ಅಲಾಹಾಬಾದ್ ಹೈಕೋರ್ಟ್, ವಕೀಲರು 
ಸುದ್ದಿಗಳು

ವಕೀಲರೊಂದಿಗೆ ವ್ಯವಹರಿಸುವಾಗ ತಾಳ್ಮೆ, ವಿನಮ್ರತೆ ಇರಲಿ: ನ್ಯಾಯಾಲಯ ಅಧಿಕಾರಿಗಳಿಗೆ ಅಲಾಹಾಬಾದ್ ಹೈಕೋರ್ಟ್ ಆಡಳಿತ ಸೂಚನೆ

ಎಲ್ಲಾ ನ್ಯಾಯಾಲಯ ಅಧಿಕಾರಿಗಳು ವಕೀಲರೊಂದಿಗೆ ಸೌಜನ್ಯದಿಂದ ಸಂವಹನ ನಡೆಸಬೇಕು. ತಮ್ಮ ನಡೆ- ನುಡಿ ಸೂಕ್ತ ನಮ್ರತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ರಿಜಿಸ್ಟ್ರಾರ್ ಜನರಲ್ ಹೊರಡಿಸಿದ ಕಚೇರಿ ಆದೇಶದಲ್ಲಿ ತಿಳಿಸಲಾಗಿದೆ.

Bar & Bench

ವಕೀಲರು ಮತ್ತು ವಕೀಲ ಗುಮಾಸ್ತರೊಂದಿಗೆ ವ್ಯವಹರಿಸುವಾಗ ವಿನಮ್ರವಾಗಿರಬೇಕು ಮತ್ತು ಸಹಕಾರ ನೀಡಬೇಕು ಎಂದು ಅಲಾಹಾಬಾದ್‌ ಹೈಕೋರ್ಟ್‌ ತನ್ನ ವಿವಿಧ ವಿಭಾಗಗಳ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿ ವರ್ಗಕ್ಕೆ ನಿರ್ದೇಶನ ನೀಡಿದೆ.

"ವಕೀಲರು ಉದಾತ್ತ ವರ್ಗವಾಗಿದ್ದು ಸಮಾಜದ ಬಡವರು, ಶೋಷಿತರು ಹಾಗೂ ಸೌಲಭ್ಯ ವಂಚಿತ ಜನರ ಪರ ಧ್ವನಿ ಎತ್ತುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸುತ್ತಾರೆ. ಆದ್ದರಿಂದ ಅವರೊಂದಿಗೆ ಅತ್ಯಂತ ತಾಳ್ಮೆ ಮತ್ತು ಗೌರವದೊಂದಿಗೆ ವರ್ತಿಸಬೇಕು. ವಕೀಲರೊಂದಿಗೆ ವ್ಯವಹರಿಸುವಾಗ ಅಧಿಕಾರಿ ವರ್ಗ ಅತ್ಯಂತ ಸಂಯಮ ಕಾಪಾಡಿಕೊಳ್ಳಬೇಕು" ಎಂದು ರಿಜಿಸ್ಟ್ರಾರ್ ಜನರಲ್ ಅವರು ಜನವರಿ 24ರಂದು ನೀಡಿದ ಕಚೇರಿ ಆದೇಶದಲ್ಲಿ ತಿಳಿಸಿದ್ದಾರೆ.

ಎಲ್ಲಾ ನ್ಯಾಯಾಲಯದ ಅಧಿಕಾರಿಗಳು ವಕೀಲರೊಂದಿಗೆ ಸೌಜನ್ಯದಿಂದ ಸಂವಹನ ನಡೆಸಬೇಕು. ತಮ್ಮ ನಡೆ- ನುಡಿ ಸೂಕ್ತ ನಮ್ರತೆಯಿಂದ ಕೂಡಿರುವಂತೆ ನೋಡಿಕೊಳ್ಳಬೇಕು ಎಂದು ಆದೇಶ ತಿಳಿಸಿದೆ.

ಮೇಲ್ವಿಚಾರಣಾಧಿಕಾರಿಗಳಾಗಿರುವ ಎಲ್ಲಾ ರಿಜಿಸ್ಟ್ರಾರ್‌/ ಜಂಟಿ ರಿಜಿಸ್ಟ್ರಾರ್‌ಗಳು ತಮ್ಮ ವಿಭಾಗಗಳಲ್ಲಿ ಅಧಿಕಾರಿಗಳು ಹಾಗೆ ಸೌಜನ್ಯದಿಂದ ವರ್ತಿಸುವಂತೆ ನೋಡಿಕೊಳ್ಳುವುದಕ್ಕಾಗಿ ಕಾರ್ಯಾಗಾರಗಳನ್ನು ನಡೆಸುವಂತೆ ಸೂಚಿಸಲಾಗಿದೆ.

ನ್ಯಾಯಾಲಯದ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗದಲ್ಲಿ ಸೂಕ್ತ ಶಿಷ್ಟಾಚಾರ ಮತ್ತು ನಡವಳಿಕೆ ರೂಪಿಸುವುದು ಹಾಗೂ ವಕೀಲರು ಮತ್ತವರ ಗುಮಾಸ್ತರೊಂದಿಗೆ ಹೇಗೆ ತಾಳ್ಮೆ ಸಂಯಮದಿಂದ ವರ್ತಿಸಬೇಕು ಎನ್ನುವುದು ಈ ಕಾರ್ಯಾಗಾರಗಳ ಉದ್ದೇಶವಾಗಿರಬೇಕು ಎಂದು ವಿವರಿಸಲಾಗಿದೆ.

ನ್ಯಾಯಾಲಯ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಅನುಚಿತವಾಗಿ ನಡೆದುಕೊಂಡರೆ ವಕೀಲರು ದೂರು ನೀಡಬೇಕು ಎಂದು ಕೂಡ ತಿಳಿಸಲಾಗಿದೆ.

ಇದಲ್ಲದೆ, ಸಿಬ್ಬಂದಿಯಲ್ಲಿ ಜಾಗೃತಿ ಮೂಡಿಸಲು ವಿವಿಧ ರಿಜಿಸ್ಟ್ರಾರ್‌ಗಳು ಮುಂದಿನ ತಿಂಗಳು ಕಾರ್ಯಾಗಾರ ಆಯೋಜಿಸುವಂತೆ ಶಿಫಾರಸು ಮಾಡಲಾಗಿದೆ.

[ಕಚೇರಿ ಆದೇಶದ ಪ್ರತಿಯನ್ನು ಇಲ್ಲಿ ಓದಿ]

Allahabad High Court office order.pdf
Preview