CM Siddaramiah's Budget speech 
ಸುದ್ದಿಗಳು

ರಾಜ್ಯದ ಎಲ್ಲಾ ಕಾಯಿದೆಗಳು ಕನ್ನಡದಲ್ಲಿ; ಕೇಂದ್ರದ ಎಲ್ಲಾ ಕಾನೂನುಗಳು ಕನ್ನಡಕ್ಕೆ ಭಾಷಾಂತರ: ಸಿಎಂ ಸಿದ್ದರಾಮಯ್ಯ ಘೋಷಣೆ

ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೊಳಿಸಲು ಮೂಲಭೂತ ಸೌಕರ್ಯಗಳಾದ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ ₹175 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ ಭಾಷಣದಲ್ಲಿ ಘೋಷಿಸಿರುವ ಸಿಎಂ ಸಿದ್ದರಾಮಯ್ಯ.

Bar & Bench

ರಾಜ್ಯ ಸರ್ಕಾರದಿಂದ ರಚಿಸಲ್ಪಡುವ ಎಲ್ಲಾ ಕಾಯಿದೆಗಳನ್ನು ಕನ್ನಡದಲ್ಲಿ ಸಿದ್ಧಪಡಿಸಲಾಗುವುದು ಮತ್ತು ಕೇಂದ್ರ ಸರ್ಕಾರವು ಇಲ್ಲಿಯವರೆಗೆ ರೂಪಿಸಿರುವ ಎಲ್ಲಾ ಕಾಯಿದೆಗಳನ್ನು ಕನ್ನಡಕ್ಕೆ ಭಾಷಾಂತರಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶುಕ್ರವಾರ ಘೋಷಿಸಿದ್ದಾರೆ.

ದಾಖಲೆಯ 17ನೇ ಬಜೆಟ್‌ ಮಂಡಿಸಿರುವ ಹಣಕಾಸು ಸಚಿವರೂ ಆದ ಸಿದ್ದರಾಮಯ್ಯ ಅವರು ನ್ಯಾಯಾಂಗ ವ್ಯವಸ್ಥೆ ಸುಧಾರಣೆಗೊಳಿಸಲು ಮೂಲಭೂತ ಸೌಕರ್ಯಗಳಾದ ನ್ಯಾಯಾಲಯ ಕಟ್ಟಡ ಹಾಗೂ ನ್ಯಾಯಾಧೀಶರಿಗೆ ವಸತಿ ಗೃಹ ನಿರ್ಮಾಣಕ್ಕಾಗಿ ₹175 ಕೋಟಿ ಒದಗಿಸಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಕಾಗದರಹಿತ, ಸಮರ್ಥ ಮತ್ತು ನಾಗರಿಕ-ಕೇಂದ್ರಿತ ನ್ಯಾಯಾಂಗವನ್ನು ಜಾರಿಗೆ ತರುವ ನಿಟ್ಟಿನಲ್ಲಿ ಬೆಂಗಳೂರು, ಧಾರವಾಡ, ಕಲಬುರ್ಗಿ ಮತ್ತು ಮೈಸೂರು ನಗರಗಳಲ್ಲಿ ಪ್ರಾಯೋಗಿಕವಾಗಿ ʻಇ-ಕೋರ್ಟ್ʼ ಗಳನ್ನು ₹10 ಕೋಟಿ ವೆಚ್ಚದಲ್ಲಿ ಸ್ಥಾಪಿಸಲಾಗುವುದು ಎಂದು ವಿವರಿಸಿದ್ದಾರೆ.

ಅಡ್ವೋಕೇಟ್‌ ಜನರಲ್‌ ಕಚೇರಿಗೆ ಗ್ರಂಥಾಲಯ, ವಿಡಿಯೊ ಕಾನ್ಫರೆನ್ಸ್‌ ಸೌಲಭ್ಯ ಒದಗಿಸಲು ಹಾಗೂ ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಕಚೇರಿಗಳಲ್ಲಿನ CCMS ಮತ್ತು e-filing ಗೆ ಅಗತ್ಯವಿರುವ ಮೂಲ ಸೌಕರ್ಯ  ಉನ್ನತೀಕರಿಸಲು ₹5 ಕೋಟಿ ಒದಗಿಸಲಾಗುವುದು ಎಂದು ಸಿದ್ದರಾಮಯ್ಯ ತಿಳಿಸಿದ್ದಾರೆ.

ನ್ಯಾಯಾಲಯಗಳಲ್ಲಿನ ಪ್ರಕರಣಗಳನ್ನು ಮಧ್ಯಸ್ಥಿಕೆ ಮೂಲಕ ಇತ್ಯರ್ಥಗೊಳಿಸಿ ಕಡಿಮೆ ಮಾಡಬಹುದಾಗಿದ್ದು, ಮಧ್ಯಸ್ಥಿಕೆಯಲ್ಲಿ ಆಸಕ್ತಿ ಇರುವ ನ್ಯಾಯಾಧೀಶರು ಮತ್ತು ವಕೀಲರಿಗೆ ತರಬೇತಿ ನೀಡಲು ಉದ್ದೇಶಿಸಲಾಗಿದೆ ಎಂದೂ ಹೇಳಲಾಗಿದೆ. ಬೆಂಗಳೂರು ದಕ್ಷಿಣ ಜಿಲ್ಲೆಯ ರಾಮನಗರದಲ್ಲಿ ಜಿಲ್ಲಾ ನ್ಯಾಯಾಲಯ ಸಂಕೀರ್ಣವನ್ನು ನಿರ್ಮಾಣ ಮಾಡಲಾಗುವುದು ಎಂದು ಬಜೆಟ್‌ನಲ್ಲಿ ತಿಳಿಸಿದ್ದಾರೆ.

ಕಳೆದ ಸಾಲಿನಲ್ಲಿ ವಿಶೇಷ ಲೋಕ್‌ ಅದಾಲತ್‌ಗಳನ್ನು ನಡೆಸಿ 2.82 ಕೋಟಿ ಸಿವಿಲ್‌ ಪ್ರಕರಣಗಳನ್ನು ಮತ್ತು 1,113 ಭೂಸ್ವಾಧೀನ ಪ್ರಕರಣಗಳನ್ನು ಅನುಕ್ರಮವಾಗಿ ₹9,978 ಕೋಟಿ ಮತ್ತು ₹132 ಕೋಟಿ ಪರಿಹಾರದ ಮೊತ್ತದೊಂದಿಗೆ ಇತ್ಯರ್ಥಪಡಿಸಲಾಗಿದೆ ಎಂದು ತಿಳಿಸಲಾಗಿದೆ.

ಇದೆಲ್ಲದರ ಜೊತೆಗೆ ರಾಜ್ಯದ ಎಲ್ಲಾ ಸರ್ಕಾರಿ, ಖಾಸಗಿ ಮತ್ತು ಡೀಮ್ಡ್‌ ವಿಶ್ವವಿದ್ಯಾಲಯಗಳಲ್ಲಿ ಜಾತಿ ಆಧಾರದ ಮೇಲೆ ವಿದ್ಯಾರ್ಥಿಗಳ ಮೇಲೆ ನಡೆಯುವ ʻಶೈಕ್ಷಣಿಕ ಮತ್ತು ಸಾಮಾಜಿಕ ದೌರ್ಜನ್ಯʼವನ್ನು ತಡೆತಲು ರೋಹಿತ್‌ ವೇಮುಲ ಕಾಯಿದೆ ಜಾರಿಗೆ ತರಲಾಗುವುದು ಎಂದು ಸಿದ್ದರಾಮಯ್ಯ ಘೋಷಿಸಿದ್ದಾರೆ.

ಅಲ್ಲದೇ, ಹೆಚ್ಚುತ್ತಿರುವ ಮೊಬೈಲ್‌ ಬಳಕೆಯಿಂದ ಮಕ್ಕಳ ಮೇಲೆ ಬೀರುವ ಅಡ್ಡ ಪರಿಣಾಮಗಳನ್ನು ತಡೆಗಟ್ಟುವ ಉದ್ದೇಶದಿಂದ 16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣದ ಬಳಕೆಯನ್ನು ನಿಷೇಧಿಸಲಾಗುವುದು ಎಂದು ಸರ್ಕಾರ ಘೋಷಣೆ ಮಾಡಿದೆ.

ಕರ್ನಾಟಕದ ಆಯವ್ಯಯ 2026-27 -ಕನ್ನಡ.pdf.pdf
Preview