Christian Michel 
ಸುದ್ದಿಗಳು

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣ: ಮಿಶೆಲ್‌ ಜಾಮೀನು ಅರ್ಜಿ ಕುರಿತು‌ ಪ್ರತಿಕ್ರಿಯೆ ಕೇಳಿದ ಸುಪ್ರೀಂ ಕೋರ್ಟ್‌

ಆರೋಪಿ ಈಗಾಗಲೇ 4 ವರ್ಷ ಜೈಲುವಾಸ ಅನುಭವಿಸಿದ್ದು,ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಮತ್ತು ಪಿ ಎಸ್ ನರಸಿಂಹ ಅವರನ್ನೊಳಗೊಂಡ ಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ.

Bar & Bench

ಅಗಸ್ಟಾ ವೆಸ್ಟ್‌ಲ್ಯಾಂಡ್ ಹಗರಣದ ಆರೋಪಿ ಕ್ರಿಶ್ಚಿಯನ್ ಮಿಶೆಲ್ ಸಲ್ಲಿಸಿರುವ ಜಾಮೀನು ಅರ್ಜಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಸಿಬಿಐ ಮತ್ತು ಜಾರಿ ನಿರ್ದೇಶನಾಲಯದ (ಇ ಡಿ) ಪ್ರತಿಕ್ರಿಯೆ ಕೇಳಿದೆ [ಕ್ರಿಶ್ಚಿಯನ್ ಮಿಶೆಲ್‌ ಮತ್ತು ಸಿಬಿಐ ನಡುವಣ ಪ್ರಕರಣ].

ಆರೋಪಿ ಈಗಾಗಲೇ 4 ವರ್ಷ ಜೈಲುವಾಸ ಅನುಭವಿಸಿದ್ದು,ನ್ಯಾಯಮೂರ್ತಿಗಳಾದ ಡಿ ವೈ ಚಂದ್ರಚೂಡ್, ಸೂರ್ಯಕಾಂತ್ ಹಾಗೂ ಪಿ ಎಸ್ ನರಸಿಂಹ ಅವರಿದ್ದ ತ್ರಿಸದಸ್ಯ ಪೀಠ ಸಿಬಿಐಗೆ ನೋಟಿಸ್ ಜಾರಿಗೊಳಿಸಿದೆ. "ಅವರು ಈಗಾಗಲೇ ಸುಮಾರು 4 ವರ್ಷ ಕಳೆದಿದ್ದು ನಾವು ಆ ದೃಷ್ಟಿಯಿಂದ ಮನವಿಯನ್ನು ನೋಡಬೇಕಾಗಿದೆ" ಎಂದು ನ್ಯಾ. ಚಂದ್ರಚೂಡ್ ಹೇಳಿದರು.

ಪ್ರಕರಣ ಸಿಆರ್‌ಪಿಸಿ ಸೆಕ್ಷನ್‌ 436 ಎ (ವಿಚಾರಣಾ ಕೈದಿಯನ್ನು ಬಂಧಿಸಬಹುದಾದ ಗರಿಷ್ಠ ಅವಧಿ) ವ್ಯಾಪ್ತಿಗೆ ಬರುತ್ತದೆ ಎಂದು ಮಿಶೆಲ್‌ ಪರ ವಕೀಲರು ವಾದಿಸಿದರು. ಪೀಠದ ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಮಿಶೆಲ್‌ ಎಂದಿಗೂ ತಲೆಮರೆಸಿಕೊಂಡಿರಲಿಲ್ಲ ಎಂದರು.

ಜಾರಿ ನಿರ್ದೇಶನಾಲಯದ (ಇ ಡಿ) ಪರವಾಗಿ ವಾದ ಮಂಡಿಸಿದ ಹೆಚ್ಚುವರಿ ಸಾಲಿಸಿಟರ್ ಜನರಲ್ (ಎಎಸ್‌ಜಿ) ಎಸ್‌ ವಿ ರಾಜು ಅವರು "ಮಿಶೆಲ್ ಅವರನ್ನು ಎಲ್ಲಿಯೂ ದೋಷಮುಕ್ತಗೊಳಿಸಿಲ್ಲ ಹೀಗಾಗಿ ಇ ಡಿ ತನಿಖೆ ನಡೆಸುತ್ತಿರುವ ಅಪರಾಧಗಳಿಗೆ ಸೆಕ್ಷನ್ 436 ಎ ಅನ್ವಯಿಸುವುದಿಲ್ಲ” ಎಂದರು.

ಇಟೆಲಿಯಲ್ಲಿ ತಮ್ಮ ವಿರುದ್ಧ ಆರೋಪ ಮಾಡಿರುವುದರಿಂದ ತಾನು ಅಲ್ಲಿ ಇರಬೇಕಾದ ಅಗತ್ಯವಿದೆ ಎಂದು ಮಿಶೆಲ್‌ ಪರ ವಕೀಲರು ವಾದಿಸಿದಾಗ ಎಎಸ್‌ಜಿ ಅವರು “ಆತ ಪಕ್ಷಕಾರ ಕೂಡ ಅಲ್ಲ” ಎಂದರು. ಆದರೆ ನ್ಯಾಯಾಲಯ ಸಿಬಿಐಗೆ ನೋಟಿಸ್ ಜಾರಿ ಮಾಡಿತು.

ದೇಶ ತೊರೆಯುವ ಸಾಧ್ಯತೆ ಹಿನ್ನೆಲೆಯಲ್ಲಿ ಈ ಹಿಂದೆ ದೆಹಲಿ ಹೈಕೋರ್ಟ್‌ ಮಿಶೆಲ್‌ ಜಾಮೀನನ್ನು ತಿರಸ್ಕರಿಸಿತ್ತು.