ಜಾಮೀನು ಕೋರಿದವರ ಸಾಮಾಜಿಕ- ಆರ್ಥಿಕ ಸ್ಥಿತಿ ಲೆಕ್ಕಿಸದೆ ಮನಸೋಇಚ್ಛೆ ಜಾಮೀನು ಷರತ್ತುಗಳನ್ನು ವಿಧಿಸದಂತೆ ಅಲಹಾಬಾದ್ ಹೈಕೋರ್ಟ್ ಇತ್ತೀಚೆಗೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿದೆ.
ಆರ್ಥಿಕವಾಗಿ ಬಡವರಾಗಿರುವವರು ಇಲ್ಲವೇ ಸಮಾಜದ ಕಟ್ಟಕಡೆಯ ವರ್ಗಗಳಿಂದ ಬಂದಿರುವ ಅನೇಕ ವ್ಯಕ್ತಿಗಳಿಗೆ ಇಂತಹ ಜಾಮೀನು ಷರತ್ತುಗಳನ್ನು ಪಾಲಿಸಲಾಗದು ಎಂದು ನ್ಯಾಯಾಲಯ ಹೇಳಿದೆ.
ಆರೋಪಿಗಳ ಜಾಮೀನು ಶ್ಯೂರಿಟಿ ನಿಗದಿಗೊಳಿಸುವಾಗ ಅವರ ಸಾಮಾಜಿಕ ಆರ್ಥಿಕ ಸ್ಥಿತಿ ಪರಿಗಣಿಸುವ ಸಂಬಂಧ ವಿವೇಚನೆ ಬಳಸುವುದು ವಿಚಾರಣಾ ನ್ಯಾಯಾಲಯಗಳ ಹೊಣೆ ಎಂದು ನ್ಯಾಯಮೂರ್ತಿ ಅಜಯ್ ಭಾನೋಟ್ ತಿಳಿಸಿದ್ದಾರೆ.
ಇದು ಗಂಭೀರ ವಿಚಾರದಂತೆ ತೋರುತ್ತಿದೆ ಎಂದಿರುವ ಪೀಠ ಯಾಂತ್ರಿಕವಾಗಿ ಶ್ಯೂರಿಟಿ ವಿಧಿಸುವುದರ ವಿರುದ್ಧ ಕಾನೂನು ಎಚ್ಚರಿಕೆ ನೀಡುತ್ತದೆ ಎಂಬುದಾಗಿ ತಿಳಿಸಿದೆ.
ಅರವಿಂದ್ ಸಿಂಗ್ ಮತ್ತು ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ಮೂಲಕ ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣದಲ್ಲಿಈಗಾಗಲೇ ನೀಡಿರುವ ನಿರ್ದೇಶನಗಳಿಗೆ ಅನುಗುಣವಾಗಿ ಜಾಮೀನು ಶ್ಯೂರಿಟಿಗಳನ್ನು ನಿಗದಿಪಡಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ಹೈಕೋರ್ಟ್ ಸೂಚಿಸಿತು.
ಅರವಿಂದ್ ಸಿಂಗ್ ಪ್ರಕರಣದಲ್ಲಿ , ಜಾಮೀನು ಷರತ್ತುಗಳನ್ನು ಯಾಂತ್ರಿಕವಾಗಿ ಹೇರುವುದನ್ನು ತಡೆಯಲು ಹೈಕೋರ್ಟ್ ವಿವರವಾದ ಮಾರ್ಗಸೂಚಿಗಳನ್ನು ನೀಡಿತ್ತು.
ಆರೋಪಿಯೊಬ್ಬರಿಗೆ ವಿಚಾರಣಾ ನ್ಯಾಯಾಲಯದಿಂದ ಜಾಮೀನು ದೊರೆತಿದ್ದರೂ ಶ್ಯೂರಿಟಿ ಸಲ್ಲಿಸಲು ಸಾಧ್ಯವಾಗಲಿಲ್ಲ ಎಂಬ ಕಾರಣಕ್ಕೆ ಆತ ಬಿಡುಗಡೆಯಾಗಿರಲಿಲ್ಲ. ಅರ್ಜಿದಾರರ ವಾದ ಆಲಿಸಿದ ಹೈಕೋರ್ಟ್ ವಿವೇಚನೆ ಬಳಸಿ ಶ್ಯೂರಿಟಿ ನಿಗದಿಪಡಿಸುವಂತೆ ವಿಚಾರಣಾ ನ್ಯಾಯಾಲಯಗಳಿಗೆ ನಿರ್ದೇಶಿಸಿತು.