Jitendra Narayan Singh Tyagi, Allahabad High Court 
ಸುದ್ದಿಗಳು

ಅತ್ಯಾಚಾರ ಪ್ರಕರಣದಲ್ಲಿ ಜಿತೇಂದ್ರ ತ್ಯಾಗಿಗೆ ನಿರೀಕ್ಷಣಾ ಜಾಮೀನು ನಿರಾಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಮ್ಯಾಜಿಸ್ಟ್ರೇಟ್‌ ಅವರು ಹಲವು ಆದೇಶಗಳನ್ನು ಹೊರಡಿಸಿದರೂ ತನಿಖಾಧಿಕಾರಿಯು ತನಿಖೆ ಪೂರ್ಣಗೊಳಿಸಿಲ್ಲ ಎಂಬುದನ್ನು ನ್ಯಾಯಾಲಯವು ಪರಿಗಣನೆಗೆ ತೆಗೆದುಕೊಂಡಿದೆ.

Bar & Bench

ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಜಿತೇಂದ್ರ ತ್ಯಾಗಿ (ಈ ಹಿಂದಿನ ಹೆಸರು ವಾಸಿಂ ರಿಜ್ವಿ) ಅವರಿಗೆ ಅಲಾಹಾಬಾದ್‌ ಹೈಕೋರ್ಟ್‌ ಗುರುವಾರ ನಿರೀಕ್ಷಣಾ ಜಾಮೀನು ನಿರಾಕರಿಸಿದೆ [ಜಿತೇಂದ್ರ ನಾರಾಯಣ್‌ ತ್ಯಾಗಿ ವರ್ಸಸ್‌ ಉತ್ತರ ಪ್ರದೇಶ ಸರ್ಕಾರ].

“ಪ್ರಕರಣದ ಎಲ್ಲಾ ವಾಸ್ತವಿಕ ಅಂಶಗಳನ್ನು ಪರಿಗಣಿಸಿ ಮತ್ತು ಮೇಲೆ ಉಲ್ಲೇಖಿಸಿರುವ ಕಾರಣಗಳ ಹಿನ್ನೆಲೆಯಲ್ಲಿ ಅರ್ಜಿದಾರರಿಗೆ ಬಂಧನದಿಂದ ರಕ್ಷಣೆ ನೀಡುವ ಯಾವುದೇ ಸಕಾರಣವಿಲ್ಲ. ಹೀಗಾಗಿ, ಜಿತೇಂದ್ರ ನಾರಾಯಣ ತ್ಯಾಗಿ ಅಲಿಯಾಸ್‌ ಸಯದ್‌ ವಾಸಿಂ ರಿಜ್ವಿ ಅವರ ನಿರೀಕ್ಷಣಾ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ” ಎಂದು ನ್ಯಾಯಮೂರ್ತಿ ಮೊಹಮ್ಮದ್‌ ಫೈಜ್‌ ಖಾನ್‌ ಅವರು ಆದೇಶದಲ್ಲಿ ಹೇಳಿದ್ದಾರೆ.

“ಸಿಆರ್‌ಪಿಸಿ ಸೆಕ್ಷನ್‌ 173 (2)ರ ಅಡಿ ತಡಮಾಡದೇ ತನಿಖೆ ಪೂರ್ಣಗೊಳಿಸಿ, ವರದಿ ಸಲ್ಲಿಸುವುದನ್ನು ತನಿಖಾಧಿಕಾರಿಯಿಂದ ಬಯಸಲಾಗುತ್ತದೆ” ಎಂದು ಪೀಠವು ಆದೇಶದಲ್ಲಿ ಹೇಳಿದೆ.

ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿದ ಆರೋಪದ ಮೇಲೆ ತ್ಯಾಗಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಸಂತ್ರಸ್ತೆಯ ಪತಿಗೆ ತ್ಯಾಗಿ ಕ್ವಾರ್ಟರ್ಸ್‌ ನೀಡಿದ್ದು, ಅದರಲ್ಲಿ ಅವರು ಪತ್ನಿ ಮತ್ತು ಮಕ್ಕಳೊಂದಿಗೆ ನೆಲೆಸಿದ್ದರು. ತ್ಯಾಗಿ ಜೊತೆ ಕೆಲಸ ಮಾಡುತ್ತಿದ್ದ ಸಂತ್ರಸ್ತೆಯ ಪತಿಯನ್ನು ಆಗಾಗ್ಗೆ ಲಖನೌಗೆ ಕೆಲಸದ ಮೇಲೆ ತ್ಯಾಗಿ ಕಳುಹಿಸುತ್ತಿದ್ದರು. ಐದು ತಿಂಗಳ ಹಿಂದೆ ಇದೇ ರೀತಿ ಆಕೆಯ ಪತಿ ಮನೆಯಲ್ಲಿ ಇಲ್ಲದ ಸಂದರ್ಭದಲ್ಲಿ ಅಕ್ರಮವಾಗಿ ಮನೆಗೆ ನುಗ್ಗಿ ತ್ಯಾಗಿ ಅತ್ಯಾಚಾರ ಎಸಗಿದ್ದು, ವಿಚಾರ ಬಹಿರಂಗಪಡಿಸಿದರೆ ಸಂತ್ರಸ್ತೆ ಹಾಗೂ ಆಕೆಯ ಮಕ್ಕಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು ಎನ್ನಲಾಗಿದೆ.

ಮುಂದೆಯೂ ಇದೇ ರೀತಿ ಸಂತ್ರಸ್ತೆಯ ಪತಿಯನ್ನು ಮೇಲಿಂದ ಮೇಲೆ ಲಖನೌಗೆ ಕಳುಹಿಸಿ ಆಕೆಯ ಮೇಲೆ ಹಲವು ಬಾರಿ ತ್ಯಾಗಿ ಅತ್ಯಾಚಾರ ಎಸಗಿದ್ದರು. ಇದರಿಂದ ಬೇಸತ್ತಿದ್ದ ಆಕೆಯು 2021ರ ಜೂನ್‌ 11ರಂದು ಪತಿಗೆ ವಿಷಯ ತಿಳಿಸಿದ್ದರು. ಈ ವಿಚಾರ ಉಲ್ಲೇಖಿಸಿ ಆಕೆ ಪತಿಯು ತ್ಯಾಗಿ ವಿರುದ್ಧ ಪ್ರತಿಭಟಿಸಿದ್ದರು. ಆತನಿಗೂ ತ್ಯಾಗಿ ಬೆದರಿಕೆ ಹಾಕಿದ್ದರು ಎಂಬುದು ಆರೋಪ.