Waste dumping AI image, for representative purposes only
ಸುದ್ದಿಗಳು

ತಮಿಳುನಾಡಿನಲ್ಲಿ ಕೇರಳ ತ್ಯಾಜ್ಯ ಸುರಿದಿರುವುದು ಆತಂಕಕಾರಿ: ಕೇರಳ ಹೈಕೋರ್ಟ್

ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಕೇರಳ ಸರ್ಕಾರಕ್ಕೆ ನ್ಯಾಯಾಲಯ ಸೂಚಿಸಿದೆ. ಈ ವಿಚಾರದಲ್ಲಿ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣ ದಕ್ಷಿಣ ವಲಯವು ಸಹ ನಿಗಾ ಇರಿಸಿದೆ.

Bar & Bench

ಕೇರಳದ ಜೈವಿಕ ವೈದ್ಯಕೀಯ ತ್ಯಾಜ್ಯವನ್ನು ತಮಿಳುನಾಡಿಗೆ ಸೇರುವ ಪ್ರದೇಶದಲ್ಲಿ ಅಕ್ರಮವಾಗಿ ಸುರಿಯುತ್ತಿರುವ ವರದಿ ಹಿನ್ನೆಲೆಯಲ್ಲಿ ಕೇರಳ ಸರ್ಕಾರವನ್ನು ರಾಜ್ಯ ಹೈಕೋರ್ಟ್‌ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ಹೈಕೋರ್ಟ್‌ ಸ್ವಯಂಪ್ರೇರಿತ ಪ್ರಕರಣ ಮತ್ತು ಕೇರಳ ಸರ್ಕಾರ ನಡುವಣ ಪ್ರಕರಣ]

ಪರಿಸ್ಥಿತಿಯನ್ನು ಆತಂಕಕಾರಿ ಎಂದಿರುವ ನ್ಯಾಯಮೂರ್ತಿಗಳಾದ ಬೆಚು ಕುರಿಯನ್ ಥಾಮಸ್ ಮತ್ತು ಪಿ ಗೋಪಿನಾಥ್ ಅವರಿದ್ದ ವಿಶೇಷ ಪೀಠ ಪ್ರಕರಣದ ಮುಂದಿನ ವಿಚಾರಣೆ ನಡೆಯುವ ಜನವರಿ 10, 2025 ರೊಳಗೆ ಹಸಿರು ನ್ಯಾಯಮಂಡಳಿ (ಎನ್‌ಜಿಟಿ) ದಕ್ಷಿಣ ವಲಯದ ಮೇಲ್ವಿಚಾರಣೆಯಲ್ಲಿ ಪ್ರಕರಣದ ಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ.

"ಕೇರಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ಅಡ್ಡಾದಿಡ್ಡಿಯಾಗಿ ಮತ್ತು ಕಾನೂನು ಅವಶ್ಯಕತೆಗಳಿಗೆ ವಿರುದ್ಧವಾಗಿ ನೆರೆಯ ರಾಜ್ಯದಲ್ಲಿ ವಿಲೇವಾರಿ ಮಾಡುತ್ತಿರುವುದು ಆತಂಕಕಾರಿ ಪರಿಸ್ಥಿತಿಯಾಗಿದೆ" ಎಂದು ನ್ಯಾಯಾಲಯ ಹೇಳಿದೆ.

ಇದಲ್ಲದೆ ಕೊಚ್ಚಿಯ ನದಿ ಮತ್ತು ಹಿನ್ನೀರನ್ನು ಕಲುಷಿತಗೊಳಿಸುತ್ತಿರುವ ಚರಂಡಿಗಳನ್ನು ತೆರವುಗೊಳಿಸಲು ಕೈಗೊಂಡ ಕ್ರಮಗಳ ಬಗ್ಗೆ ಮತ್ತು  ಜೈವಿಕ ವೈದ್ಯಕೀಯ ತ್ಯಾಜ್ಯ ಸೇರಿದಂತೆ ಎಲ್ಲಾ ರೀತಿಯ ತ್ಯಾಜ್ಯಗಳ ಸಂಗ್ರಹಣೆ ಮತ್ತು ವಿಲೇವಾರಿಯಲ್ಲಿ ತೊಡಗಿರುವವರ ವಿವರಗಳ ಬಗ್ಗೆ ಅಫಿಡವಿಟ್ ಸಲ್ಲಿಸಲು ಆದೇಶಿಸಲಾಗಿದೆ.  

ಕೇರಳದಲ್ಲಿ ಉತ್ಪತ್ತಿಯಾಗುವ ತ್ಯಾಜ್ಯವನ್ನು ನೆರೆಯ ರಾಜ್ಯದಲ್ಲಿ ವಿಲೇವಾರಿ ಮಾಡುತ್ತಿರುವುದು ಆತಂಕಕಾರಿ ಸಂಗತಿ.
ಕೇರಳ ಹೈಕೋರ್ಟ್

ಕಳೆದ ವರ್ಷ ಕೊಚ್ಚಿಯ ಬ್ರಹ್ಮಪುರಂ ಕಸದ ವಿಲೇವಾರಿ ಘಟಕದಲ್ಲಿ ಬೆಂಕಿ ಕಾಣಿಸಿಕೊಂಡು ವಿಷಕಾರಿ ಹೊಗೆ ನಗರವನ್ನು ಆವರಿಸಿ ದೇಶದೆಲ್ಲೆಡೆ ಚರ್ಚೆಗೆ ಗ್ರಾಸವಾದ ಹಿನ್ನೆಲೆಯಲ್ಲಿ ದಾಖಲಿಸಿಕೊಂಡಿದ್ದ ಸ್ವಯಂಪ್ರೇರಿತ ಪ್ರಕರಣದ ವಿಚಾರಣೆಯ ಭಾಗವಾಗಿ ನ್ಯಾಯಾಲಯ ಈ ಆದೇಶ ನೀಡಿದೆ.

ಕೇರಳದ ನೆರೆಯ ರಾಜ್ಯವಾದ ತಮಿಳುನಾಡಿನ ತಿರುನಲ್ವೇಲಿ ಜಿಲ್ಲೆಯ ಆರು ಸ್ಥಳಗಳಲ್ಲಿ ಕೇರಳದಿಂದ ಜೈವಿಕ ವೈದ್ಯಕೀಯ, ಪ್ಲಾಸ್ಟಿಕ್, ಆಹಾರ ಮತ್ತು ಮಿಶ್ರ ಘನತ್ಯಾಜ್ಯವನ್ನು ಅಕ್ರಮವಾಗಿ ಸುರಿಯಲಾಗುತ್ತಿದೆ ಎಂಬ ವರದಿಗಳು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು.

ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಹಸಿರು ನ್ಯಾಯಾಧಿಕರಣವು ಸಹ ಡಿಸೆಂಬರ್ 23ರೊಳಗೆ (ಇಂದು) ತ್ಯಾಜ್ಯ ಹಿಂಪಡೆಯುವಂತೆ ಕೇರಳದ ಅಧಿಕಾರಿಗಳಿಗೆ ಡಿಸೆಂಬರ್ 19ರಂದು ಆದೇಶಿಸಿತ್ತು. ಈ ಪ್ರಕರಣದ ವಿಚಾರಣೆಯನ್ನು ಇಂದು ಎನ್‌ಜಿಟಿ ನಡೆಸಲಿದೆ.

ಎನ್‌ಜಿಟಿಯ ಡಿಸೆಂಬರ್ 19ರ ನಿರ್ದೇಶನದ ನಂತರ, ಸಹಾಯಕ ಜಿಲ್ಲಾಧಿಕಾರಿ ಆಲ್ಬರ್ಟ್ ನೇತೃತ್ವದ ತಂಡವು ತಮಿಳುನಾಡಿನಲ್ಲಿ ತ್ಯಾಜ್ಯ ಸುರಿಯಲಾಗಿದ್ದ ಸ್ಥಳಗಳಿಂದ ತ್ಯಾಜ್ಯವನ್ನು ತೆಗೆದು ಕೇರಳಕ್ಕೆ ಮರಳಿ ತರುವ ಕೆಲಸ ಮಾಡುತ್ತಿದೆ. ಈ ಸಂಬಂಧ ಆರು ಕ್ರಿಮಿನಲ್ ಮೊಕದ್ದಮೆಗಳನ್ನು ದಾಖಲಿಸಲಾಗಿದ್ದು, ಮೂವರು ಮಲಯಾಳಿಗಳನ್ನು ಬಂಧಿಸಲಾಗಿದೆ ಎಂದು ಇಂದು ಹೈಕೋರ್ಟ್‌ಗೆ ಕೇರಳ ಸರ್ಕಾರ ತಿಳಿಸಿದೆ.