ತನ್ನನ್ನು 'ಅಶಿಸ್ತಿನ ಪ್ರಯಾಣಿಕ' ಎಂದು ಗುರುತಿಸಿ ನಾಲ್ಕು ತಿಂಗಳ ಕಾಲ ವಿಮಾನದಲ್ಲಿ ಪ್ರಯಾಣಿಸಿದಂತೆ ನಿಷೇಧಿಸಿರುವುದರ ವಿರುದ್ಧ ಮೇಲ್ಮನವಿ ಸಮತಿ ರಚಿಸುವಂತೆ ಕೋರಿ ಏರ್ ಇಂಡಿಯಾದ ಮೂತ್ರ ವಿಸರ್ಜನೆ ಪ್ರಕರಣದ ಆರೋಪಿ ಶಂಕರ್ ಮಿಶ್ರಾ ದೆಹಲಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.
ನ್ಯಾಯಮೂರ್ತಿ ಪ್ರತಿಭಾ ಎಂ ಸಿಂಗ್ ಅವರೆದುರು ಪ್ರಕರಣ ಪಟ್ಟಿಯಾದಾಗ ಮೇಲ್ಮನವಿ ಸಮಿತಿ ಈಗಾಗಲೇ ಅಸ್ತಿತ್ವದಲ್ಲಿದೆ ಎಂದು ನಾಗರಿಕ ವಿಮಾನಯಾನ ಮಹಾನಿರ್ದೇಶಕ (ಡಿಜಿಸಿಎ) ಪರ ವಕೀಲರು ತಿಳಿಸಿದರು.
ಆಗ ನ್ಯಾ. ಪ್ರತಿಭಾ ಅವರು ಸಮಿತಿ ರಚನೆಯ ವಿವರಗಳನ್ನು ನ್ಯಾಯಾಲಯಕ್ಕೆ ಸಲ್ಲಿಸುವಂತೆ ತಿಳಿಸಿದರು. ಪ್ರಕರಣದ ಮುಂದಿನ ವಿಚಾರಣೆ ಮಾರ್ಚ್ 23ರಂದು ನಡೆಯಲಿದೆ.
ಕಳೆದ ನವೆಂಬರ್‌ನಲ್ಲಿ ನ್ಯೂಯಾರ್ಕ್‌ನಿಂದ ದೆಹಲಿಗೆ ಬರುತ್ತಿದ್ದ ಏರ್ ಇಂಡಿಯಾ ವಿಮಾನದ ಮಹಿಳಾ ಪ್ರಯಾಣಿಕರೊಬ್ಬರ ಮೇಲೆ ಕುಡಿದ ನಶೆಯಲ್ಲಿ ಮೂತ್ರ ವಿಸರ್ಜಿಸಿದ ಆರೋಪಕ್ಕೆ ಸಂಬಂಧಿಸಿದಂತೆ ಮಿಶ್ರಾ ಅವರನ್ನು ಜನವರಿ 7 ರಂದು ಬೆಂಗಳೂರಿನಲ್ಲಿ ದೆಹಲಿ ಪೊಲೀಸರು ಬಂಧಿಸಿದ್ದರು. ಘಟನೆ ಹಿನ್ನೆಲೆಯಲ್ಲಿ ಅವರನ್ನು ವೆಲ್ಸ್ ಫಾರ್ಗೊ ಕಂಪೆನಿ ಕೆಲಸದಿಂದ ವಜಾಗೊಳಿಸಿತ್ತು. ಆದರೆ ತಮ್ಮ ವಿರುದ್ಧದ ಆರೋಪ ಸುಳ್ಳು ಮತ್ತು ಆಧಾರ ರಹಿತ ಎಂದು ಮಿಶ್ರಾ ಸಮರ್ಥಿಸಿಕೊಂಡಿದ್ದರು. ಜನವರಿ 31ರಂದು ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡಿತ್ತು.
ಮಹಿಳೆ ನೀಡಿದ ದೂರಿನನ್ವಯ ಆಂತರಿಕ ವಿಚಾರಣಾ ಸಮಿತಿಯನ್ನು ಏರ್ ಇಂಡಿಯಾ ರಚಿಸಿತ್ತು. ಜನವರಿ 18, 2023 ರಂದು, ಸಮಿತಿಯು ಅವರನ್ನು 'ಅಶಿಸ್ತಿನ ಪ್ರಯಾಣಿಕ' ಎಂದು ಆದೇಶ ಹೊರಡಿಸಿ ನಾಲ್ಕು ತಿಂಗಳವರೆಗೆ ವಿಮಾನಯಾನ ಕೈಗೊಳ್ಳದಂತೆ ನಿಷೇಧ ವಿಧಿಸಿತ್ತು.