ಲಿಂಗ ಬದಲಾವಣೆ ಶಸ್ತ್ರಚಿಕಿತ್ಸೆಗೆ (ಎಸ್‌ಆರ್‌ಎಸ್) ಅನುಮತಿ ನೀಡುವಂತೆ ಕೋರಿ ಪೊಲೀಸ್ ಪೇದೆಯೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ವಿಲೇವಾರಿ ಮಾಡುವಂತೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಉತ್ತರ ಪ್ರದೇಶದ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ (ಡಿಜಿಪಿ) ನಿರ್ದೇಶಿಸಿದೆ [ನೇಹಾ ಸಿಂಗ್ ಮತ್ತು ಉತ್ತರಪ್ರದೇಶ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಶಸ್ತ್ರಚಿಕಿತ್ಸೆ ಮೂಲಕ ಲಿಂಗ ಬದಲಿಸಿಕೊಳ್ಳುವ ಸಾಂವಿಧಾನಿಕ ಹಕ್ಕು ವ್ಯಕ್ತಿಗಳಿಗೆ ಇದೆ ಎಂದು ನ್ಯಾಯಮೂರ್ತಿ ಅಜಿತ್ ಕುಮಾರ್ ಅವರು ಆದೇಶದಲ್ಲಿ ತಿಳಿಸಿದ್ದಾರೆ.
ಸಮಕಾಲೀನ ಸಮಾಜದಲ್ಲಿ ತಮ್ಮ ಲಿಂಗತ್ವ ಗುರುತನ್ನು ಬದಲಿಸುವ ವ್ಯಕ್ತಿಯ ಆಂತರ್ಯದ ಹಕ್ಕನ್ನು ಗುರುತಿಸುವಲ್ಲಿ ವಿಫಲವಾದರೆ 'ಲಿಂಗತ್ವ ಗುರುತಿನ ಅಸ್ವಸ್ಥತೆಯ ಸಿಂಡ್ರೋಮ್' ಅವರನ್ನು ನಿರಂತರವಾಗಿ ಕಾಡಲು ಅನುವು ಮಾಡಿಕೊಟ್ಟಂತಾಗುತ್ತದೆ ಎಂದು ನ್ಯಾಯಾಲಯ ಹೇಳಿತು.
"ಕೆಲವೊಮ್ಮೆ ಅಂತಹ ಸಮಸ್ಯೆ ಮಾರಣಾಂತಿಕವಾಗಬಹುದು ಏಕೆಂದರೆ ಅಂತಹ ವ್ಯಕ್ತಿಯು ಅಸ್ವಸ್ಥತೆ, ಆತಂಕ, ಖಿನ್ನತೆ, ತಮ್ಮ ಕುರಿತು ಸ್ವಯಂ ನಕಾರಾತ್ಮಕ ಚಿತ್ರಣ ಹೊಂದುವುದು, ತನ್ನ ಲೈಂಗಿಕ ಅಂಗರಚನೆಯ ಬಗ್ಗೆ ಇಷ್ಟವಿಲ್ಲದಿರುವಿಕೆಯಂತಹ ಸಮಸ್ಯೆಗಳಿಂದ ಬಳಲಿಬಿಡುತ್ತಾರೆ. ಅಂತಹ ತೊಂದರೆ ನಿವಾರಿಸಲು ಮಾನಸಿಕ ಸಾಂತ್ವನ ವಿಫಲವಾದರೆ, ಶಸ್ತ್ರಚಿಕಿತ್ಸೆ ಅತ್ಯಗತ್ಯವಾಗಲಿದ್ದು ಅದನ್ನು ಪ್ರೋತ್ಸಾಹಿಸಬೇಕಾಗುತ್ತದೆ’’ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಅರ್ಜಿದಾರರು ಉತ್ತರ ಪ್ರದೇಶ ಪೊಲೀಸ್ ಇಲಾಖೆಯಲ್ಲಿ ಮಹಿಳಾ ಪೇದೆಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಾನು ಲಿಂಗತ್ವ ಜಿಗುಪ್ಸೆಯನ್ನು ಅನುಭವಿಸುತ್ತಿರುವುದಾಗಿಯೂ ಸಂಪೂರ್ಣವಾಗಿ ಪುರುಷ ಅಸ್ಮಿತೆಯನ್ನು ಸ್ವೀಕರಿಸಲು ಶಸ್ತ್ರಚಿಕಿತ್ಸೆಗೆ ಒಳಗಾಗಲು ಬಯಸುತ್ತಿರುವುದಾಗಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು.
ಪೇದೆ ಹಾಗೂ ಪೊಲೀಸ್ ಇಲಾಖೆಯ ವಾದಗಳನ್ನು ಆಲಿಸಿದ ನ್ಯಾಯಾಲಯ, ಅರ್ಜಿದಾರರ ಅರ್ಜಿಯನ್ನು ತಡೆಹಿಡಿಯಲು ಡಿಜಿಪಿ ಅವರ ಬಳಿ ಸಮರ್ಥನೆ ಇಲ್ಲ ಎಂದು ಅಭಿಪ್ರಾಯಪಟ್ಟಿದೆ. ಹೀಗಾಗಿ, ಆದೇಶದಲ್ಲಿ ಉಲ್ಲೇಖಿಸಲಾದ ತೀರ್ಪುಗಳ ಆಧಾರದಲ್ಲಿ ಬಾಕಿ ಇರುವ ಅರ್ಜಿ ವಿಲೇವಾರಿ ಮಾಡುವಂತೆ ನ್ಯಾಯಾಲಯ ಅವರಿಗೆ ಸೂಚಿಸಿದೆ.
ರಾಷ್ಟ್ರೀಯ ಕಾನೂನು ಸೇವಾ ಪ್ರಾಧಿಕಾರ ವರ್ಸಸ್ ಭಾರತ ಸರ್ಕಾರದ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿದ ನಿರ್ದೇಶನಗಳಿಗೆ ಅನುಗುಣವಾಗಿ ಅಂತಹ ಯಾವುದೇ ಕಾಯಿದೆಯನ್ನು ರೂಪಿಸಲಾಗಿದೆಯೇ ಎಂಬ ಬಗ್ಗೆ ಸೂಕ್ತ ಅಫಿಡವಿಟ್ ಸಲ್ಲಿಸುವಂತೆ ನ್ಯಾಯಾಲಯ ರಾಜ್ಯ ಸರ್ಕಾರಕ್ಕೆ ನಿರ್ದೇಶನ ನೀಡಿದೆ. ಪ್ರಕರಣದ ಮುಂದಿನ ವಿಚಾರಣೆ ಸೆಪ್ಟೆಂಬರ್ 21 ರಂದು ನಡೆಯಲಿದೆ.