<div class="paragraphs"><p>High Court of Karnataka</p></div>

High Court of Karnataka

 
ಸುದ್ದಿಗಳು

ಆಗ್ರಿಗೋಲ್ಡ್‌ ಪ್ರಕರಣ: ತಪ್ಪು ಮಾಹಿತಿ ನೀಡಿ ವಿಚಾರಣೆ ವಿಳಂಬಕ್ಕೆ ಕಾರಣರಾದ ಅಧಿಕಾರಿ ಹಾಜರಿಗೆ ಹೈಕೋರ್ಟ್‌ ಸೂಚನೆ

Bar & Bench

ಅಗ್ರಿಗೋಲ್ಡ್‌ ಬಹುಕೋಟಿ ವಂಚನೆ ಪ್ರಕರಣದಲ್ಲಿ ಹೈಕೋರ್ಟ್‌ಗೆ ತಪ್ಪು ಮಾಹಿತಿ ನೀಡಿ ಪ್ರಕರಣವನ್ನು ನಾಲ್ಕು ಬಾರಿ ಮುಂದೂಡಲು ಕಾರಣರಾದ ರಾಮನಗರದ ಉಪವಿಭಾಗಾಧಿಕಾರಿ ಅವರಿಗೆ ಮುಂದಿನ ವಿಚಾರಣೆ ವೇಳೆ ಖುದ್ದು ಹಾಜರಾಗಿ ವಿವರಣೆ ನಿಡುವಂತೆ ಹೈಕೋರ್ಟ್‌ ಆದೇಶಿಸಿದೆ.

ಮಂಗಳೂರಿನ ಆಗ್ರಿ ಗೋಲ್ಡ್ ಗ್ರಾಹಕರು ಮತ್ತು ಏಜೆಂಟ್‌ರ ಕಲ್ಯಾಣ ಒಕ್ಕೂಟ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ರಿತುರಾಜ್ ಅವಸ್ಥಿ ಹಾಗೂ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಪೀಠ ಗುರುವಾರ ವಿಚಾರಣೆ ನಡೆಸಿತು. ಈ ವೇಳೆ ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವ ಅಂಶವನ್ನು ಖುದ್ದು ಸರ್ಕಾರವೇ ಪೀಠದ ಗಮನಕ್ಕೆ ತಂದಿತು.

ಗರಿಷ್ಠ ಲಾಭದ ಆಸೆ ತೋರಿಸಿ ಹೂಡಿಕೆದಾರರಿಂದ ಹಣ ಪಡೆದು ವಂಚನೆ ಎಸಗಿರುವ ಆರೋಪ ಆಗ್ರಿಗೋಲ್ಡ್‌ ಮೇಲಿದೆ. ಬಹುರಾಜ್ಯಗಳಿಗೆ ಸೇರಿದ ಈ ಹಗರಣದ ಪ್ರಕರಣಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ರಾಮನಗರದ ಉಪವಿಭಾಗಾಧಿಕಾರಿ ಈ ಹಿಂದೆ ಹೈಕೋರ್ಟ್‌ಗೆ ಮಾಹಿತಿ ನೀಡಿದ್ದರು.

ಹಿನ್ನೆಲೆ:

ಅರ್ಜಿದಾರರ ಪರ ವಕೀಲ ಬಿ.ಎಸ್.ಸಚಿನ್ ಹಾಜರಾಗಿ, ಇದೊಂದು ಬಹುರಾಜ್ಯ ಹಗರಣವಾಗಿದ್ದು, ಅಗ್ರಿಗೋಲ್ಡ್ ಕಂಪನಿ ವಿರುದ್ಧ ಕರ್ನಾಟಕ, ತೆಲಂಗಾಣ ಸೇರಿ ದೇಶದ ಇತರ ರಾಜ್ಯಗಳ ನ್ಯಾಯಾಲಯಗಳಲ್ಲಿ ವಿಚಾರಣೆ ನಡೆಯುತ್ತಿದೆ. ಆದ್ದರಿಂದ, ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದು ನ್ಯಾಯಾಲಯ ಸ್ಥಾಪಿಸಲು ನಿರ್ದೇಶಿಸುವಂತೆ ಕೋರಿ ಸರ್ಕಾರ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಆ ಅರ್ಜಿಗೆ ಸಂಬಂಧಿಸಿದ ವಸ್ತುಸ್ಥಿತಿ ವರದಿಯನ್ನು ಸರ್ಕಾರ ನ್ಯಾಯಾಲಯಕ್ಕೆ ಸಲ್ಲಿಸಬೇಕಿದೆ ಎಂದು ತಿಳಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಸರ್ಕಾರದ ಪರ ವಕೀಲರು, ಹಿಂದೆ ರಾಮನಗರ ಉಪ ವಿಭಾಗಾಧಿಕಾರಿ ಕಚೇರಿಯಿಂದ ಬಂದ ಮಾಹಿತಿಯಂತೆ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಗಿತ್ತು. ಆದರೆ, ಈ ಬಗ್ಗೆ ಪರಿಶೀಲಿಸಿದಾಗ ಉಡುಪಿ ಕೋರ್ಟ್‌ನಲ್ಲಿ ಮಾತ್ರ ಪ್ರಕರಣ ಬಾಕಿ ಇದ್ದು, ಸುಪ್ರೀಂಕೋರ್ಟ್‌ನಲ್ಲಿ ಯಾವುದೇ ಅರ್ಜಿ ಸಲ್ಲಿಸಿಲ್ಲ, ಅಲ್ಲಿ ಯಾವ ಅರ್ಜಿಯೂ ವಿಚಾರಣೆಗೆ ಬಾಕಿ ಇಲ್ಲ ಎಂದು ತಿಳಿಸಿದರು.

ನ್ಯಾಯಾಲಯಕ್ಕೆ ತಪ್ಪು ಮಾಹಿತಿ ನೀಡಿರುವುದನ್ನು ಗಂಭೀರವಾಗಿ ಪರಿಗಣಿಸಿದ ಪೀಠವು, ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇದೆ ಎಂಬ ಕಾರಣ ನೀಡಿ ಸರ್ಕಾರ ಅರ್ಜಿಯನ್ನು ನಾಲ್ಕು ಬಾರಿ ಮುಂದೂಡುವಂತೆ ಮಾಡಿದೆ. ಇದರಿಂದ, ಅರ್ಜಿ ವಿಚಾರಣೆ 6 ತಿಂಗಳು ವಿಳಂಬವಾಗಿದೆ. ಇಂದು ಸರ್ಕಾರದ ಪರ ವಕೀಲರು ಸುಪ್ರೀಂಕೋರ್ಟ್‌ಗೆ ಯಾವುದೇ ಅರ್ಜಿ ಸಲ್ಲಿಸಿಲ್ಲ, ಯಾವ ಅರ್ಜಿಯೂ ಅಲ್ಲಿ ವಿಚಾರಣೆಗೆ ಬಾಕಿ ಇಲ್ಲ ಎಂದು ಹೇಳುತ್ತಿದ್ದಾರೆ. ಆದ್ದರಿಂದ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಲಾಗಿದೆ ಎಂದು ಮಾಹಿತಿ ನೀಡಿದ್ದ ರಾಮನಗರ ಉಪ ವಿಭಾಗಾಧಿಕಾರಿ ಖುದ್ದು ನ್ಯಾಯಾಲಯಕ್ಕೆ ಹಾಜರಾಗಿ ತಮ್ಮ ವರ್ತನೆ ಬಗ್ಗೆ ವಿವರಣೆ ನೀಡಬೇಕು ಎಂದು ಪೀಠ ಆದೇಶಿಸಿತು. ವಿಚಾರಣೆಯನ್ನು ಮಾರ್ಚ್10ಕ್ಕೆ ಮುಂದೂಡಿತು.

ಹೂಡಿಕೆದಾರರ ಹಿತರಕ್ಷಣೆಗೆ ಸುಪ್ರೀಂಗೆ ಅರ್ಜಿ ಸಲ್ಲಿಸಲು ಸೂಚಿಸಿದ್ದ ಹೈಕೋರ್ಟ್‌:

ಕಳೆದ ವರ್ಷ ಜುಲೈ 6ರಂದು ನಡೆದಿದ್ದ ಅರ್ಜಿ ವಿಚಾರಣೆಗೆ ಹಾಜರಾಗಿದ್ದ ಸಕ್ಷಮ ಪ್ರಾಧಿಕಾರದ ಅಧಿಕಾರಿ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಸೇರಿ ಇತರ ರಾಜ್ಯಗಳಲ್ಲಿ ಅಗ್ರಿಗೋಲ್ಡ್ ಕಂಪನಿಯ ಅವ್ಯವಹಾರ ನಡೆದಿದೆ. ಅಲ್ಲಿಯೂ ಪ್ರಕರಣಗಳ ವಿಚಾರಣೆ ನಡೆಯುತ್ತಿದ್ದು, ಕಂಪನಿಗೆ ಸೇರಿದ ಒಟ್ಟು 290 ಆಸ್ತಿಗಳನ್ನು ತೆಲಂಗಾಣ ಸರ್ಕಾರ ಜಪ್ತಿ ಮಾಡಿದೆ ಎಂದು ತಿಳಿಸಿದ್ದರು. ಅಲ್ಲದೆ, ಕಂಪನಿಯಲ್ಲಿ ಅಂದಾಜು 32 ಲಕ್ಷ ಹೂಡಿಕೆದಾರರಿದ್ದು, ರಾಜ್ಯದ 8.8 ಲಕ್ಷ ಹೂಡಿಕೆದಾರರು ವಿವಿಧ ಶಾಖೆಗಳಲ್ಲಿ ಹಣ ಹೂಡಿಕೆ ಮಾಡಿದ್ದಾರೆ. ಆದ್ದರಿಂದ, ಎಲ್ಲ ಪ್ರಕರಣಗಳ ವಿಚಾರಣೆಗೆ ಒಂದು ನೋಡಲ್ ರಾಜ್ಯ ಹಾಗೂ ಒಂದು ನ್ಯಾಯಾಲಯ ಸ್ಥಾಪನೆಗೆ ಕೋರಿ ಸುಪ್ರೀಂಕೊರ್ಟ್‌ಗೆ ಅರ್ಜಿ ಸಲ್ಲಿಸುವುದಾಗಿ ತಿಳಿಸಿದ್ದರು.

ಬಹುರಾಜ್ಯಗಳನ್ನು ಒಳಗೊಂಡ ಹಗರಣವಾದ ಹಿನ್ನೆಲೆಯಲ್ಲಿ ಸಕ್ಷಮ ಪ್ರಾಧಿಕಾರದ ಹೇಳಿಕೆಯನ್ನು ಪರಿಗಣಿಸಿದ್ದ ಹೈಕೋರ್ಟ್, ಹೂಡಿಕೆದಾರರ ಹಿತರಕ್ಷಣೆಗಾಗಿ ಕೂಡಲೇ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಸರ್ಕಾರ ಹಾಗೂ ಸಕ್ಷಮ ಪ್ರಾಧಿಕಾರಕ್ಕೆ ಸೂಚಿಸಿತ್ತು. ಅದಾದ ಬಳಿಕ, ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದಾಗಿ ತಿಳಿಸಿದ್ದ ಸರ್ಕಾರ, ಅಲ್ಲಿ ಅರ್ಜಿ ವಿಚಾರಣೆಗೆ ಬಾಕಿ ಇರುವ ಕಾರಣ ನೀಡಿ, ನಾಲ್ಕು ಬಾರಿ ಪ್ರಕರಣದ ಮುಂದೂಡಿಕೆಗೆ ಕಾರಣವಾಗಿತ್ತು.