ಕೃತಕ ಬುದ್ಧಿಮತ್ತೆ (ಎಐ) ನ್ಯಾಯಾಧೀಶರು, ವಕೀಲರು ಮತ್ತು ನಾಗರಿಕರಿಗೆ ಸಹಾಯ ಮಾಡಬಹುದು ಆದರೆ ನ್ಯಾಯ ನೀಡುವಿಕೆಯ ಹಿಂದಿನ ಮಾನವೀಯ ಅಂಶಗಳನ್ನು ಅದು ತುಂಬಲು ಸಾಧ್ಯವಿಲ್ಲ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸೂರ್ಯಕಾಂತ್ ಅಭಿಪ್ರಾಯಪಟ್ಟರು.
ತಂತ್ರಜ್ಞಾನವು ಮಾರ್ಗದರ್ಶನ ನೀಡಬಹುದಾದರೂ, ಮನುಷ್ಯ ಅದರ ಮೇಲುಸ್ತುವಾರಿಯನ್ನು ಮಾಡಬೇಕು. ನ್ಯಾಯ ವಿತರಣಾ ವ್ಯವಸ್ಥೆಯಲ್ಲಿ ಅಂತಿಮ ಮಧ್ಯಸ್ಥಗಾರನಾಗಿರಬೇಕು ಎಂದು ಅವರು ಹೇಳಿದರು.
ನ್ಯಾ. ಸೂರ್ಯಕಾಂತ್ ಅವರು ಶ್ರೀಲಂಕಾದ ವಾರ್ಷಿಕ ಕಾನೂನು ಸಮ್ಮೇಳನದಲ್ಲಿ ಪಾಲ್ಗೊಂಡು, "ಕಾನೂನು ವೃತ್ತಿಗೆ ಸಹಕಾರಿಯಾಗಿ ತಂತ್ರಜ್ಞಾನ - ಒಂದು ಜಾಗತಿಕ ನೋಟ" ಎನ್ನುವ ವಿಚಾರವಾಗಿ ಪ್ರಧಾನ ಭಾಷಣ ಮಾಡಿದರು.
“ಕೃತಕ ಬುದ್ಧಿಮತ್ತೆಯು ಅಧಿಕಾರಿಗಳಿಗೆ ಸಂಶೋದನೆಯಲ್ಲಿ ಸಹಾಯ ಮಾಡಬಹುದು, ಕರಡುಗಳನ್ನು ಸೃಜಿಸಬಹುದು ಅಥವಾ ಅಸಂಗತತೆಗಳನ್ನು ಎತ್ತಿ ತೋರಿಸಲು ಸಹಾಯ ಮಾಡಬಹುದು, ಆದರೆ ಸಾಕ್ಷಿಯ ಧ್ವನಿಯಲ್ಲಿನ ನಡುಕ, ಅರ್ಜಿಯ ಹಿಂದಿನ ವೇದನೆ ಅಥವಾ ನಿರ್ಧಾರವೊಂದರ ನೈತಿಕ ತೂಕವನ್ನು ಅದು ಗ್ರಹಿಸಲು ಸಾಧ್ಯವಿಲ್ಲ. ನಾವು ಒಂದು ವಿಚಾರದಲ್ಲಿ ಸ್ಫಟಿಕ ಶುಭ್ರದಷ್ಟು ಸ್ಪಷ್ಟತೆ ಇರಿಸಿಕೊಳ್ಳೋಣ, ಅದೆಂದರೆ, ಕೃತಕ ಬುದ್ಧಿಮತ್ತೆಯು ವಕೀಲರನ್ನಾಗಲಿ ಅಥವಾ ನ್ಯಾಯಾಧೀಶರನ್ನಾಗಲಿ ಬದಲಾಯಿಸುವುದಿಲ್ಲ, ಬದಲಿಗೆ ಅವರ ವ್ಯಾಪ್ತಿಯನ್ನು ವಿಸ್ತರಿಸುತ್ತಿದ್ದೇವೆ ಮತ್ತು ಸೇವಾ ಸಾಮರ್ಥ್ಯವನ್ನು ಉತ್ತಮವಾಗಿ ಪರಿಷ್ಕರಿಸುತ್ತಿದ್ದೇವೆ. ಹಾಗಾಗಿ, ತಂತ್ರಜ್ಞಾನವು ಮಾರ್ಗದರ್ಶನ ನೀಡಲಿ, ಮಾನವರು ಅದರ ಮೇಲುಸ್ತುವಾರಿ ಮಾಡಲಿ" ಎಂದು ಅವರು ತಮ್ಮ ಅಭಿಪ್ರಾಯ ಹಂಚಿಕೊಂಡರು.
ಮುಂದುರೆದು, ನ್ಯಾ. ಸೂರ್ಯಕಾಂತ್ ಅವರು ಎಐ ಮೇಲೆ ಅತಿಯಾದ ಅವಲಂಬನೆಯ ವಿರುದ್ಧವೂ ಎಚ್ಚರಿಕೆ ನೀಡಿದರು. "ಎಐ ಪರಿಕರಗಳು ದೋಷಾತೀತವೆಂದೇನೂ ಅಲ್ಲ. ಅವು ಕೂಡ ತಮಗೆ ಒದಗಿಸಲಾದ ತರಬೇತಿ ದತ್ತಾಂಶಗಳನ್ನು ಅಧರಿಸಿ ನಿಖರವಲ್ಲದ ಫಲಿತಾಂಶಗಳನ್ನು, ಭ್ರಮೆಗಳನ್ನು ಸೃಜಿಸಬಹುದು. ಹಾಗಾಗಿ, ಮನುಷ್ಯನ ಮೇಲುಸ್ತುವಾರಿಗೆ ಪರ್ಯಾಯವಿಲ್ಲ. ಹಾಗಾಗಿ, ಕೃತಕ ಬುದ್ಧಿಮತ್ತೆಯು ನೀಡುವ ಅಂತಿಮ ಫಲಿತಾಂಶವನ್ನು ಪರಿಶೀಲಿಸಲು ಹಾಗೂ ಅನುಮೋದಿಸಲು ವಕೀಲರು ಅಥವಾ ನ್ಯಾಯಾಧೀಶರೇ ಅಂತಿಮ ತೀರ್ಪುಗಾರರಾಗಿರಬೇಕು ಎಂದು ಅವರು ವಿವರಿಸಿದರು.
ತಂತ್ರಜ್ಞಾನವು ಪ್ರಬಲ ಸಹವರ್ತಿಯೇ ಆದರೂ ನ್ಯಾಯನಿರ್ಣಯ ಎಂಬುದು ಯಾವಾಗಲೂ ಮಾನವ ಕಾರ್ಯವೇ ಆಗಿರಲಿದೆ ಎಂದು ನ್ಯಾಯಾಧೀಶರು ಒತ್ತಿ ಹೇಳಿದರು.
"ನಮ್ಮ ನಿರ್ಧಾರದ ಸಾರವು ದತ್ತಾಂಶ ಅಥವಾ ಅಲ್ಗಾರಿದಮ್‌ಗಳನ್ನು ಅವಲಂಬಿಸಿರುವುದಿಲ್ಲ, ಬದಲಾಗಿ ಆತ್ಮಸಾಕ್ಷಿ ಮತ್ತು ಕರುಣೆಯಲ್ಲಿರುತ್ತದೆ. ನ್ಯಾಯಾಧೀಶರ ವಿವೇಚನೆ, ವಕೀಲರ ತಾರ್ಕಿಕತೆ, ದಾವೆದಾರರ ಘನತೆ ಮತ್ತು ಪ್ರತಿಯೊಂದು ನ್ಯಾಯಯುತ ವಿಚಾರಣೆಯಲ್ಲಿ ಅಭಿವ್ಯಕ್ತವಾಗುವ ಸಹಾನುಭೂತಿ - ಇವು ಯಾವುದೇ ಯಂತ್ರವು ಪುನರಾವರ್ತಿಸಲು ಸಾಧ್ಯವಾಗದ ನ್ಯಾಯ ನಿರ್ಣಯದ ಜೀವನಾಡಿಗಳಾಗಿವೆ" ಎಂದು ಅವರು ಹೇಳಿದರು.
ನ್ಯಾಯನಿರ್ಣಯವನ್ನು ವ್ಯಾಖ್ಯಾನಿಸುವ ಶಾಶ್ವತ ಮಾನವೀಯ ಮೌಲ್ಯಗಳೊಂದಿಗೆ ತಾಂತ್ರಿಕ ಪ್ರಗತಿಯನ್ನು ಸಮತೋಲಿತವಾಗಿ ಬಳಸಲು ಕಲಿಯಬೇಕಾದ "ನಿರ್ಣಾಯಕ ಕ್ಷಣ" ದಲ್ಲಿ ಕಾನೂನು ವೃತ್ತಿ ನಿಂತಿದೆ ಎಂದು ನ್ಯಾಯಮೂರ್ತಿ ಕಾಂತ್ ಹೇಳಿದರು. ದತ್ತಾಂಶವೆನ್ನುವುದು ನಿರ್ಧಾರಗಳನ್ನು ಮಾಹಿತಿಯುಕ್ತವಾಗಿಸಬಹುದಾದರೂ ಅದನ್ನು ಎಂದಿಗೂ ನಿರ್ದೇಶಿಸಬಾರದು ಎಂದು ಅವರು ಎಚ್ಚರಿಸಿದರು.
ಯಾವುದೇ ತಾಂತ್ರಿಕ ಸುಧಾರಣೆಯ ಪರೀಕ್ಷೆಯು ಅದು ಎಷ್ಟು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತದೆ ಎಂಬುದರ ಮೇಲೆ ಮಾತ್ರವೇ ನಿರ್ಧರಿತವಾಗುವುದಿಲ್ಲ ಬದಲಿಗೆ ತನ್ನ ಸಮಗ್ರ ಒಳಗೊಳ್ಳುವಿಕೆಯಿಂದ ನಾಗರಿಕರಿಗೆ ಹೇಗೆ ಸೇವೆ ಸಲ್ಲಿಸುತ್ತದೆ ಎಂಬುದನ್ನು ಆಧರಿಸಿರುತ್ತದೆ ಎಂದು ಅವರು ಸಭಿಕರಿಗೆ ತಿಳಿಸಿದರು.
"ತಂತ್ರಜ್ಞಾನವು ಓರ್ವ ಹಳ್ಳಿಯ ವ್ಯಕ್ತಿಗೆ ನೂರಾರು ಮೈಲುಗಳನ್ನು ಕ್ರಮಿಸದೆಯೇ ತನ್ನ ಮನವಿಯನ್ನು ಸಲ್ಲಿಸಲು ಅನುವು ಮಾಡಿಕೊಟ್ಟರೆ, ಬಡ ದಾವೆದಾರರ ಮನವಿಗಳನ್ನು ವಿಳಂಬವಿಲ್ಲದೆ ಆಲಿಸುವುದನ್ನು ಸಾಧ್ಯವಾಗಿಸಿದರೆ, ಜನರಿಗೆ ಅರ್ಥವಾಗುವ ಭಾಷೆಯಲ್ಲಿ ನ್ಯಾಯಾಲಯಗಳು ತಮ್ಮ ತಾರ್ಕಿಕತೆಯನ್ನು ತಿಳಿಸಲು ಸಹಾಯ ಮಾಡಿದರೆ ಆಗ ಅದು ನಿಜಕ್ಕೂ ತನ್ನ ಕರ್ತವ್ಯವನ್ನು ನಿಭಾಯಿಸಿದೆ ಎಂದು ಅರ್ಥ" ಎಂದು ಅವರು ವಿವರಿಸಿದರು.
ನ್ಯಾ. ಸೂರ್ಯಕಾಂತ್ ಅವರು ಹೇಗೆ ತಂತ್ರಜ್ಞಾನವು ನ್ಯಾಯಾಲಯಗಳ ಆಡಳಿತವನ್ನು ಪರಿವರ್ತನೆಗೊಳಿಸಿದೆ ಎನ್ನುವ ಬಗ್ಗೆ ಗಮನಸೆಳೆದರು. ಪ್ರಕರಣಗಳ ಇಫೈಲಿಂಗ್, ಡಿಜಿಟಲ್ ರಿಜಿಸ್ಟ್ರಿಗಳ ಬಗ್ಗೆ ಗಮನಸೆಳೆದರು. ವರ್ಚುವಲ್ ವಿಚಾರಣೆ, ಪ್ರಕರಣಗಳ ನಿರ್ವಹಣಾ ತಂತ್ರಾಂಶಗಳ ಬಳಕೆಯು ನ್ಯಾಯ ಲಭ್ಯತೆಯನ್ನು ಹೆಚ್ಚು ಪಾರದರ್ಶಕವೂ, ಸಮರ್ಥವೂ ಆಗಿಸಿದೆ ಎಂದು ವಿವರಿಸಿದರು.