ಸುದ್ದಿಗಳು

ಭ್ರಷ್ಟಾಚಾರ ಬೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಕಾರಣ: ನ್ಯಾ. ಸಂತೋಷ್‌ ಹೆಗ್ಡೆ

ಜೈಲಿಂದ ಹೊರಬಂದವನ್ನು ಇಡೀ ಸಮಾಜ ಬಹಿಷ್ಕರಿಸುವ ಒಂದು ಕಾಲವಿತ್ತು. ಸದ್ಯ ಜೈಲಿನಿಂದ ಹೊರಬಂದವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಗುತ್ತಿದೆ. ವಿವಿಧ ಮಟ್ಟದಲ್ಲಿರುವ ಭ್ರಷ್ಟಾಚಾರವು ಸಾಮಾಜಿಕ ಮೌಲ್ಯ ಕುಸಿಯುವಂತೆ ಮಾಡಿದೆ ಎಂದ ನ್ಯಾ. ಹೆಗ್ಡೆ.

Bar & Bench

“ದೇಶದಲ್ಲಿ ಭ್ರಷ್ಟಾಚಾರ ಬೃಹದಾಕಾರವಾಗಿ ಬೆಳೆಯಲು ಎಲ್ಲಾ ರಾಜಕೀಯ ಪಕ್ಷಗಳು ಸಮಾನವಾಗಿ ಕಾರಣ” ಎಂದು ನಿವೃತ್ತ ಲೋಕಾಯುಕ್ತ ಸಂತೋಷ್ ಹೆಗ್ಡೆ ಬೇಸರ ವ್ಯಕ್ತಪಡಿಸಿದರು.

ಬೆಂಗಳೂರು ವಕೀಲರ ಸಂಘ ಮಂಗಳವಾರ ಹೈಕೋರ್ಟ್ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ‘ನೈತಿಕ ಮತ್ತು ಸಾಂವಿಧಾನಿಕ ಮೌಲ್ಯಗಳ ಅಧಃಪತನ’ ವಿಷಯ ಕುರಿತ ಸಂವಾದದಲ್ಲಿ ಅವರು ಮಾತನಾಡಿದರು.

“ಜೈಲಿನಿಂದ ಹೊರಬಂದವನ್ನು ಇಡೀ ಸಮಾಜವು ಬಹಿಷ್ಕರಿಸುವ ಒಂದು ಕಾಲವಿತ್ತು. ಸದ್ಯ ಜೈಲಿನಿಂದ ಹೊರಬಂದವರನ್ನು ಹೂವಿನ ಹಾರ ಹಾಕಿ ಸ್ವಾಗತಿಸಲಾಗುತ್ತಿದೆ. ವಿವಿಧ ಮಟ್ಟದಲ್ಲಿರುವ ಭ್ರಷ್ಟಾಚಾರವು ಸಾಮಾಜಿಕ ಮೌಲ್ಯ ಕುಸಿಯುವಂತೆ ಮಾಡಿದೆ. 1960ರಲ್ಲಿ ಶಾಸಕರಿಗೆ ವೇತನ ಕೊಡುತ್ತಿರಲಿಲ್ಲ. ಆದರೂ ಅವರು ಸಾರ್ವಜನಿಕರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಪ್ರಸ್ತುತ ಶಾಸಕರಿಗೆ ತಿಂಗಳಿಗೆ ಎರಡು ಲಕ್ಷ ರೂಪಾಯಿ ವೇತನ ಪಾವತಿಸುತ್ತಿದ್ದರೂ ಭ್ರಷ್ಟಾಚಾರ ಉತ್ತುಂಗಕ್ಕೆ ಏರಿದೆ. ಅದಕ್ಕೆ ದೇಶದ ಎಲ್ಲಾ ರಾಜಕೀಯ ಪಕ್ಷಗಳು ಸಮಾನ ಹೊಣೆಗಾರರವಾಗಿರುವುದು ದುಖಃದ ಸಂಗತಿ” ಎಂದು ವಿಷಾದಿಸಿದರು.

“ಲೋಕಾಯುಕ್ತನಾಗುವ ಮೊದಲು ನಾನು ಭಾವಿಯಲ್ಲಿ ಕಪ್ಪೆಯಂತಿದ್ದೆ. ಲೋಕಾಯುಕ್ತನಾದ ಬಳಿಕ ಭ್ರಷ್ಟಾಚಾರದ ಸಮಸ್ಯೆಯನ್ನು ಹತ್ತಿರದಿಂದ ಕಂಡು ಆಘಾತಗೊಂಡೆ. ನೈತಿಕ ಮೌಲ್ಯಗಳಿಗಾಗಿ ಹೊರಾಡಬೇಕಾಗಿರುವ ಸಮಾಜ, ಸ್ವಾರ್ಥ ಮತ್ತು ದುರಾಸೆಯಲ್ಲಿ ಮುಳುಗಿ ಹೋಗಿದೆ. ಎಲ್ಲರೂ ಮಾನವೀಯತೆ ಕಳೆದುಕೊಂಡಿದ್ದಾರೆ. 1954ರ ಜೀಪ್ಸ್ ಹಗರಣದ ಮೊತ್ತ 54 ಲಕ್ಷ ರೂಪಾಯಿ ಆಗಿತ್ತು. 2ಜಿ ಹಗರಣ ನಡೆದಾಗ ಭ್ರಷ್ಟಾಚಾರದ ಹಗರಣದ ಮೊತ್ತ 1.76 ಸಾವಿರ ಕೋಟಿ ರೂಪಾಯಿ ದಾಟಿತ್ತು” ಎಂದು ಹೇಳಿದರು.

“ನನ್ನ ಜೀವಮಾನದಲ್ಲಿ ಭ್ರಷ್ಟಾಚಾರವನ್ನು ತೊಡೆಯಲು ಸಾಧ್ಯವಾಗಿಲ್ಲವಾದರೂ ಮುಂದಿನ ಪೀಳಿಗೆ ಮೇಲೆ ಭರವಸೆ ಇದೆ. ಈವರೆಗೂ 1,600ಕ್ಕೂ ಅಧಿಕ ಶಾಲೆ ಮತ್ತು ಕಾಲೇಜುಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳನ್ನು ಭ್ರಷ್ಟಚಾರದ ಪರಿಣಾಮದ ಬಗ್ಗೆ ಜಾಗೃತಿ ಮೂಡಿಸಿದ್ದೇನೆ. ಜೊತೆಗೆ, ಭ್ರಷ್ಟಾಚಾರದ ವಿರುದ್ಧ ಹೋರಾಡಲು ಪ್ರೋತ್ಸಾಹಿಸಿದ್ದೇನೆ. ಭ್ರಷ್ಟಾಚಾರ ಎಂಬ ಪಿಡುಗನ್ನು ಅವರು ತೊಲಗಿಸಲಿದ್ದಾರೆ ಎಂಬ ಭರವಸೆ ನನ್ನಲ್ಲಿದೆ” ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕಾರ್ಯಕ್ರಮದಲ್ಲಿ ಹಿರಿಯ ವಕೀಲ ಎಂ ಟಿ ನಾಣಯ್ಯ, ವಕೀಲರ ಸಂಘದ ಅಧ್ಯಕ್ಷ ವಿವೇಕ್ ರೆಡ್ಡಿ, ಕಾರ್ಯಕಾರಿ ಸಮಿತಿ ಸದಸ್ಯ ರಾಜು, ವಕೀಲ ಎನ್ ಪಿ ಅಮೃತೇಶ್ ಮತ್ತಿತರರು ಉಪಸ್ಥಿತರಿದ್ದರು.