All India Football Federation, FIFA and Supreme Court
All India Football Federation, FIFA and Supreme Court 
ಸುದ್ದಿಗಳು

ಅಖಿಲ ಭಾರತ ಫುಟ್‌ಬಾಲ್ ಒಕ್ಕೂಟದ ಚುನಾವಣೆಗಳನ್ನು ಮುಂದೂಡಿದ ಸುಪ್ರೀಂ ಕೋರ್ಟ್‌; ಆಡಳಿತಗಾರರ ಸಮಿತಿ ಅವಧಿ ಅಂತ್ಯ

Bar & Bench

ಅಖಿಲ ಭಾರತ ಫುಟ್‌ಬಾಲ್‌ ಒಕ್ಕೂಟದ (ಎಐಎಫ್‌ಎಫ್‌) ಕಾರ್ಯಕಾರಿ ಸಮಿತಿಯ ಚುನಾವಣೆಗಳನ್ನು ಮುಂದೂಡುವಂತೆ ಕೇಂದ್ರ ಸರ್ಕಾರವು ಮಾಡಿದ್ದ ಕೋರಿಕೆಗೆ ಸುಪ್ರೀಂ ಕೋರ್ಟ್‌ ಸೋಮವಾರ ಸಮ್ಮತಿಸಿದೆ.

ಇದಲ್ಲದೆ, ಎಐಎಫ್‌ಎಫ್‌ನ ದಿನಂಪ್ರತಿ ವ್ಯವಹಾರಗಳನ್ನು 36 ರಾಜ್ಯಗಳ ಒಕ್ಕೂಟಗಳು ಆಯ್ಕೆ ಮಾಡಿರುವ ಒಕ್ಕೂಟದ ಪ್ರಧಾನ ಕಾರ್ಯದರ್ಶಿಯವರೇ ಸದ್ಯದ ಮಟ್ಟಿಗೆ ನಿರ್ವಹಿಸುವಂತೆ ಕೂಡ ನ್ಯಾ. ಡಿ ವೈ ಚಂದ್ರಚೂಡ್‌ ಅವರ ನೇತೃತ್ವದ ಪೀಠ ಆದೇಶಿಸಿದೆ.

ಒಮ್ಮೆ ಪ್ರಧಾನ ಕಾರ್ಯದರ್ಶಿಯವರು ಅಧಿಕಾರ ವಹಿಸಿಕೊಂಡ ನಂತರ ಪ್ರಸ್ತುತ ಒಕ್ಕೂಟದ ಕಾರ್ಯಭಾರ ನೋಡಿಕೊಳ್ಳುತ್ತಿರುವ ಆಡಳಿತಗಾರರ ಸಮಿತಿಯು (ಸಿಒಎ) ಅಂತ್ಯಗೊಳ್ಳಲಿದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿತು.

ಎಐಎಫ್‌ಎಫ್‌ಅನ್ನು ಅಮಾನತ್ತು ಮಾಡಿರುವ ಆದೇಶವನ್ನುಅಂತಾರಾಷ್ಟ್ರೀಯ ಫುಟ್‌ಬಾಲ್‌ ಸಂಸ್ಥಗಳ ಒಕ್ಕೂಟವು (ಫಿಫಾ) ಹಿಂಪಡೆಯುವ ಪ್ರಕ್ರಿಯೆಯನ್ನು ಸರಾಗವಾಗಿಸಲು, ಆ ಮೂಲಕ ಹದಿನೇಳು ವರ್ಷದ ಕೆಳಗಿನವರ ವಿಶ್ವಕಪ್‌ ಅನ್ನು ಭಾರತದಲ್ಲಿ ಆಯೋಜಿಸುವ ಪ್ರತಿಷ್ಠಿತ ಅವಕಾಶಕ್ಕೆ ಧಕ್ಕೆ ಒದಗದಂತೆ ತಡೆಯಲು ಈ ಆದೇಶವು ಅನುವು ಮಾಡಲಿದೆ.

ನ್ಯಾಯಾಲಯವು ತನ್ನ ಆದೇಶದಲ್ಲಿ ನೀಡಿರುವ ಪ್ರಮುಖ ನಿರ್ದೇಶನಗಳು ಹೀಗಿವೆ:

  • ಆಗಸ್ಟ್‌ 3, 2022ರಂದು ನೀಡಲಾದ ಆದೇಶದ ಅನ್ವಯ ಸಿದ್ಧಪಡಿಸಿರುವ ಚುನಾವಣಾ ವೇಳಾಪಟ್ಟಿಯನ್ನು ಬದಲಾಯಿಸಿ ಚುನಾವಣಾ ದಿನಾಂಕವನ್ನು ಒಂದು ವಾರ ಕಾಲ ಮುಂದೂಡಲು ಅನುಮತಿಸಲಾಗಿದೆ.

  • ಎಐಎಫ್‌ಎಫ್‌ನ ದಿನಂಪ್ರತಿ ವ್ಯವಹಾರಗಳನ್ನು ಪ್ರಧಾನ ಕಾರ್ಯದರ್ಶಿಯವರೇ ನೋಡಿಕೊಳ್ಳಲಿದ್ದು, ಒಮ್ಮೆ ಪ್ರಧಾನ ಕಾರ್ಯದರ್ಶಿ ಅಧಿಕಾರವಹಿಸಿಕೊಂಡ ಮೇಲೆ ಆಡಳಿತಗಾರರ ಸಮಿತಿಯು ಅಂತ್ಯಗೊಳ್ಳಲಿದೆ.

  • ಆಡಳಿತಗಾರರ ಸಮಿತಿಯು ಇದಾಗಲೇ (ನೂತನ) ಸಂವಿಧಾನದ ಕರಡನ್ನು ಸಲ್ಲಿಸಿದ್ದು ಅದರ ಅನುಷ್ಠಾನಕ್ಕೆ ಪಟ್ಟಿಯನ್ನೂ ನೀಡಿದೆ. ಈ ವಿಚಾರವಾಗಿ ನ್ಯಾಯಾಲಯಕ್ಕೆ ಸಲಹೆ ನೀಡಲು ಅಡ್ವೊಕೇಟ್‌ ಜನರಲ್‌ ಗೋಪಾಲ್‌ ಶಂಕರನಾರಾಯಣನ್ ಅವರನ್ನು ಸಮರ್‌ ಬನ್ಸಾಲ್ ಅವರ ಜೊತೆಗೆ ಅಮಿಕಸ್‌ ಕ್ಯೂರಿಯಾಗಿ ನೇಮಿಸಲಾಗಿದೆ.

ಹಿನ್ನೆಲೆ

ಎಐಎಫ್‌ಎಫ್‌ ಅಧ್ಯಕ್ಷರಾಗಿದ್ದ ರಾಜಕಾರಣಿ ಪ್ರಫುಲ್‌ ಪಟೇಲ್‌ ತಮ್ಮ ಅವಧಿಯ ನಂತರವೂ ಅಧ್ಯಕ್ಷ ಪಟ್ಟದಲ್ಲಿ ಮುಂದುವರೆದಿದ್ದರಿಂದ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಹೊಸದಾಗಿ ಚುನಾವಣೆ ನಡೆಸಲು ಮನವಿ ಸಲ್ಲಿಸಲಾಗಿತ್ತು. ಮೇ 18ರಂದು ಆದೇಶ ನೀಡಿದ್ದ ಸುಪ್ರೀಂ ಕೋರ್ಟ್‌ ಪ್ರಫುಲ್‌ ಪಟೇಲ್‌ ಸಹಿತ ಕಾರ್ಯಕಾರಿ ಸಮಿತಿಯನ್ನು ಕೆಳಗಿಳಿಯಲು ಸೂಚಿಸಿ, ಆ ಸ್ಥಾನಕ್ಕೆ ಆಡಳಿತಗಾರರ ಸಮಿತಿಯನ್ನು ನೇಮಿಸಿತ್ತು.

ಈ ಹಿನ್ನೆಲೆಯಲ್ಲಿ ಚುನಾಯಿತ ಮಂಡಳಿಯಲ್ಲದೆ ಬೇರೊಬ್ಬರು ಒಕ್ಕೂಟದ ಆಡಳಿತದಲ್ಲಿ ಹಸ್ತಕ್ಷೇಪ ನಡೆಸುವುದು ಫಿಫಾದ ನಿಯಮಗಳಿಗೆ ವಿರುದ್ಧವಾಗಿದ್ದು ಫಿಫಾ ಎಐಎಫ್‌ಎಫ್‌ಅನ್ನು ಅಮಾನತು ಮಾಡಬೇಕು ಎಂದು ಪಟೇಲ್‌ ಫಿಫಾ ಮೊರೆ ಹೋಗಿದ್ದರು.

ಮತ್ತೊಂದೆಡೆ ಒಕ್ಕೂಟಕ್ಕೆ ನೂತನ ಸಂವಿಧಾನವನ್ನು ಬರೆಯುವ ಹೊಣೆ ಹೊತ್ತ ಆಡಳಿತಗಾರರ ಸಮಿತಿಯು ಹಿಂದಿನ ಒಕ್ಕೂಟದ ಅಧ್ಯಕ್ಷ ಪ್ರಫುಲ್‌ ಪಟೇಲ್‌ ಹಾಗೂ ಪದಾಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕ್ರಿಯೆಗೆ ಅನುಮತಿ ಕೋರಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು.

ಈ ಎಲ್ಲ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಇತ್ತೀಚೆಗೆ ಪತ್ರಿಕಾ ಪ್ರಕಟಣೆ ನೀಡಿದ್ದ ಫಿಫಾ ತನ್ನ ನಿಯಮಾವಳಿಗಳನ್ನು ಉಲ್ಲಂಘಿಸಿ ಮೂರನೆಯವರು ಎಐಎಫ್‌ಎಪ್‌ನಲ್ಲಿ ಪ್ರಭಾವ ಬೀರುತ್ತಿರುವ ಹಿನ್ನೆಲೆಯಲ್ಲಿ ಫಿಫಾ ಆಡಳಿತ ಮಂಡಳಿಯು ಎಐಎಫ್‌ಎಫ್‌ಅನ್ನು ಅಮಾನತ್ತುಗೊಳಿಸಿರುವುದಾಗಿ ತಿಳಿಸಿತ್ತು.

ಆಡಳಿಗಾರರ ಸಮಿತಿಯ ಜಾಗಕ್ಕೆ ಮತ್ತೆ ಎಐಎಫ್ಎಫ್‌ನ ಆಡಳಿತವು ಬಂದ ನಂತರ ಅಮಾನತು ರದ್ದುಗೊಳ್ಳಲಿದೆ ಎಂದು ಅದು ಹೇಳಿತ್ತು.