ನಿಯಮಿತ, ಸಣ್ಣ-ಪ್ರಮಾಣದ ಅಪರಾಧಗಳಿಗೆ ಸಂಬಂಧಿಸಿದ ಪ್ರಕರಣಗಳಲ್ಲಿನ ನಿರ್ಧಾರ ಕೈಗೊಳ್ಳುವಿಕೆಯನ್ನು ಕೃತಕ ಬುದ್ಧಿಮತ್ತೆ ಆಧಾರಿತ ಸ್ವಯಂಚಾಲಿತ ವ್ಯವಸ್ಥೆಗಳಿಗೆ ವರ್ಗಾಯಿಸುವುದು ಭಾರತದಲ್ಲಿ ಬಾಕಿ ಇರುವ ಶೇ. 60 ಕ್ಕೂ ಹೆಚ್ಚು ಮೊಕದ್ದಮೆಗಳನ್ನು ತೆರವುಗೊಳಿಸಲು ಸಹಾಯ ಮಾಡುತ್ತದೆ ಎಂದು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಮನಮೋಹನ್ ಶನಿವಾರ ಅಭಿಪ್ರಾಯಪಟ್ಟರು.
ದೆಹಲಿಯಲ್ಲಿ ಓಕ್ ಬ್ರಿಡ್ಜ್ ಆಯೋಜಿಸಿದ್ದ ಭಾರತೀಯ ಕಾನೂನು, ಎಐ ಮತ್ತು ತಂತ್ರಜ್ಞಾನ ಶೃಂಗಸಭೆ 2025 ರಲ್ಲಿ ನ್ಯಾಯಮೂರ್ತಿ ಮನಮೋಹನ್ ಅವರು ಪ್ರಮುಖ ಭಾಷಣ ಮಾಡಿದರು. ತಂತ್ರಜ್ಞಾನದ ಬಳಕೆಯು ನ್ಯಾಯಾಧೀಶರನ್ನು ಗುಮಾಸ್ತಿಕೆಯ ಹೊರೆಗಳಿಂದ ಮುಕ್ತಗೊಳಿಸಬೇಕು ಮತ್ತು ನ್ಯಾಯಾಲಯಗಳು ಸಂಕೀರ್ಣ ತೀರ್ಪುಗಳನ್ನು ನೀಡುವತ್ತ ಗಮನಹರಿಸಲು ಅನುವು ಮಾಡಿಕೊಡಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಭಾರತದ ಪ್ರಕರಣಗಳ ಹೊರೆಯ ಬಹುಪಾಲು ಭಾಗವು ಸೂಕ್ಷ್ಮ ನ್ಯಾಯಾಂಗ ಪರಿಶೀಲನೆಯ ಅಗತ್ಯವಿಲ್ಲದ ಸಣ್ಣ, ಪುನರಾವರ್ತಿತ ವಿವಾದಗಳನ್ನು ಒಳಗೊಂಡಿರುತ್ತದೆ ಎಂದು ಅವರು ವಿವರಿಸಿದರು.
ಯಾವ ಬಗೆಯ ಪ್ರಕರಣಗಳನ್ನು ಎಐ ಆಧರಿತ ನ್ಯಾಯನಿರ್ಧರಣಾ ವೇದಿಕೆಗಳಿಗೆ ವರ್ಗಾಯಿಸಬಹುದು ಎನ್ನುವುದನ್ನು ವಿವರಿಸುತ್ತಾ ಅವರು, “ಸಣ್ಣ ಪ್ರಮಾಣದ ಅಪರಾಧಗಳು… ಸಂಚಾರ ಉಲ್ಲಂಘನೆಗಳು, ಚೆಕ್ ಬೌನ್ಸ್ ಪ್ರಕರಣಗಳು ನಿಯಮಿತವಾಗಿ ಕಂಡುಬರುವ ಪ್ರಕರಣಗಳಾಗಿದ್ದು, ಸುಲಭವಾಗಿ ನಿಭಾಯಿಸಬಹುದಾದಂತಹವಾಗಿವೆ... ಇವುಗಳನ್ನು ಎಐ ನಿರ್ಧರಿಸಬಹುದು," ಎಂದು ವಿವರಿಸಿದರು.
ಈ ರೀತಿಯಲ್ಲಿ ಎಐ ಆಧಾರಿತವಾಗಿ ತಂತ್ರಜ್ಞಾನವನ್ನು ಬಳಕೆ ಮಾಡಿಕೊಂಡರೆ ಬಾಕಿ ಉಳಿದಿರುವ ಪ್ರಕರಣಗಳ ಹೊರೆಯನ್ನು ತಗ್ಗಿಸುವಲ್ಲಿ ಅದು ಸಕಾರಾತ್ಮಕ ಪರಿಣಾಮವನ್ನು ಬೀರುತ್ತದೆ ಎಂದು ಅವರು ಹೇಳಿದರು. "ಇದು ಘಟಿಸಿದ್ದೇ ಆದರೆ ನಮ್ಮ ಮೊಕದ್ದಮೆಗಳಲ್ಲಿ ಶೇಕಡಾ 60 ಕ್ಕಿಂತ ಹೆಚ್ಚು ಸುಲಭವಾಗಿ ಬಗೆಹರಿಯುತ್ತವೆ. ಉಳಿದ ಸಂಪನ್ಮೂಲಗಳನ್ನು ಪ್ರಮುಖವಾದ ಶೇಕಡಾ 40 ಪ್ರಕರಣಗಳ ಮೇಲೆ ಕೇಂದ್ರೀಕರಿಸಬಹುದು" ಎಂದು ಅವರು ತಿಳಿಸಿದರು.
ಅದೇ ರೀತಿ, ಏಕರೂಪವಾಗಿರುವ ಸಾವಿರಾರು ಪ್ರಕರಣಗಳು, ವಿಶೇಷವಾಗಿ ಭೂಸ್ವಾಧೀನ ಹಾಗೂ ಇನ್ನಿತರ ಸಾಮೂಹಿಕವಾಗಿ ಹೂಡಲ್ಪಡುವ ಮೊಕದ್ದಮೆಗಳನ್ನು ಒಗ್ಗೂಡಿಸುವಲ್ಲಿಯೂ ಎಐ ಸಹಾಯಕವಾಗಲಿದ್ದು, ನ್ಯಾಯಾಲಯಗಳು ಇಡೀ ಗುಂಪು ಪ್ರಕರಣಗಳನ್ನು ಒಂದೇ ಆದೇಶದ ಮೂಲಕ ವಿಲೇವಾರಿ ಮಾಡಬಹುದಾಗಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇದೇ ವೇಳೆ ಅವರು ಎಐ ಸೃಷ್ಟಿಸಬಹುದಾದ ಸಮಸ್ಯೆಗಳ ಬಗ್ಗೆಯೂ ಬೆಳಕು ಚೆಲ್ಲಿದ ಅವರು, ಅಸ್ತಿತ್ವದಲ್ಲಿಲ್ಲದ ಕೃತಕ ಕೇಸ್ ಲಾಗಳ ಸೃಷ್ಟಿ (ಪ್ರಕರಣಗಳನ್ನು ನಿರ್ಧರಿಸಲು ಸಹಾಯವಾಗುವಂತಹ ಪೂರ್ವ ನಿದರ್ಶನ ತೀರ್ಪುಗಳನ್ನು), ಪಕ್ಷಪಾತಿ ಅಲ್ಗಾರಿದಮ್ ಅನುಸರಣೆ, ಗೌಪ್ಯತೆಯ ಕುರಿತಾದ ಕಳವಳಗಳಿಗೆ ಸಂಬಂಧಿಸಿದ ಅಪಾಯಗಳು ನೈಜವಾದಂತಹವು ಎನ್ನುವ ಎಚ್ಚರಿಕೆ ನೀಡಿದರು.
ನ್ಯಾಯಮೂರ್ತಿಗಳಿಗೆ ಪ್ರಕರಣದ ಫೈಲ್‌ಗಳನ್ನು ಓದಲು, ವ್ಯಾಜ್ಯದ ಪ್ರಮುಖ ಸವಾಲುಗಳನ್ನು ಗುರುತಿಸಲು, ಮತ್ತು ಸಂಬಂಧಿತ ಪೂರ್ವನಿದರ್ಶನಗಳನ್ನು ಗುರುತು ಮಾಡಲು ಇದಾಗಲೇ ಸುಪ್ರೀಂ ಕೋರ್ಟ್ ಸು-ಪೇಸ್ (SU-PACE) ಎಂಬ ಕೃತಕ ಬುದ್ಧಿಮತ್ತೆ (ಎಐ) ಚಾಲಿತ ಸಾಧನವನ್ನು ಪ್ರಾಯೋಗಿಕವಾಗಿ ಬಳಸಲು ಪ್ರಾರಂಭಿಸಿದೆ ಎಂದು ತಿಳಿಸಿದರು.
ಈ ವ್ಯವಸ್ಥೆಯನ್ನು "ಡಿಜಿಟಲ್ ಸಂಶೋಧನಾ ಸಹಾಯಕ" ಎಂದು ಕರೆದ ಅವರು, ನ್ಯಾಯಾಧೀಶರು ಬೃಹತ್ ಪುಸ್ತಕಗಳು ಮತ್ತು ಬೃಹತ್ ಫೈಲಿಂಗ್‌ಗಳನ್ನು ನ್ಯಾವಿಗೇಟ್ ಮಾಡಲು ಕಳೆಯುವ ಸಮಯವನ್ನು ಕಡಿಮೆ ಮಾಡಲು ಈ ಪ್ರಾಯೋಗಿಕ ಮಾದರಿಯನ್ನು ವಿನ್ಯಾಸಗೊಳಿಸಲಾಗಿದೆ ಎಂದು ತಿಳಿಸಿದರು.
"ಇದು ಸಾರಾಂಶಗಳನ್ನು, ವ್ಯಾಜ್ಯದ ಪ್ರಮುಖ ಸವಾಲುಗಳನ್ನು ಸಿದ್ಧಪಡಿಸುತ್ತದೆ ಮತ್ತು ಸಂಬಂಧಿತ ಕಾನೂನುಗಳನ್ನು ಉಲ್ಲೇಖಿಸುತ್ತದೆ... ಅದರೆ, ಇದು ತೀರ್ಪು ನೀಡುವುದಿಲ್ಲ, ಬದಲಿಗೆ ನ್ಯಾಯಮೂರ್ತಿಗಳು ಪರಿಗಣಿಸಬೇಕಾದದ್ದನ್ನು ಎತ್ತಿ ತೋರಿಸುತ್ತದೆ" ಎಂದು ವಿವರಿಸಿದರು.
ಭವಿಷ್ಯವು ಹೈಬ್ರಿಡ್ ನ್ಯಾಯಾಂಗ ಮಾದರಿಗಳನ್ನು ಒಳಗೊಂಡಿರುತ್ತದೆ, ಅಲ್ಲಿ ತಂತ್ರಜ್ಞಾನವು ದಿನನಿತ್ಯದ ಮತ್ತು ಆಡಳಿತಾತ್ಮಕ ಹೊರೆಗಳನ್ನು ತೆಗೆದುಕೊಳ್ಳುತ್ತದೆ, ನ್ಯಾಯಾಧೀಶರು ಸಂಕೀರ್ಣ ತಾರ್ಕಿಕತೆ, ಸಹಾನುಭೂತಿ ಮತ್ತು ಸಾಂವಿಧಾನಿಕ ಸೂಕ್ಷ್ಮತೆಯ ಅಗತ್ಯವಿರುವ ವಿಷಯಗಳ ಮೇಲೆ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ ಎಂದರು.
"ಅಂತಿಮವಾಗಿ ನ್ಯಾಯದಾನದ ಪ್ರಮುಖ ಹೆಗ್ಗುರುತು ಅಲ್ಗಾರಿದಮ್ ಅಲ್ಲ, ಬದಲಿಗೆ ಅದು ಮಾನವಸಹಜರಾದ ನ್ಯಾಯಾಧೀಶರ ಸಮಗ್ರತೆ, ಸ್ವಾತಂತ್ರ್ಯ ಮತ್ತು ಬೌದ್ಧಿಕತೆಯಾಗಿರುತ್ತದೆ" ಎಂದು ಅವರು ಹೇಳಿದರು.
ಕಾನೂನು ಮತ್ತು ನ್ಯಾಯ ಸಚಿವಾಲಯದ ಹೆಚ್ಚುವರಿ ಕಾರ್ಯದರ್ಶಿ ಡಾ. ಮನೋಜ್ ಕುಮಾರ್, ಡಾ. ಶೈಲೇಶ್ ವಿ ಹರಿಭಕ್ತಿ ಮತ್ತು ಹಿರಿಯ ವಕೀಲ ಮತ್ತು ಭಾರತೀಯ ಕಾನೂನು ಸಂಸ್ಥೆಗಳ ಸಂಘದ (SILF) ಅಧ್ಯಕ್ಷ ಡಾ. ಲಲಿತ್ ಭಾಸಿನ್ ಸಮಾರಂಭದ ಉದ್ಘಾಟನಾ ಅಧಿವೇಶನದಲ್ಲಿ ಮಾತನಾಡಿದ ಇತರ ಪ್ರಮುಖರಾಗಿದ್ದರು.