Death certificate, Supreme Court
Death certificate, Supreme Court 
ಸುದ್ದಿಗಳು

ಸಹ ಅಸ್ವಸ್ಥತೆ ಸೇರಿದಂತೆ ಕೋವಿಡ್ ಲಕ್ಷಣವುಳ್ಳ ಎಲ್ಲಾ ಮರಣಗಳನ್ನು ಕೋವಿಡ್ ಸಾವು ಎಂದು ವರ್ಗೀಕರಿಸಲಾಗುವುದು: ಕೇಂದ್ರ

Bar & Bench

ಸಹ ಅಸ್ವಸ್ಥತೆಯೂ ಸೇರಿದಂತೆ ಕೋವಿಡ್‌ ರೋಗಲಕ್ಷಣದಿಂದ ಸಂಭವಿಸಿದ ಎಲ್ಲಾ ಸಾವುಗಳನ್ನು ಕೋವಿಡ್‌ ಸಾವು ಎಂದು ವರ್ಗೀಕರಿಸಲಾಗುವುದು ಎಂಬುದಾಗಿ ಕೇಂದ್ರ ಸರ್ಕಾರ ಸುಪ್ರೀಂಕೋರ್ಟ್‌ಗೆ ತಿಳಿಸಿದೆ. (ಗೌರವ್ ಕುಮಾರ್ ಬನ್ಸಾಲ್ ಮತ್ತು ಕೇಂದ್ರ ಸರ್ಕಾರದ ನಡುವಣ ಪ್ರಕರಣ).

ಕೋವಿಡ್‌ನಿಂದ ಸಾವು ಸಂಭವಿಸಿಲ್ಲ ಎಂಬುದಕ್ಕೆ ಸ್ಪಷ್ಟ ಪರ್ಯಾಯ ಕಾರಣವಿದ್ದಲ್ಲಿ ಮಾತ್ರ ಮರಣ ಪ್ರಮಾಣಪತ್ರದಲ್ಲಿ ಕೋವಿಡ್‌ ಹೊರತಾದ ಸಾವು ಎಂದು ಉಲ್ಲೇಖಿಸಬಹುದು ಎಂಬುದಾಗಿ ಕೇಂದ್ರ ಗೃಹ ಸಚಿವಾಲಯ ತಿಳಿಸಿದೆ.

“ಸಹ ಅಸ್ವಸ್ಥತೆಯೂ ಸೇರಿದಂತೆ ಕೋವಿಡ್‌ ರೋಗಲಕ್ಷಣದಿಂದ ಸಂಭವಿಸಿದ ಎಲ್ಲಾ ಸಾವುಗಳನ್ನು ಕೋವಿಡ್‌ ಸಾವು ಎಂದು ವರ್ಗೀಕರಿಸಲಾಗುವುದು. ಸಾವಿಗೆ ಸ್ಪಷ್ಟವಾದ ಕಾರಣವಿದ್ದಲ್ಲಿ ಮಾತ್ರ ಇದಕ್ಕೆ ವಿನಾಯಿತಿ ಇದ್ದು ಆಗ ಅದನ್ನು ಕೋವಿಡ್‌ ಕಾರಣ ಎಂದು ಹೇಳಲಾಗದು. ಅಲ್ಲಿ ಕೋವಿಡ್‌ ಒಂದು ಪ್ರಾಸಂಗಿಕ ಶೋಧವಾಗಿದೆ (ಉದಾ: ಅಪಘಾತದಿಂದಾದ ಸಾವು, ವಿಷಪ್ರಾಶನ, ಅಕ್ಯೂಟ್‌ ಮಯೋಕಾರ್ಡಿಯಲ್ ಇನ್ಫಾರ್ಕ್ಷನ್ ಇತ್ಯಾದಿ)” ಎಂದು ಸಚಿವಾಲಯದ ಅಫಿಡವಿಟ್‌ ತಿಳಿಸಿದೆ.

ರಾಜ್ಯ ಸರ್ಕಾರ/ ಕೇಂದ್ರಾಡಳಿತ ಪ್ರದೇಶಗಳು ತಮ್ಮ ರಾಜ್ಯಕ್ಕೆ ಸಂಬಂಧಿಸಿದ ಮರಣ ಗಣತಿ ಮಾದರಿ ಬಳಕೆಯನ್ನು ಮುಂದುವರೆಸಬಹುದಾಗಿದ್ದು ಇದು ನಿಯತಾಂಕಗಳನ್ನು ದೊಡ್ಡಮಟ್ಟದಲ್ಲಿ ಸಂಗ್ರಹಿಸುತ್ತದೆ ಎಂದು ಸಚಿವಾಲಯ ಹೇಳಿದೆ.

ಮ್ಯೂಕೋರ್ಮೈಕೋಸಿಸ್ (ಬ್ಲ್ಯಾಕ್‌ ಫಂಗಸ್‌) ಸೇರಿದಂತೆ ಕೋವಿಡ್‌ಗೆ ಬಲಿಯಾದವರಿಗೆ ಅಥವಾ ಅದರ ಅಡ್ಡಪರಿಣಾಮಗಳಿಗೆ ತುತ್ತಾಗಿ ಸಾವನ್ನಪ್ಪಿದವರ ಕುಟುಂಬಗಳಿಗೆ ರೂ 4 ಲಕ್ಷ ಪರಿಹಾರ ಒದಗಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಗೆ ಗೃಹ ಸಚಿವಾಲಯ ಈ ಪ್ರತಿಕ್ರಿಯೆ ನೀಡಿದೆ.

ವಿಪತ್ತು ನಿರ್ವಹಣಾ ಕಾಯಿದೆ- 2005ರ ಸೆಕ್ಷನ್‌ 12ನ್ನು ಉಲ್ಲೇಖಿಸಿ ವಕೀಲರಾದ ಗೌರವ್ ಕುಮಾರ್ ಬನ್ಸಾಲ್ ಮತ್ತು ರೀಪಕ್ ಕನ್ಸಾಲ್ ಅವರು ಅರ್ಜಿ ಸಲ್ಲಿಸಿದ್ದರು. ದುರ್ಘಟನೆಗಳಿಂದ ತೊಂದರೆಗೊಳಗಾದ ವ್ಯಕ್ತಿಗಳಿಗೆ ಒದಗಿಸಬೇಕಾದ ಕನಿಷ್ಠ ಪರಿಹಾರ ಮಾನದಂಡಕ್ಕಾಗಿ ಕೃಪಾನುದಾನದ ನೆರವು ಒದಗಿಸುವುದು ಸೇರಿದಂತೆ ರಾಷ್ಟ್ರೀಯ ಪ್ರಾಧಿಕಾರ ಶಿಫಾರಸು ಮಾಡಬೇಕು ಎಂದು ಆ ಸೆಕ್ಷನ್‌ ತಿಳಿಸುತ್ತದೆ.

ಈ ಹಿಂದಿನ ವಿಚಾರಣೆ ವೇಳೆ ಪೀಠ, ಕೆಲ ಪ್ರಕರಣಗಳಲ್ಲಿ ಕೋವಿಡ್‌ನಿಂದ ಸಾವು ಸಂಭವಿಸಿದ್ದರೂ ಅದನ್ನು ಉಲ್ಲೇಖಿಸದ ಮರಣ ಪ್ರಮಾಣಪತ್ರಗಳ ಕುರಿತಂತೆ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿತ್ತು. ಜೊತೆಗೆ ಈ ನಿಟ್ಟಿನಲ್ಲಿ ಏಕರೂಪದ ನೀತಿ ರೂಪಿಸಬಹುದೇ ಎಂದು ಕೇಳಿತ್ತು.

ಕೃಪಾನುದಾನ ಕೋರಿದ್ದ ಅರ್ಜಿದಾರರ ಪರ ವಾದ ಮಂಡಿಸಿದ ಹಿರಿಯ ನ್ಯಾಯವಾದಿ ಎಸ್‌ ಬಿ ಉಪಾಧ್ಯಾಯ ಕೋವಿಡ್‌ನಿಂದ ಸಾವು ಸಂಭವಿಸಿದೆ ಎಂದು ಪ್ರಮಾಣ ಪತ್ರ ನೀಡಬೇಕು. ಕೋವಿಡ್‌ನಿಂದ ಸಾವು ಸಂಭವಿಸಿದ್ದರೂ ಮರಣ ಪ್ರಮಾಣಪತ್ರದಲ್ಲಿ ಅದನ್ನು ಉಲ್ಲೇಖಿಸದೆ ಶವಾಗಾರದಿಂದ ಚಿತಾಗಾರಕ್ಕೆ ಶವಗಳನ್ನು ಸಾಗಿಸಲಾಗುತ್ತಿದೆ ಎಂದು ನ್ಯಾಯಾಲಯದ ಗಮನ ಸೆಳೆದಿದ್ದರು.

ಮರಣ ಪ್ರಮಾಣ ಪತ್ರದಲ್ಲಿ ಸಾವಿನ ಕಾರಣ ಏಕೆ ಉಲ್ಲೇಖಿಸಿಲ್ಲ ಎಂಬುದನ್ನು ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ ತಿಳಿಸಿದೆ. “ಜನನ ಮತ್ತು ಮರಣ ನೋಂದಣಿ ಕಾಯಿದೆ- 1969ರ ಸೆಕ್ಷನ್‌ 17ರ ಪ್ರಕಾರ ಯಾವುದೇ ವ್ಯಕ್ತಿಗೆ ನೀಡಲಾದ ಯಾವುದೇ ಸಾವಿಗೆ ಸಂಬಂಧಿಸಿದ ಉಲ್ಲೇಖದಲ್ಲಿ ರಿಜಿಸ್ಟ್ರಾರ್‌ನಲ್ಲಿ ನಮೂದಿಸಿರುವ ಕಾರಣವನ್ನು ಬಹಿರಂಗಪಡಿಸಬಾರದು ಎಂದು ಹೇಳಿದೆ. "ಹೀಗಾಗಿ, ಸಾವಿನ ಉಲ್ಲೇಖ / ಪ್ರಮಾಣಪತ್ರವು ವ್ಯಕ್ತಿಯ ಸಾವಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ಒಳಗೊಂಡಿಲ್ಲ, ಆದ್ದರಿಂದ ಮರಣ ಪ್ರಮಾಣಪತ್ರವು ಯಾವುದೇ ವ್ಯಕ್ತಿಯ ಸಾವಿಗೆ ಕಾರಣ ಸೂಚಿಸುವುದಿಲ್ಲ ಎಂದು ಅತ್ಯಂತ ಗೌರವಯುತವಾಗಿ ಹೇಳುತ್ತಿದ್ದೇವೆ" ಎಂಬುದಾಗಿ ಸಚಿವಾಲಯ ಸ್ಪಷ್ಟಪಡಿಸಿದೆ.

ಅಲ್ಲದೆ ಸಚಿವಾಲಯ ತನ್ನ ಅಫಿಡವಿಟ್‌ನಲ್ಲಿ “ಕೋವಿಡ್‌ ಸಾಂಕ್ರಾಮಿಕದಿಂದ ಮೃತಪಟ್ಟವರಿಗೆ ರೂ 4 ಲಕ್ಷ ಕೃಪಾನುದಾನ ನೀಡುವುದು ಸಾಧ್ಯವಿಲ್ಲ. ಸರ್ಕಾರದ ಸಂಪನ್ಮೂಲಗಳಿಗೆ ಮಿತಿಗಳಿದ್ದು ಹಾಗೆ ಹಣ ವಿನಿಯೋಗಿಸಿದರೆ ಸರ್ಕಾರದ ವಿಪತ್ತು ಪರಿಹಾರ ನಿಧಿಯ ಸಂಪೂರ್ಣ ಮೊತ್ತ ಖಾಲಿಯಾಗುತ್ತದೆ” ಎಂದು ತಿಳಿಸಿದೆ.