Sandeep Kapoor Algo Legal 
ಸುದ್ದಿಗಳು

[ಆಲ್ಗೊ ಲೀಗಲ್‌ ಮಾನಹಾನಿ ಪ್ರಕರಣ] ಬೆನೆಟ್‌ ಕೋಲ್ಮನ್ ಸಂಸ್ಥೆ, ಮೂವರು ಪತ್ರಕರ್ತರಿಗೆ ನ್ಯಾಯಾಲಯದಿಂದ ನೋಟಿಸ್‌ ಜಾರಿ

ಎಚ್‌ ಟಿ ಮೀಡಿಯಾ ಲಿಮಿಟೆಡ್‌, ನೆಟ್‌ವರ್ಕ್‌ 18. ಕಾಂ ಲಿಮಿಟೆಡ್‌, ಟ್ವಿಟರ್‌ ಇಂಕ್‌, ಪತ್ರಕರ್ತ ನಿಖಿಲ್‌ ಪಟವರ್ಧನ್‌ ಮತ್ತು ಸೀಕ್ವೆಯಾ ಕ್ಯಾಪಿಟಲ್‌ಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದ್ದು, ಜೂನ್‌ 18ಕ್ಕೆ ವಿಚಾರಣೆ ಮುಂದೂಡಿದೆ.

Siddesh M S

ಅಲ್ಗೊ ಲೀಗಲ್‌ ಮತ್ತು ಅದರ ಸಂಸ್ಥಾಪಕ ಸಂದೀಪ್‌ ಕಪೂರ್‌ ಅವರು ಹೂಡಿರುವ ಒಂದು ಕೋಟಿ ರೂಪಾಯಿ ಮಾನನಷ್ಟ ದಾವೆ ಕುರಿತಾದ ಮಧ್ಯಂತರ ಮನವಿಗೆ ಸಂಬಂಧಿಸಿದಂತೆ ಬೆನೆಟ್‌ ಕೋಲ್ಮನ್‌ ಅಂಡ್‌ ಕಂಪೆನಿ ಲಿಮಿಟೆಡ್‌, ಪತ್ರಕರ್ತರಾದ ದಿಗ್ಬಿಜಯ್‌ ಮಿಶ್ರಾ, ಸಮಿಧಾ ಶರ್ಮಾ ಮತ್ತು ಅಶೋಕ್‌ ಕುಮಾರ್‌/ಜಾನ್‌ ದಿಯೊ ಅವರಿಗೆ ನೋಟಿಸ್‌ ಜಾರಿ ಮಾಡಿ ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯ ಬುಧವಾರ ಆದೇಶಿಸಿದೆ.

ಸಂದೀಪ್‌ ಕಪೂರ್‌ ಮತ್ತು ಅಲ್ಗೊ ಲೀಗಲ್‌ ಸಂಸ್ಥೆಯು ಸಿಕೊಯಾ ಕ್ಯಾಪಿಟಲ್‌ ಮತ್ತು ವಿವಿಧ ಮಾಧ್ಯಮ ಸಂಸ್ಥೆಗಳ ವಿರುದ್ಧ ಶಾಶ್ವತ ನಿರ್ಬಂಧಕಾದೇಶ ಕೋರಿದ್ದ ಮನವಿಯ ವಿಚಾರಣೆ ನಡೆಸಿ, ಕಾಯ್ದಿರಿಸಿದ್ದ ಆದೇಶವನ್ನು 18ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎಂ ಎಚ್‌ ಅಣ್ಣಯ್ಯನವರ ಅವರು ಪ್ರಕಟಿಸಿರು.

ಎಚ್‌ ಟಿ ಮೀಡಿಯಾ ಲಿಮಿಟೆಡ್‌, ನೆಟ್‌ವರ್ಕ್‌ 18. ಕಾಂ ಲಿಮಿಟೆಡ್‌, ಟ್ವಿಟರ್‌ ಇಂಕ್‌, ಪತ್ರಕರ್ತ ನಿಖಿಲ್‌ ಪಟವರ್ಧನ್‌ ಮತ್ತು ಸಿಕೊಯಾ ಕ್ಯಾಪಿಟಲ್‌ಗೆ ಆಕ್ಷೇಪಣೆ ಸಲ್ಲಿಸಲು ನ್ಯಾಯಾಲಯ ಆದೇಶಿಸಿದ್ದು, ವಿಚಾರಣೆಯನ್ನು ಜೂನ್‌ 18ಕ್ಕೆ ಮುಂದೂಡಿದೆ.

ಉಭಯ ಪಕ್ಷಕಾರರ ವಾದ ಪರಿಶೀಲಿಸಿದ್ದು, ಪ್ರತಿವಾದಿಗಳಿಗೆ ಅವಕಾಶ ಮಾಡಿಕೊಟ್ಟು ತಕರಾರನ್ನು ಪಡೆದುಕೊಂಡು ಮಧ್ಯಂತರ ಅರ್ಜಿಗಳ ಮೇಲೆ ಆದೇಶ ಮಾಡುವುದು ಸೂಕ್ತ ಎಂದು ನ್ಯಾಯಾಲಯಕ್ಕೆ ಕಂಡುಬಂದಿದ್ದರಿಂದ ಇಂದು ಆದೇಶ ಮಾಡಲು ಕಾಯ್ದಿರಿಸಲಾಗಿತ್ತು. ಈ ವಿಷಯಕ್ಕೆ ಸಂಬಂಧಿಸಿದಂತೆ ಶೀಘ್ರ ಲಿಪಿಗಾರರಿಗೆ ಹೇಳಿದ್ದು, ಇನ್ನುಳಿದ ವಿಷಯದ ಬಗ್ಗೆ ಬೆರಳಚ್ಚು ಮಾಡಿರುವುದಿಲ್ಲ. ಈ ಹಂತದಲ್ಲಿ ಪ್ರತಿವಾದಿಗಳು ಅರ್ಜಿ ಸಲ್ಲಿಸಿರುವುದರಿಂದ ಆದೇಶ ಮಾಡಲಾಗಿಲ್ಲ. ಈ ಹಿನ್ನೆಲೆಯಲ್ಲಿ ಆದೇಶಕ್ಕಾಗಿ ಇದ್ದ ಹಂತವನ್ನು ತೆರವುಗೊಳಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

ಸಂದೀಪ್‌ ಕಪೂರ್‌ ಅವರು ಆಲ್ಗೊ ಲೀಗಲ್‌ನ ಪಾಲುದಾರರಾಗಿದ್ದು, ಈ ಸಂಸ್ಥೆಯಲ್ಲಿ 85 ವಕೀಲರು ಹಾಗೂ 15 ಸಿಬ್ಬಂದಿ ಇದ್ದಾರೆ. ಅರ್ಜಿದಾರರ ಘನತೆಗೆ ಚ್ಯುತಿಯುಂಟಾಗುವಂಥ ಬರಹಗಳನ್ನು ಪ್ರತಿವಾದಿಗಳು ವಿದ್ಯುನ್ಮಾನ ಮಾಧ್ಯಮ, ಪತ್ರಿಕೆ, ನೆಟ್‌ವರ್ಕ್‌, ವೆಬ್‌ಸೈಟ್‌, ಟ್ವಿಟರ್‌ನಲ್ಲಿ ಪ್ರಕಟ ಮಾಡಿದ್ದಾರೆ ಎಂಬುದು ನ್ಯಾಯಾಲಯದ ಮುಂದೆ ಇಟ್ಟಿರುವ ದಾಖಲೆಗಳಿಂದ ಮೇಲ್ನೋಟಕ್ಕೆ ತಿಳಿದುಬಂದಿದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ಇತ್ತ ಪ್ರತಿವಾದಿಗಳ ಪರ ವಕೀಲರು ತಮಗೆ ಅವಕಾಶ ಕೊಡದೇ ತಾತ್ಕಾಲಿಕ ನಿರ್ಬಂಧಕಾದೇಶ ಮಾಡುವುದರಿಂದ ತಮಗೆ ತೊಂದರೆಯಾಗುತ್ತದೆ ಎಂದು ವಾದಿಸಿದ್ದನ್ನೂ ಪೀಠವು ಆದೇಶದಲ್ಲಿ ದಾಖಲಿಸಿದೆ.

ಪ್ರಕರಣದ ಹಿನ್ನೆಲೆ: ಸಿಕೊಯಾ ಕ್ಯಾಪಿಟಲ್‌ ಜೊತೆ ವ್ಯವಹಾರ ಹೊಂದಿರುವ ಕೆಲವು ಕಂಪೆನಿಗಳು ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ ಉಲ್ಲಂಘಿಸಿದ್ದು, ಆದಾಯ ತೆರಿಗೆ ಹಾಗೂ ಜಾರಿ ನಿರ್ದೇಶನಾಲಯಕ್ಕೆ ಪ್ರಕರಣ ದಾಖಲಿಸಲು ಸೂಚಿಸಲಾಗುವುದು ಎಂದು ಕೆಲವು ಕಂಪೆನಿಗಳಿಗೆ ಆಲ್ಗೊ ಲೀಗಲ್‌ನ ಸಂದೀಪ್‌ ಕಪೂರ್‌ ಅವರು ಬೆದರಿಕೆ ಹಾಕಿದ್ದರು ಎಂದು ಆರೋಪಿಸಲಾಗಿದೆ. ಈ ಹಿನ್ನೆಲೆಯಲ್ಲಿ ಸಿಕೊಯಾ ಕ್ಯಾಪಿಟಲ್‌ ತನ್ನ ಜೊತೆ ವ್ಯವಹಾರ ಹೊಂದಿರುವ ಸಂಸ್ಥೆಗಳಿಗೆ ಆಲ್ಗೊ ಲೀಗಲ್‌ಗೆ ಸಂಬಂಧಿಸಿದಂತೆ ಕೆಲ ಕಳವಳಕಾರಿ ಬೆಳವಣಿಗೆಗಳು ನಡೆದಿವೆ ಎಂದು ತನ್ನ ಜೊತೆ ವ್ಯವಹಾರ ಹೊಂದಿರುವ ಕಂಪೆನಿಗಳಿಗೆ ಈಮೇಲ್‌ ಕಳುಹಿಸಿತ್ತು.

ಈ ಹಿಂದೆ ಸಿಕೊಯಾ ಕ್ಯಾಪಿಟಲ್‌ನಲ್ಲಿ ಕಾನೂನು ವಿಭಾಗದ ನಿರ್ದೇಶಕರಾಗಿದ್ದ ಕಪೂರ್‌ ಅವರು ತಮ್ಮ ಸ್ಥಾನವನ್ನು ದುರ್ಬಳಕೆ ಮಾಡಿಕೊಂಡು, ಸಿಕೊಯಾ ಜೊತೆಗೆ ವ್ಯವಹಾರ ಹೊಂದಿರುವ ಕಂಪೆನಿಗಳು ತಮ್ಮ ಒಡೆತನದ ಆಲ್ಗೊ ಲೀಗಲ್‌ ಅನ್ನು ಕಾನೂನು ಸಂಬಂಧಿತ ಕೆಲಸಗಳಿಗೆ ನೇಮಕ ಮಾಡಿಕೊಳ್ಳಲು ಒತ್ತಡ ಹೇರಿದ್ದರು ಎಂದು ಲೇಖನಗಳಲ್ಲಿ ಆರೋಪಿಸಲಾಗಿತ್ತು. ಇದರಿಂದ ತಮ್ಮ ಮತ್ತು ಸಂಸ್ಥೆಯ ಘನತೆಗೆ ಚ್ಯುತಿಯಾಗಿದೆ ಎಂದು ಸಂದೀಪ್‌ ಕಪೂರ್‌ ನ್ಯಾಯಾಲಯದ ಮೆಟ್ಟಿಲೇರಿದ್ದು, ಮಾನನಷ್ಟ ದಾವೆ ಹೂಡಿದ್ದಾರೆ.