ಕೃಷ್ಣ ಜನ್ಮಭೂಮಿ - ಶಾಹಿ ಈದ್ಗಾ ವಿವಾದ 
ಸುದ್ದಿಗಳು

ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದ: 15 ದಾವೆಗಳನ್ನು ಒಗ್ಗೂಡಿಸಿ ಆಲಿಸಲಿದೆ ಅಲಾಹಾಬಾದ್ ಹೈಕೋರ್ಟ್

ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಆಧಾರದ ಮೇಲೆ ಅದನ್ನು ತೆರವುಗೊಳಿಸಬೇಕೆಂದು ಮೊಕದ್ದಮೆಗಳು ಕೋರಿವೆ.

Bar & Bench

ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಕೃಷ್ಣ ಜನ್ಮಭೂಮಿ-ಶಾಹಿ ಈದ್ಗಾ ಮಸೀದಿ ವಿವಾದಕ್ಕೆ ಸಂಬಂಧಿಸಿದ ಹದಿನೈದು ಮೊಕದ್ದಮೆಗಳನ್ನು ಒಗ್ಗೂಡಿಸಿ ಅಲಿಸಲು ನಿರ್ಧರಿಸಿದ್ದು ಈ ಸಂಬಂಧ ನಿರ್ದೇಶನ ನೀಡಿದೆ (ಕತ್ರಾದ ಕೇಶವ್ ದೇವ್ ಖೇವತ್‌ನ ಭಗವಾನ್ ಶ್ರೀಕೃಷ್ಣ ವಿರಾಜ್ಮಾನ್ ಮತ್ತಿತರರು ವರ್ಸಸ್‌ ಯುಪಿ ಸುನ್ನಿ ಸೆಂಟ್ರಲ್ ವಕ್ಫ್ ಮಂಡಳಿ ಮತ್ತು ಇತರರು).

ನಾಗರಿಕ ಪ್ರಕ್ರಿಯಾ ಸಂಹಿತೆ (ಸಿಪಿಸಿ) ಆದೇಶ 4-ಎ ಅಡಿಯಲ್ಲಿ ಹಿಂದೂ ಪಕ್ಷಕಾರರು (ವಾದಿ) ಈ ಕುರಿತು ಸಲ್ಲಿಸಿದ ಅರ್ಜಿಯ ನಂತರ ನ್ಯಾಯಮೂರ್ತಿ ಮಾಯಾಂಕ್ ಕುಮಾರ್ ಜೈನ್ ಮೇಲಿನ ಆದೇಶವನ್ನು ಹೊರಡಿಸಿದ್ದಾರೆ.

"ಕಕ್ಷಿದಾರರ ಪರ ಪರಿಣತ ವಕೀಲರು ಮಂಡಿಸಿದ ವಾದಗಳನ್ನು ಪರಿಗಣಿಸಿ ಮತ್ತು ನ್ಯಾಯದ ಹಿತದೃಷ್ಟಿಯಿಂದ ಮೂಲ ದಾವೆ ಸಂಖ್ಯೆಗಳಾದ 1 /23, 2/23, 4/23, 5/23, 6/23, 7/23, 8/23, 9/23, 11/23, 12/23, 13/23, 13/23, 14/23 15/23, 16/23 ಮತ್ತು 18/23 ಇವುಗಳನ್ನು ಒಗ್ಗೂಡಿಸಲಾಗಿದೆ.

ಮಥುರಾ ಶಾಹಿ ಈದ್ಗಾ ಮಸೀದಿಯನ್ನು ಕೃಷ್ಣ ಜನ್ಮಭೂಮಿ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂಬ ಆಧಾರದ ಮೇಲೆ ಅದನ್ನು ತೆಗೆದುಹಾಕಬೇಕೆಂದು ಮೊಕದ್ದಮೆಗಳು ಕೋರಿವೆ.

ಈ ಮೊಕದ್ದಮೆಗಳು ಈ ಹಿಂದೆ ಮಥುರಾದ ಸಿವಿಲ್ ನ್ಯಾಯಾಲಯದಲ್ಲಿ ಬಾಕಿ ಇದ್ದವು. ಆದರೆ ಮೇ 2023 ರಲ್ಲಿ, ಹೈಕೋರ್ಟ್ ಈ ಮೊಕದ್ದಮೆಗಳನ್ನು ತನಗೆ ವರ್ಗಾಯಿಸಿಕೊಂಡಿತ್ತು.

ನಂತರ ಹಿಂದೂ ವಾದಿಯೊಬ್ಬರು ಎಲ್ಲಾ ಮೊಕದ್ದಮೆಗಳನ್ನು ಕ್ರೋಢೀಕರಿಸಿ ಆಲಿಸಲು ಮನವಿಯೊಂದಿಗೆ ಹೈಕೋರ್ಟ್ ಮೊರೆ ಹೋಗಿದ್ದರು.

ಕತ್ರಾ ಕೇಶವ್ ದೇವ್‌ಗೆ ಸೇರಿದ 13.37 ಎಕರೆ ಭೂಮಿ ಪಡೆಯುವುದು ಮತ್ತು ವಿವಾದಿತ ಕಟ್ಟಡವನ್ನು ತೆರವುಗೊಳಿಸುವುದು ಸೇರಿದಂತೆ ಇದೇ ರೀತಿಯ ಅನೇಕ ಮೊಕದ್ದಮೆಗಳನ್ನು ನ್ಯಾಯಾಲಯದಲ್ಲಿದ್ದವು. ಈ ವಿಷಯವಾಗಿ, ಹೈಕೋರ್ಟ್ನಲ್ಲಿ ವಿಚಾರಣೆಗಾಗಿ ಹದಿನೆಂಟು ಮೊಕದ್ದಮೆಗಳು ಬಾಕಿ ಉಳಿದಿವೆ ಎಂದು ವಕೀಲರು ಹೇಳಿದದರು.

ನ್ಯಾಯಾಲಯದಲ್ಲಿ ಬಾಕಿ ಇರುವ ಇತರ ಹದಿನೇಳು ಮೊಕದ್ದಮೆಗಳನ್ನು ವಾದಿಗಳ ದಾವೆಯೊಂದಿಗೆ ಕ್ರೋಢೀಕರಿಸಬೇಕೆಂದು ಪ್ರಾರ್ಥಿಸಲಾಯಿತು.

ದಾವೆಗಳನ್ನು ಕ್ರೋಢೀಕರಿಸುವ ಮೂಲಕ ನ್ಯಾಯಾಲಯದ ಸಮಯ ಮತ್ತು ಪಕ್ಷಕಾರರ ವೆಚ್ಚಗಳನ್ನು ಉಳಿಸಬಹುದು ಮತ್ತು ಪರಸ್ಪರ ವಿರುದ್ಧವಾದ ತೀರ್ಪುಗಳ ಸಾಧ್ಯತೆಯನ್ನು ತಪ್ಪಿಸಬಹುದು ಎಂದು ವಿವರಿಸಲಾಯಿತು.

ಮೇಲಿನ ಸಂಗತಿಗಳನ್ನು ಗಣನೆಗೆ ತೆಗೆದುಕೊಂಡ ನ್ಯಾಯಾಲಯವು ಈ ವ್ಯಾಜ್ಯಗಳು ಒಂದೇ ಸ್ವರೂಪದ್ದಾಗಿವೆ. ಈ ಮೊಕದ್ದಮೆಗಳಲ್ಲಿನ ವಿಚಾರಣೆಯನ್ನು ಕೈಗೆತ್ತಿಕೊಳ್ಳಬಹುದು ಮತ್ತು ಸಾಮಾನ್ಯ ಪುರಾವೆಗಳ ಆಧಾರದ ಮೇಲೆ ಮೊಕದ್ದಮೆಗಳನ್ನು ಏಕಕಾಲದಲ್ಲಿ ನಿರ್ಧರಿಸಬಹುದು. ನ್ಯಾಯಾಲಯದ ಸಮಯವನ್ನು ಉಳಿಸಲು, ಪಕ್ಷಕಾರರಿಗೆ ಮಾಡಬೇಕಾದ ವೆಚ್ಚಗಳು ಮತ್ತು ವ್ಯತಿರಿಕ್ತ ತೀರ್ಪುಗಳನ್ನು ತಪ್ಪಿಸಲು ನ್ಯಾಯದ ಹಿತದೃಷ್ಟಿಯಿಂದ ದಾವೆಗಳನ್ನು ಪರಸ್ಪರ ಕ್ರೋಢೀಕರಿಸುವುದು ಸೂಕ್ತವೆಂದು ತೋರುತ್ತದೆ ಎಂದು ನ್ಯಾಯಾಲಯ ತನ್ನ ಜನವರಿ 11 ರ ಆದೇಶದಲ್ಲಿ ತಿಳಿಸಿದೆ.

ಉಳಿದ ಮೂರು ಮೊಕದ್ದಮೆಗಳಲ್ಲಿ, ಎರಡು ಮೊಕದ್ದಮೆಗಳನ್ನು ಇದಕ್ಕೆ ಸೇರಿಸುವ ಪ್ರಶ್ನೆಯನ್ನು ನಂತರದ ಹಂತದಲ್ಲಿ ನಿರ್ಧರಿಸಬಹುದು ಎಂದು ನ್ಯಾಯಾಲಯ ಹೇಳಿದೆ. ಉಳಿದ ಒಂದು ದಾವೆಯನ್ನು ಕೇಂದ್ರ ಸರ್ಕಾರದ ವಿರುದ್ಧ ದಾಖಲಿಸಲಾಗಿದೆ ಎಂದು ನ್ಯಾಯಾಲಯ ಹೇಳಿದೆ.

ಪ್ರಕರಣದ ವಿಚಾರಣೆಯು ಜನವರಿ 17 ರಂದು ನಡೆಯಲಿದೆ.

[ಆದೇಶ ಓದಿ]

Bhagwan Shrikrishna Virajman At Katra Keshav Dev Khewat No. 255 And 7 Others vs. U.P. Sunni Central Waqf Board And 3 Others.pdf
Preview