Kite thread 
ಸುದ್ದಿಗಳು

ಎಲ್ಲಾ ಬಗೆಯ ಗಾಜು ಲೇಪಿತ ಗಾಳಿಪಟದ ದಾರಗಳಿಗೂ ಸರ್ಕಾರದ ನಿಷೇಧ ಅನ್ವಯ: ಗುಜರಾತ್ ಹೈಕೋರ್ಟ್

ಗಾಜು ಲೇಪಿತ ಹತ್ತಿದಾರ ಮನುಷ್ಯರಿಗೆ ಮತ್ತು ಪಕ್ಷಿಗಳಿಗೆ ಹಾನಿ ಉಂಟುಮಾಡದು ಎನ್ನಲಾಗದು ಎಂಬುದಾಗಿ ತಿಳಿಸಿದ ಪೀಠ ಸರ್ಕಾರ ಎಲ್ಲಾ ಬಗೆಯ ಗಾಜು ಲೇಪಿತ ಗಾಳಿಪಟದ ಸೂತ್ರಗಳನ್ನು ನಿಷೇಧಿಸಿರುವುದಾಗಿ ಸ್ಪಷ್ಟಪಡಿಸಿತು.

Bar & Bench

ರಾಜ್ಯದಲ್ಲಿ ಉತ್ತರಾಯಣ ಹಬ್ಬದ ಹಿನ್ನೆಲೆಯಲ್ಲಿ ಗಾಳಿಪಟ ಹಾರಿಸಲು ಬಳಸುವ ಎಲ್ಲಾ ರೀತಿಯ ಗಾಜು ಲೇಪಿತ ದಾರಗಳನ್ನು ನಿಷೇಧಿಸಲಾಗಿದೆ ಎಂದು ಗುಜರಾತ್ ಹೈಕೋರ್ಟ್ ಶುಕ್ರವಾರ ಸ್ಪಷ್ಟಪಡಿಸಿದೆ [ಸಿದ್ಧರಾಜಸಿಂಹ ಮಹಾವೀರಸಿಂಹ ಚುಡಾಸಮ ಮತ್ತಿತರರು ಹಾಗೂ ಗುಜರಾತ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].

ಈ ನಿಟ್ಟಿನಲ್ಲಿ ಸರ್ಕಾರಿ ಅಧಿಕಾರಿಗಳು ವಿಧಿಸಿರುವ ನಿಷೇಧ ಗಾಜು ಲೇಪಿತ ಹತ್ತಿ ದಾರ ಹಾಗೂ ಇತರ ರೀತಿಯ ದಾರಗಳಿಗೂ ಅನ್ವಯ ಎಂದು ಮುಖ್ಯ ನ್ಯಾಯಮೂರ್ತಿ ಸುನೀತಾ ಅಗರ್‌ವಾಲ್‌ ಮತ್ತು ನ್ಯಾಯಮೂರ್ತಿ ಪ್ರಣವ್ ತ್ರಿವೇದಿ ಅವರಿದ್ದ ಪೀಠ ಸ್ಪಷ್ಟಪಡಿಸಿದೆ.

ಸರ್ಕಾರವು ದಿನಾಂಕ 24.12.2024ರಂದು ಕೈಗೊಂಡಿರುವ ನಿರ್ಣಯವು ಸಿಂಥೆಟಿಕ್ ದಾರ ಮತ್ತು ಹತ್ತಿ ದಾರಗಳ ನಡುವೆ ಯಾವುದೇ ವರ್ಗೀಕರಣ ಮಾಡುವುದಿಲ್ಲ. ಗಾಜು ಮತ್ತಿತರ ಹಾನಿಕಾರಕ ವಸ್ತುಗಳಿಂದ ಲೇಪಿತವಾಗಿರುವ ಎಲ್ಲಾ ರೀತಿಯ ದಾರಗಳನ್ನು ನಿಷೇಧಿಸಲಾಗಿದೆ. ಖಾಸಗಿ ಪ್ರತಿವಾದಿಗಳ ಪರವಾಗಿ ವಕೀಲರು ಮಂಡಿಸಿದ ವಾದ, ಗಾಜಿನಿಂದ ಲೇಪಿತವಾದ ಹತ್ತಿ ಎಳೆಗಳನ್ನು ನಿಷೇಧಿಸಿಲ್ಲ ಎಂಬ ನಿಟ್ಟಿನಲ್ಲಿ ಸಂಪೂರ್ಣವಾಗಿ ತಪ್ಪಾಗಿ ಗ್ರಹಿಸಿದ್ದು ಇದನ್ನು ತಿರಸ್ಕರಿಸಲಾಗಿದೆ ಎಂದು ನ್ಯಾಯಾಲಯ ಜನವರಿ 10ರಂದು ಪ್ರಕಟಿಸಿದ ಆದೇಶದಲ್ಲಿ ಹೇಳಿದೆ.

ಜನವರಿ 2023 ಮತ್ತು ಡಿಸೆಂಬರ್ 2024 ರಲ್ಲಿ ರಾಜ್ಯ ಸರ್ಕಾರ ಹೊರಡಿಸಿದ ನಿರ್ದೇಶನಗಳನ್ನು ಜಾರಿಗೊಳಿಸುವಂತೆ ಕೋರಿ ಇಬ್ಬರು ವ್ಯಕ್ತಿಗಳು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗೆ (ಪಿಐಎಲ್) ಸಂಬಂಧಿಸಿದಂತೆ ನ್ಯಾಯಾಲಯ ತೀರ್ಪು ನೀಡಿದೆ. ಮಕರ ಸಂಕ್ರಾಂತಿ ಹಬ್ಬದ ಸಮಯದಲ್ಲಿ ಗುಜರಾತ್‌ನಲ್ಲಿ ಗಾಳಿಪಟ ಹಾರಿಸಲು ಬಳಸುವ ಗಾಜು ಮತ್ತಿತರ ಅಪಾಯಕಾರಿ ವಸ್ತುಗಳನ್ನು ಲೇಪಿಸಿದ ಚೀನೀ ದೀಪದ ಹಾರುಬುಟ್ಟಿ, ಮಾಂಜಾ, ನೈಲಾನ್ ಇಲ್ಲವೇ ಪ್ಲಾಸ್ಟಿಕ್ ಡೋರಿ (ದಾರ), ಹಾಗೂ ಪ್ಲಾಸ್ಟಿಕ್ ದಾರದ ಬಳಕೆಯನ್ನು ನಿಷೇಧಿಸಲಾಗಿತ್ತು.

ಆದರೆ ಗಾಳಿಪಟ ಹಾರಿಸಲು ಬಳಸುವ ಗಾಜು ಲೇಪಿತ ಹತ್ತಿ ದಾರಗಳನ್ನು ಮಾರಾಟ ಮಾಡುವ ಕೆಲ ವ್ಯಾಪಾರಿಗಳು ಗಾಳಿಪಟ ಹಾರಿಸುವ ದಾರಗಳಲ್ಲಿ ಅಪಾಯಕಾರಿ ವಸ್ತು ಲೇಪಿಸುವುದನ್ನು ನಿಷೇಧಿಸಿ ನ್ಯಾಯಾಲಯ ಅಥವಾ ರಾಷ್ಟ್ರೀಯ ಹಸಿರು ನ್ಯಾಯಮಂಡಳಿ (NGT) ಹೊರಡಿಸಿರುವ ಆದೇಶಗಳಲ್ಲಿ ಗಾಜು ಲೇಪಿತ ಹತ್ತಿ ದಾರಗಳ ಮೇಲೆ ನಿರ್ದಿಷ್ಟವಾಗಿ ನಿಷೇಧ ವಿಧಿಸಿಲ್ಲ ಎಂದು ವಾದಿಸಿದ್ದರು. ಹೀಗಾಗಿ, ಅಂತಹ ದಾರಗಳ ಮೇಲೆ ವಿಧಿಸಲಾದ ನಿಷೇಧ ಜಾರಿ ಸಂಬಂಧ ಸರ್ಕಾರಿ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಕುರಿತು ಜನವರಿ 8, 2024 ರಂದು ನೀಡಿದ ಆದೇಶವನ್ನು ಮಾರ್ಪಡಿಸುವಂತೆ ಅವರು ನ್ಯಾಯಾಲಯವನ್ನು ಒತ್ತಾಯಿಸಿದ್ದರು.

ಆದರೆ, ಈ ವಾದ ಒಪ್ಪದ ಪೀಠವು ಗಾಜು ಲೇಪಿತ ಹತ್ತಿ ದಾರಗಳು ಮನುಷ್ಯರಿಗೆ ಮತ್ತು ಪಕ್ಷಿಗಳಿಗೆ ಹಾನಿಕಾರಕವಲ್ಲ ಎಂದು ಹೇಳಲಾಗದು ಎಂದಿತು.

ರಾಜ್ಯ ಸರ್ಕಾರ ಡಿಸೆಂಬರ್ 24, 2024ರಂದು ಕೈಗೊಂಡ ನಿರ್ಣಯವು ಅಪಾಯಕಾರಿ ವಸ್ತು ಇರುವ ಸಿಂಥೆಟಿಕ್ ದಾರಗಳು ಮತ್ತು ಹತ್ತಿ ದಾರಗಳ ನಡುವೆ ಯಾವುದೇ ವರ್ಗೀಕರಣ ಮಾಡುವುದಿಲ್ಲ. ಗಾಜು ಅಥವಾ ಇತರ ಹಾನಿಕಾರಕ ಪದಾರ್ಥಗಳಿಂದ ಲೇಪಿತವಾಗಿರುವ ಎಲ್ಲಾ ರೀತಿಯ ದಾರಗಳನ್ನು ಸರ್ಕಾರದ ನಿರ್ಣಯವು ನಿಷೇಧಿಸುತ್ತದೆ ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.