Supreme Court, BCI and AIBE 
ಸುದ್ದಿಗಳು

ವರ್ಷಕ್ಕೆ ಎರಡು ಬಾರಿ ಎಐಬಿಇ ಪರೀಕ್ಷೆ: ಸುಪ್ರೀಂ ಕೋರ್ಟ್‌ಗೆ ಬಿಸಿಐ ಮಾಹಿತಿ

ಅಂತಿಮ ಸೆಮಿಸ್ಟರ್ ಪರೀಕ್ಷೆ ಉತ್ತೀರ್ಣರಾಗಬೇಕು ಎನ್ನುವ ಷರತ್ತಿನೊಂದಿಗೆ ಪರೀಕ್ಷೆ ಬರೆಯಲು ಆ ಸೆಮಿಸ್ಟರ್‌ನ ವಿದ್ಯಾರ್ಥಿಗಳಿಗೂ ಅನುವು ಮಾಡಿಕೊಡಲಾಗುವುದು ಎಂದು ಬಿಸಿಐ ಹೇಳಿದೆ.

Bar & Bench

ಕಾನೂನು ಪದವಿಧರರು ವಕೀಲರಾಗಿ ನೋಂದಣಿ ಪಡೆಯಲು ಅತ್ಯಂತ ಮುಖ್ಯವಾದ ಅಖಿಲ ಭಾರತ ವಕೀಲರ ಪರೀಕ್ಷೆ ಬರೆಯಲು ಅಂತಿಮ ಸೆಮಿಸ್ಟರ್‌ ಕಾನೂನು ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸುವಂತಹ ನಿಯಮಗಳನ್ನು ತಾನು ರೂಪಿಸಿರುವುದಾಗಿ ಭಾರತೀಯ ವಕೀಲರ ಪರಿಷತ್‌ (ಬಿಸಿಐ) ಸುಪ್ರೀಂ ಕೋರ್ಟ್‌ಗೆ ಮಂಗಳವಾರ ತಿಳಿಸಿದೆ [ನಿಲಯ್‌ ರೈ ಮತ್ತು ಭಾರತೀಯ ವಕೀಲರ ಪರಿಷತ್‌ ಇನ್ನಿತರರ ನಡುವಣ ಪ್ರಕರಣ].

ವರ್ಷಕ್ಕೊಮ್ಮೆ ಪರೀಕ್ಷೆ ನಡೆಸುವ ಬದಲು ಇನ್ನು ಅದನ್ನು ವರ್ಷಕ್ಕೆ ಎರಡು ಬಾರಿ ನಡೆಸಲಾಗುವುದು ಎಂದು ಬಿಸಿಐ, ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್ ಮತ್ತು ಸಂದೀಪ್ ಮೆಹ್ತಾ ಅವರನ್ನೊಳಗೊಂಡ ಪೀಠಕ್ಕೆ ಬಿಸಿಐ ತಿಳಿಸಿತು.

ಈ ಹಿನ್ನೆಲೆಯಲ್ಲಿ ಪರೀಕ್ಷೆಯನ್ನು ಎರಡು ಬಾರಿ ನಡೆಸಲು ನ್ಯಾಯಾಲಯ ಮಧ್ಯಪ್ರವೇಶಿಸುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಅದು ವಜಾಗೊಳಿಸಿತು. ಅರ್ಜಿಯ ಉದ್ದೇಶ ಈಗಾಗಲೇ ಈಡೇರಿರುವುದರಿಂದ ರಿಟ್ ಅರ್ಜಿಯನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅದು ತಿಳಿಸಿತು. ಆದೇಶದಲ್ಲಿ ಬಿಸಿಐ ಈಗಾಗಲೇ ಎಐಬಿಇ ನಿಯಮಾವಳಿ–2026ನ್ನು ರೂಪಿಸಿದೆ ಎಂದು ದಾಖಲಿಸಲಾಗಿದೆ

ದೆಹಲಿ ವಿಶ್ವವಿದ್ಯಾಲಯದ ಒಂಬತ್ತು ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದರು. ಪದವಿ ಪೂರ್ಣಗೊಳಿಸುವ ಮೊದಲು ಪರೀಕ್ಷೆ ಬರೆಯಲು ಇರುವ ನಿರ್ಬಂಧವನ್ನು ಅವರು ಪ್ರಶ್ನಿಸಿದ್ದರು. ಸೆಮಿಸ್ಟರ್ ವಿದ್ಯಾರ್ಥಿಗಳನ್ನು ಪರೀಕ್ಷೆಯಿಂದ ಹೊರಗಿಟ್ಟಿರುವುದು ಸಂವಿಧಾನ ಪೀಠದ ಹಿಂದಿನ ತೀರ್ಪುಗಳಿಗೆ ವಿರುದ್ಧವಾಗಿದ್ದು, ಫಲಿತಾಂಶ ಪ್ರಕಟಿಸಿದ ಮತ್ತು ಪ್ರಕಟಿಸದ ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳ ನಡುವೆ ತಾರತಮ್ಯ ಉಂಟಾಗುತ್ತದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದರು.

ಈ ವಿಚಾರಕ್ಕೆ ಸಂಬಂಧಿಸಿದಂತೆ ತಾನು ನಿಯಮ ರಚಿಸುತ್ತಿರುವುದಾಗಿ 2024ರ ಸೆಪ್ಟೆಂಬರ್ ವಿಚಾರಣೆ ವೇಳೆ ಬಿಸಿಐ ತಿಳಿಸಿತ್ತು. ನಂತರ ನವೆಂಬರ್‌ನಲ್ಲಿ ನಡೆಯಬೇಕಿದ್ದ ಎಐಬಿಇ–XIX ಪರೀಕ್ಷೆಗೆ ಅಂತಿಮ ವರ್ಷದ ವಿದ್ಯಾರ್ಥಿಗಳಿಗೆ ನೋಂದಣಿ ಅವಕಾಶ ನೀಡುವಂತೆ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಈಗ ನಿಯಮಾವಳಿ ಜಾರಿಯಾದ ಹಿನ್ನೆಲೆಯಲ್ಲಿ ಪ್ರಕರಣಕ್ಕೆ ತೆರೆ ಬಿದ್ದಿದೆ.

ಗಮನಾರ್ಹ ಅಂಶವೆಂದರೆ, ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಗಳಿಗೆ ಬಾರ್ ಪರೀಕ್ಷೆ ಬರೆಯಲು ಅವಕಾಶ ನೀಡುವ ಕುರಿತು ಸಾಂವಿಧಾನಿಕ ಪೀಠ ಪರಿಗಣಿಸಬೇಕು ಎಂಬ ಸಲಹೆಯನ್ನು ಆಗಿನ ಅಮಿಕಸ್ ಕ್ಯೂರಿ ಕೆ ವಿ ವಿಶ್ವನಾಥನ್ (ಹಾಲಿ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ) ನೀಡಿದ್ದರು.