಿದ್ದ. ಮದುವೆಯಾಗುವುದಾಗಿ ನಂಬಿಸಿ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಬಳಿಕ ಆತನ ವಿರುದ್ಧ ಪ್ರಕರಣ ದಾಖಲಾಗಿತ್ತು.

ಆದರೆ ಇದನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದ ಆತ ಹಣ ಸುಲಿಗೆ ಮಾಡುವುದಕ್ಕಾಗಿ ಈ ಪ್ರಕರಣದಲ್ಲಿ ತನ್ನನ್ನು ಸುಳ್ಳೇ ಸಿಲುಕಿಸಲಾಗಿದೆ ಎಂದಿದ್ದ. ತನ್ನ ವಾದ ಸಮರ್ಥಿಸಲು ಆತ ಸಂತ್ರಸ್ತೆಯೊಂದಿಗೆ ಮಾಡಿಕೊಂಡ ಎರಡು ಒಪ್ಪಂದಗಳನ್ನು ನ್ಯಾಯಾಲಯದೆದುರು ಪ್ರಸ್ತಾಪಿಸಿದ್ದ. ತಾನು ಲೈಂಗಿಕ ಸಂಭೋಗ ನಡೆಸಿದ್ದರೂ ಅದು ಸಹಮತದ ಸಂಬಂಧವಾಗಿತ್ತು ಎಂದಿದ್ದ. ಆದರೆ ಒಪ್ಪಂದ ಏರ್ಪಟ್ಟಿದೆ ಎಂದ ಮಾತ್ರಕ್ಕೆ ಪ್ರಕರಣ ರದ್ದುಗೊಳಿಸಲಾಗದು ಎಂದು ಪ್ರಾಸಿಕ್ಯೂಷನ್‌ ವಾದಿಸಿತ್ತು.

ವಾದ ಆಲಿಸಿದ ನ್ಯಾಯಾಲಯ ಈ ಘಟನೆಯನ್ನು ಒಮ್ಮತದಿಂದ ನಡೆದ ಘಟನೆಯ ವ್ಯಾಪ್ತಿಗೆ ತರಲಾಗದು. ಅತ್ಯಾಚಾರದ ಗಂಭೀರ ಅಪರಾಧದಲ್ಲಿ ವಿಚಾರಣೆಯನ್ನು ಹತ್ತಿಕ್ಕಲು ಒಪ್ಪಂದ ಉದ್ದೇಶಿಸಿದೆ. ಹೀಗಾಗಿ ಅದು  ಕಾನೂನುಬಾಹಿರವಾಗಿದ್ದು ವಿಚಾರಣೆ ರದ್ದುಗೊಳಿಸಲು ಏಕೈಕ ಆಧಾರವಾಗಿ ಈ ಒಪ್ಪಂದವನ್ನು ಪರಿಗಣಿಸಲಾಗದು ಎಂದಿತು.