AIBE exam and Bar council of India
AIBE exam and Bar council of India 
ಸುದ್ದಿಗಳು

ಫೆ. 5ಕ್ಕೆ ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆ; ಏಪ್ರಿಲ್‌ನಲ್ಲಿ ಫಲಿತಾಂಶ: ದೆಹಲಿ ಹೈಕೋರ್ಟ್‌ಗೆ ಬಿಸಿಐ ವಿವರಣೆ

Bar & Bench

ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷೆ (ಎಐಬಿಇ) ಫೆಬ್ರವರಿ 5ರಂದು ನಡೆಯಲಿದ್ದು ಪರೀಕ್ಷೆಯ ಫಲಿತಾಂಶ ಏಪ್ರಿಲ್‌ ವೇಳೆ ಪ್ರಕಟವಾಗಲಿದೆ ಎಂದು ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಶುಕ್ರವಾರ ದೆಹಲಿ ಹೈಕೋರ್ಟ್‌ಗೆ ತಿಳಿಸಿದೆ.

ಪರೀಕ್ಷೆ ನಡೆಸದಿದ್ದ ಅಕ್ಟೋಬರ್ 2021 ಮತ್ತು ಏಪ್ರಿಲ್ 2023ರ ನಡುವಿನ ಅವಧಿಯನ್ನು, ʼಪರೀಕ್ಷೆಯನ್ನು ಉತ್ತೀರ್ಣವಾಗಬೇಕೆಂಬ ಎರಡು ವರ್ಷಗಳ ಕಡ್ಡಾಯ ಅವಧಿಯ ಭಾಗವಾಗಿ ಪರಿಗಣಿಸುವುದಿಲ್ಲ ಎಂಬುದಾಗಿ 2022ರ ಡಿಸೆಂಬರ್ 30ರಂದು ನಿರ್ಣಯ ಕೈಗೊಳ್ಳಲಾಗಿದೆʼ ಎಂದು ಅದು ನ್ಯಾಯಾಲಯಕ್ಕೆ ವಿವರಿಸಿದೆ.

ಅಖಿಲ ಭಾರತ ನ್ಯಾಯವಾದಿ ವರ್ಗದ ಪರೀಕ್ಷಾ ನಿಯಮಾವಳಿ ಪ್ರಕಾರ ವಕೀಲರು ನ್ಯಾಯಾಲಯಗಳಲ್ಲಿ ಪ್ರಾಕ್ಟೀಸ್‌ ಮಾಡಲು ಎಐಬಿಇ ಉತ್ತೀರ್ಣರಾಗಿರಬೇಕು. ಎಐಬಿಇಗೆ ಅರ್ಹತೆ ಪಡೆಯದ ವಕೀಲರು ಎರಡು ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ಪ್ರಾಕ್ಟೀಸ್‌ ಮಾಡಬಹುದಾಗಿದ್ದರೂ ಎರಡು ವರ್ಷಗಳ ನಂತರ ಪ್ರಾಕ್ಟೀಸ್‌ ಮುಂದುವರೆಸಬೇಕಾದರೆ ಅವರು ಪರೀಕ್ಷೆ ಉತ್ತೀರ್ಣರಾಗಿರಲೇಬೇಕು.

ನಿಶಾಂತ್ ಖತ್ರಿ ಎಂಬ ವಕೀಲರ ಮನವಿಗೆ ಪ್ರತಿಕ್ರಿಯೆಯಾಗಿ ಸಲ್ಲಿಸಿದ್ದ ಸ್ಥಿತಿಗತಿ ವರದಿಯಲ್ಲಿ ಬಿಸಿಐ ಈ ಹೇಳಿಕೆಗಳನ್ನು ನೀಡಿದೆ. 2019ರ ನವೆಂಬರ್‌ನಲ್ಲಿ ತಾನು ದೆಹಲಿ ವಕೀಲರ ಪರಿಷತ್ತಿನಲ್ಲಿ ವಕೀಲನಾಗಿ ನೋಂದಾಯಿಸಿಕೊಂಡಿದ್ದು ಅಕ್ಟೋಬರ್ 2021ರ ನಂತರ (ಕೋವಿಡ್‌ ಕಾರಣಕ್ಕೆ) ಎಐಬಿಇ ಪರೀಕ್ಷೆಗಳು ನಡೆಯದ ಹಿನ್ನೆಲೆಯಲ್ಲಿ ತಮ್ಮ ಪ್ರಾಕ್ಟೀಸ್‌ಗೆ ತಡೆ ನೀಡಬಾರದು ಎಂದು ಖತ್ರಿ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.

ಖತ್ರಿ ಅವರು ಪ್ರಾಕ್ಟೀಸ್‌ ಮಾಡುವುದನ್ನು ತಡೆಯುವಂತಿಲ್ಲ ಎಂದು ಅರ್ಜಿ ಆಲಿಸಿದ್ದ ನ್ಯಾ. ಪ್ರತಿಭಾ ಎಂ ಸಿಂಗ್‌ ಅವರು ಈ ಹಿಂದೆ ಹೇಳಿದ್ದರು. ಜೊತೆಗೆ ಎಐಬಿಇ ಪರೀಕ್ಷೆ ಯಾವಾಗ ನಡೆಯಲಿವೆ ಎಂಬುದನ್ನು ತಿಳಿಸಬೇಕು ಮತ್ತು ಸ್ಥಿತಿಗತಿ ವರದಿ ಸಲ್ಲಿಸಬೇಕು ಎಂದು ಬಿಸಿಐಗೆ ಸೂಚಿಸಿದ್ದರು. ಇದೇ ವೇಳೆ ಪೂರ್ವನಿಗದಿತ ವೇಳಾಪಟ್ಟಿ ಜಾರಿಗೊಳಿಸುವಂತೆ ಬಿಸಿಐಗೆ ತಿಳಿಸಲಾಗಿತ್ತು. ಪೂರ್ವ ನಿಗದಿತ ವೇಳಾಪಟ್ಟಿಯ ವಿಚಾರವಾಗಿ ತನ್ನ ಮುಂದಿನ ಸಭೆಗಳಲ್ಲಿ ನಿರ್ಣಯಿಸಲಾಗುವುದು ಎಂದು ಬಿಸಿಐ ಹೇಳಿತು. ವಾದ ಆಲಿಸಿದ ನ್ಯಾ. ಪ್ರತಿಭಾ ಅವರು ಪ್ರಕರಣವನ್ನು ಮೇ 4ಕ್ಕೆ ಮುಂದೂಡಿದರು.