Christian Michel
Christian Michel 
ಸುದ್ದಿಗಳು

[ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹಗರಣ] ಕ್ರಿಶ್ಚಿಯನ್‌ ಮಿಷೆಲ್‌ ಜಾಮೀನು ಮನವಿ ವಜಾ ಮಾಡಿದ ದೆಹಲಿ ನ್ಯಾಯಾಲಯ

Bar & Bench

ಅಗಸ್ಟಾ ವೆಸ್ಟ್‌ಲ್ಯಾಂಡ್‌ ಹೆಲಿಕಾಪ್ಟರ್‌ ಖರೀದಿ ಹಗರಣದ ಆರೋಪಿ ಕ್ರಿಶ್ಚಿಯನ್‌ ಮಿಷೆಲ್‌ ಜಾಮೀನು ಮನವಿಯನ್ನು ಶುಕ್ರವಾರ ದೆಹಲಿಯ ರೋಸ್‌ ಅವೆನ್ಯೂ ಜಿಲ್ಲಾ ನ್ಯಾಯಾಲಯ ವಜಾ ಮಾಡಿದೆ. ಈ ಸಂಬಂಧ ವಿಶೇಷ ಸಿಬಿಐ ನ್ಯಾಯಾಧೀಶ ಅರವಿಂದ್‌ ಕುಮಾರ್‌ ಆದೇಶ ಹೊರಡಿಸಿದ್ದಾರೆ.

ಪ್ರಸಕ್ತ ವರ್ಷದ ಏಪ್ರಿಲ್‌ನಲ್ಲಿ ಮಿಷೆಲ್‌ ಜಾಮೀನಿಗೆ ಸಂಬಂಧಿಸಿದಂತೆ ಕೇಂದ್ರೀಯ ತನಿಖಾ ದಳ (ಸಿಬಿಐ) ಮತ್ತು ಜಾರಿ ನಿರ್ದೇಶನಾಲಯದ (ಇ ಡಿ) ಪ್ರತಿಕ್ರಿಯೆಯನ್ನು ನ್ಯಾಯಾಲಯ ಬಯಸಿತ್ತು.

ತನ್ನ ಬಂಧನ, ಗಡಿಪಾರು ಮತ್ತು ಕಸ್ಟಡಿಯು ಕಾನೂನುಬಾಹಿರವಾಗಿದ್ದು, ಇದೇ ಪ್ರಕರಣದಲ್ಲಿ ಇಟಲಿ ನ್ಯಾಯಾಲಯ ತನ್ನನ್ನು ಖುಲಾಸೆಗೊಳಿಸಿದೆ ಎಂದು ತಮ್ಮ ಮನವಿಯಲ್ಲಿ ಕ್ರಿಶ್ಚಿಯನ್‌ ಮಿಷೆಲ್‌ ಉಲ್ಲೇಖಿಸಿದ್ದರು.

“ಒಂದೇ ಅಪರಾಧಕ್ಕೆ ಒಬ್ಬ ವ್ಯಕ್ತಿಯನ್ನು ಒಂದಕ್ಕಿಂತ ಹೆಚ್ಚು ಬಾರಿ ವಿಚಾರಣೆಗೆ ಒಳಪಡಿಸಬಾರದು ಎಂದು ಭಾರತ ಸಂವಿಧಾನದ 20 (2)ನೇ ವಿಧಿಯಲ್ಲಿ ಉಲ್ಲೇಖಿಸಲಾಗಿದೆ. ವಿಶ್ವಸಂಸ್ಥೆಯ ದೇಶೀಯ ಸಂಘಟಿತ ಅಪರಾಧ ಒಪ್ಪಂದ ಮತ್ತು ಭಾರತ ಸಂವಿಧಾನದ 20 (2)ನೇ ವಿಧಿಯನ್ನು ಒಟ್ಟಾಗಿ ಇರಿಸಿ ಓದಿದರೆ ಅವು ಒಂದನ್ನು ಒಂದು ಮೀರುವುದಿಲ್ಲ. ಇದೊಂದೇ ಆಧಾರದಲ್ಲಿ ಅರ್ಜಿದಾರರ ವಿಚಾರಣೆ ಕಾನೂನಿನ ಎದುರು ನಿಲ್ಲುವುದಿಲ್ಲ” ಎಂದು ಮಿಷಲ್‌ ಹೇಳಿದ್ದರು.

ತಮ್ಮ ಕಾನೂನುಬಾಹಿರ ಬಂಧನದ ವಿಚಾರವನ್ನು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಯ ಸ್ವೇಚ್ಛೆಯ ಬಂಧನ ಕಾರ್ಯಾಚರಣೆ ಸಮೂಹದ ಗಮನಕ್ಕೆ ತರಲಾಗಿದೆ. “ನನಗೆ ಸ್ವಾತಂತ್ರ್ಯ ನಿರಾಕರಿಸಿರುವುದು ಜಾಗತಿಕ ಮಾನವ ಹಕ್ಕುಗಳ ಘೋಷಣೆಯ 3, 9, 10 ಮತ್ತು 11 (1)ನೇ ವಿಧಿಗೆ ಮತ್ತು ಅಂತಾರಾಷ್ಟ್ರೀಯ ನಾಗರಿಕ ಮತ್ತು ರಾಜಕೀಯ ಹಕ್ಕುಗಳ ಒಪ್ಪಂದದ 9 (3); 10 (1); ಮತ್ತು 14 (1)–(2) ಮತ್ತು (3) (ಬಿ)–(ಡಿ) ಮತ್ತು (ಜಿ) ವಿಧಿಗೆ ವಿರುದ್ಧವಾಗಿದೆ” ಎಂದು ಆ ಸಂಸ್ಥೆ ಹೇಳಿದೆ ಎಂದು ವಿವರಿಸಿದ್ದರು.

ಸಿಬಿಐ ಮತ್ತು ಇ.ಡಿ ಎರಡೂ ಸಂಸ್ಥೆಗಳ ಅಡಿ 600 ಗಂಟೆಗೂ ಅಧಿಕ ಕಾಲ ಕಸ್ಟಡಿ ವಿಚಾರಣೆ ಎದುರಿಸಿದ್ದೇನೆ. ಎರಡು ವರ್ಷ ನಾಲ್ಕು ತಿಂಗಳನ್ನು ಭಾರತದ ಜೈಲಿನಲ್ಲಿ ಕಳೆದಿದ್ದೇನೆ ಎಂದು ಮಿಷೆಲ್‌ ವಿವರಿಸಿದ್ದಾರೆ. ವಿಚಾರಣೆಗೆ ಯಾವಾಗ ಕರೆದರೂ ಬರುವುದಾಗಿಯೂ ಅವರು ತಿಳಿಸಿದ್ದರು.

ಸಾಕ್ಷಿಗಳನ್ನು ಪ್ರಭಾವಿಸುವುದಾಗಲಿ ಅಥವಾ ಅವನ್ನು ನಾಶ ಅಥವಾ ಮಲಿನ ಅಥವಾ ಬೆದರಿಸುವ ಕೆಲಸವನ್ನು ಮಾಡಿಲ್ಲ. ನ್ಯಾಯಿಕ ಪ್ರಕ್ರಿಯೆಗೂ ಅಡ್ಡಿಪಡಿಸಿಲ್ಲ. ಮುಂದೆಯೂ ಅದನ್ನು ಮಾಡುವುದಿಲ್ಲ ಎಂದಿದ್ದರು.

ಭಾರತ ಸರ್ಕಾರವು ಅತಿಗಣ್ಯರ ಓಡಾಟಕ್ಕಾಗಿ ಹೆಲಿಕಾಪ್ಟರ್‌ ಖರೀದಿಗೆ ಸಂಬಂಧಿಸಿದಂತೆ 42.27 ಯುರೋ ಮಿಲಿಯನ್‌ ಕಮಿಷನ್‌/ಲಂಚವನ್ನು ಶಾಸನಬದ್ಧಗೊಳಿಸುವ ಉದ್ದೇಶದಿಂದ ಅಗಸ್ಟಾ ವೆಸ್ಟ್‌ಲ್ಯಾಂಡ್‌ ಜೊತೆ ಹನ್ನೆರಡು ಒಪ್ಪಂದ ಮಾಡಿಕೊಂಡಿದ್ದ ಆರೋಪಕ್ಕೆ ಕ್ರಿಶ್ಚಿಯನ್‌ ಮಿಷೆಲ್‌ ಗುರಿಯಾಗಿದ್ದಾರೆ.

ದುಬೈನಿಂದ ಭಾರತಕ್ಕೆ ಗಡಿಪಾರು ಮಾಡಲಾದ ನಂತರ ಮಿಷೆಲ್‌ ಅವರನ್ನು 2018ರ ಡಿಸೆಂಬರ್‌ 5ರಂದು ಸಿಬಿಐ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿತ್ತು. ಆ ಬಳಿಕ ಅವರನ್ನು ಸಿಬಿಐ ವಶಕ್ಕೆ ನೀಡಲಾಗಿತ್ತು. 2018ರ ಡಿಸೆಂಬರ್‌ 22ರಂದು ಮಿಷೆಲ್‌ ಅವರನ್ನು ಏಳು ದಿನಗಳ ಕಾಲ ಜಾರಿ ನಿರ್ದೇಶನಾಲಯದ ವಶಕ್ಕೆ ನೀಡಿ ಸಿಬಿಐ ನ್ಯಾಯಾಲಯ ಆದೇಶ ನೀಡಿತ್ತು. 2019ರ ಜನವರಿ 5ರಂದು ಕ್ರಿಶ್ಚಿಯನ್‌ ಮಿಷಲ್‌ರನ್ನು ತಿಹಾರ್‌ ಜೈಲಿನಲ್ಲಿಡಲಾಗಿದ್ದು, ಅಂದಿನಿಂದ ಈಗಿನವರೆಗೆ ಬಂಧಿಯಾಗಿದ್ದಾರೆ.