Justice Hima Kohli, Justice Bela Trivedi 
ಸುದ್ದಿಗಳು

ಇತಿಹಾಸದಲ್ಲಿ ಮೂರನೇ ಬಾರಿಗೆ ಸುಪ್ರೀಂನಲ್ಲಿ ಇಂದು ಮಹಿಳಾ ನ್ಯಾಯಮೂರ್ತಿಗಳನ್ನು ಒಳಗೊಂಡ ವಿಭಾಗೀಯ ಪೀಠದಿಂದ ವಿಚಾರಣೆ

ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೆಲಾ ಎಂ ತ್ರಿವೇದಿ ಅವರ ನೇತೃತ್ವದ ಪೀಠದಿಂದ ವಿಚಾರಣೆ.

Bar & Bench

ಸುಪ್ರೀಂ ಕೋರ್ಟ್‌ ಇಂದು ವಿಶೇಷ ಬೆಳವಣಿಗೆಗೆ ಸಾಕ್ಷಿಯಾಗಿದ್ದು, ಸರ್ವೋಚ್ಚ ನ್ಯಾಯಾಲಯದ 11ನೇ ಕೋರ್ಟ್‌ನಲ್ಲಿ ಮಹಿಳಾ ನ್ಯಾಯಮೂರ್ತಿಗಳನ್ನು ಮಾತ್ರ ಒಳಗೊಂಡ ಪೀಠ ವಿಚಾರಣೆ ನಡೆಸುತ್ತಿದೆ.

ಪೀಠದಲ್ಲಿ ನ್ಯಾಯಮೂರ್ತಿಗಳಾದ ಹಿಮಾ ಕೊಹ್ಲಿ ಮತ್ತು ಬೆಲಾ ಎಂ ತ್ರಿವೇದಿ ಅವರು ಆಸೀನರಾಗಿದ್ದಾರೆ. ಸದರಿ ಪೀಠವು ತಲಾ ಹತ್ತು ವರ್ಗಾವಣೆ ಮತ್ತು ಜಾಮೀನು ಅರ್ಜಿಗಳ ವಿಚಾರಣೆ ನಡೆಸಲಿದ್ದು, ಒಂಭತ್ತು ಸಿವಿಲ್‌ ಮತ್ತು ಮೂರು ಕ್ರಿಮಿನಲ್‌ ಅರ್ಜಿಗಳ ವಿಚಾರಣೆಯನ್ನೂ ನಡೆಸಲಿದೆ.

ಸುಪ್ರೀಂ ಕೋರ್ಟ್‌ ಇತಿಹಾಸದಲ್ಲೇ ಮೂರನೇ ಬಾರಿಗೆ ಮಹಿಳಾ ನ್ಯಾಯಮೂರ್ತಿಗಳನ್ನೇ ಒಳಗೊಂಡ ಪೀಠವು ವಿಚಾರಣೆ ನಡೆಸುತ್ತಿರುವುದು ವಿಶೇಷವಾಗಿದೆ. ಮೊದಲ ಬಾರಿಗೆ 2013ರಲ್ಲಿ ನ್ಯಾಯಮೂರ್ತಿಯೊಬ್ಬರ ಗೈರಿನ ಹಿನ್ನೆಲೆಯಲ್ಲಿ ತಾತ್ಕಾಲಿಕವಾಗಿ ನ್ಯಾಯಮೂರ್ತಿಗಳಾದ ಗ್ಯಾನ್‌ ಸುಧಾ ಮಿಶ್ರಾ ಮತ್ತು ರಂಜನಾ ಪ್ರಕಾಶ್‌ ದೇಸಾಯಿ ಅವರು ಪೀಠದಲ್ಲಿದ್ದರು.

2018ರಲ್ಲಿ ಎರಡನೇ ಬಾರಿಗೆ ನ್ಯಾಯಮೂರ್ತಿಗಳಾದ ಆರ್‌ ಭಾನುಮತಿ ಮತ್ತು ಇಂದಿರಾ ಬ್ಯಾನರ್ಜಿ ಅವರು ಪೀಠದ ನೇತೃತ್ವ ವಹಿಸಿದ್ದರು.

ಸುಪ್ರೀಂ ಕೋರ್ಟ್‌ ಇತಿಹಾಸದಲ್ಲಿ ಕೇವಲ ಹನ್ನೊಂದು ಮಹಿಳಾ ನ್ಯಾಯಮೂರ್ತಿಗಳು ನೇಮಕವಾಗಿದ್ದಾರೆ. ನ್ಯಾಯಮೂರ್ತಿ ಫಾತಿಮಾ ಬೀವಿ ಅವರು ಪ್ರಥಮ ಬಾರಿಗೆ 1989ರಲ್ಲಿ ಸುಪ್ರೀಂ ಕೋರ್ಟ್‌ಗೆ ಪದೋನ್ನತಿ ಪಡೆದಿದ್ದರು.

ಆನಂತರ ನ್ಯಾ. ಸುಜಾತಾ ಮನೋಹರ್‌, ಬಳಿಕ ನ್ಯಾ. ರುಮಾ ಪಾಲ್‌, ಈಚೆಗೆ ಗ್ಯಾನ್‌ ಸುಧಾ ಮಿಶ್ರಾ, ರಂಜನಾ ಪ್ರಕಾಶ್‌ ದೇಸಾಯಿ, ಆರ್‌ ಭಾನುಮತಿ, ಇಂದೂ ಮಲ್ಹೋತ್ರಾ, ಇಂದಿರಾ ಬ್ಯಾನರ್ಜಿ, ಹಿಮಾ ಕೊಹ್ಲಿ, ಬಿ ವಿ ನಾಗರತ್ನ ಮತ್ತು ಬೆಲಾ ಎಂ ತ್ರಿವೇದಿ ಅವರು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳಾಗಿ ನೇಮಕಗೊಂಡಿದ್ದಾರೆ.