ಅಲಾಹಾಬಾದ್ ಹೈಕೋರ್ಟ್, ಪ್ರಧಾನಿ ನರೇಂದ್ರ ಮೋದಿ (ಬಲ) ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (ಎಡ) 
ಸುದ್ದಿಗಳು

ಮೋದಿ, ಆದಿತ್ಯನಾಥ್ ವಿರುದ್ಧ ದ್ವೇಷ ಹರಡಿದ ಆರೋಪ: ಪತ್ರಕರ್ತನಿಗೆ ಜಾಮೀನು ನಿರಾಕರಿಸಿದ ಅಲಾಹಾಬಾದ್ ಹೈಕೋರ್ಟ್

ವೈಯಕ್ತಿಕ ಲಾಭಕ್ಕಾಗಿ ಪ್ರಕಾಶಕರು ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದರ ಬಗ್ಗೆ, ರಚನಾತ್ಮಕ ಟೀಕೆಯ ಮೌಲ್ಯ ಮತ್ತು ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯುವ ಅಗತ್ಯದ ಬಗ್ಗೆ ನ್ಯಾಯಾಲಯ ವಿವರವಾಗಿ ಮಾತನಾಡಿತು.

Bar & Bench

ಸುಲಿಗೆ ಮಾಡಿದ ಹಾಗೂ ಪ್ರಧಾನಿ ನರೇಂದ್ರ ಮೋದಿ ಮತ್ತು ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ವಿರುದ್ಧ ದ್ವೇಷ ಬಿತ್ತಿದ ಆರೋಪ ಎದುರಿಸುತ್ತಿದ್ದ ಪತ್ರಕರ್ತರೊಬ್ಬರಿಗೆ ಅಲಾಹಾಬಾದ್ ಹೈಕೋರ್ಟ್ ಈಚೆಗೆ ಜಾಮೀನು ನಿರಾಕರಿಸಿದೆ.

ವೈಯಕ್ತಿಕ ಲಾಭಕ್ಕಾಗಿ ಪ್ರಕಾಶಕರು ವೇದಿಕೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿರುವುದು, ರಚನಾತ್ಮಕ ಟೀಕೆಯ ಮೌಲ್ಯ ಮತ್ತು ಜಾತ್ಯತೀತ ತತ್ವಗಳನ್ನು ಎತ್ತಿಹಿಡಿಯುವ ಅಗತ್ಯದ ಬಗ್ಗೆ ನ್ಯಾಯಮೂರ್ತಿ ಮಂಜು ರಾಣಿ ಚೌಹಾಣ್ ವಿವರವಾಗಿ ಚರ್ಚಿಸಿದರು.

ನ್ಯಾಯಮೂರ್ತಿ ಮಂಜು ರಾಣಿ ಚೌಹಾಣ್

ಮಾಸಿಕ ಹಣ ಪಾವತಿಸಬೇಕು ಇಲ್ಲದೇ ಹೋದರೆ ತನ್ನ ಬಗ್ಗೆ ಮಾನಹಾನಿಕರ ಲೇಖನ ಪ್ರಕಟಿಸುವುದಾಗಿ ಆರೋಪಿ ಅಮಿತ್ ಮೌರ್ಯ ಬೆದರಿಕೆ ಹಾಕಿದ್ದ ಎಂದು ಪೂರ್ವಾಂಚಲ್ ಟ್ರಕ್ ಮಾಲೀಕರ ಸಂಘದ ಉಪಾಧ್ಯಕ್ಷರು ಆರೋಪಿಸಿದ್ದರು.

ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸೇರಿದಂತೆ ಸಾರ್ವಜನಿಕ ವ್ಯಕ್ತಿಗಳ ವಿರುದ್ಧ ದ್ವೇಷ ಹರಡಲು ಆತ ಅನೇಕ ಸಾಮಾಜಿಕ ಮಾಧ್ಯಮವನ್ನು ಬಳಸಿಕೊಂಡಿದ್ದ. ಅಲ್ಲದೆ ಧಾರ್ಮಿಕ ವ್ಯಕ್ತಿಗಳ ವಿರುದ್ಧ ಅವಹೇಳನಕಾರಿ ಹೇಳಿಕೆಗಳನ್ನು ನೀಡಿದ್ದ ಎಂದು ದೂರಲಾಗಿತ್ತು.

ಪ್ರಕಾಶಕರು ತಮ್ಮ ವೇದಿಕೆಗಳನ್ನು ವೈಯಕ್ತಿಕ ಲಾಭಕ್ಕಾಗಿ ಬಳಸಿಕೊಳ್ಳುವುದು ಸ್ವೀಕಾರಾರ್ಹವಲ್ಲ. ಇದು ಪತ್ರಿಕೋದ್ಯಮದ ಸಮಗ್ರತೆಯನ್ನು ದುರ್ಬಲಗೊಳಿಸುವುದಲ್ಲದೆ ಮಾಧ್ಯಮದ ಮೇಲೆ ಸಾರ್ವಜನಿಕರು ಇಟ್ಟಿರುವ ನಂಬಿಕೆಯನ್ನು ನಾಶಪಡಿಸುತ್ತದೆ ಎಂದು ನ್ಯಾಯಾಲಯ ಹೇಳಿದೆ.

ವೈಯಕ್ತಿಕ ದಾಳಿಗಳು ಯಾವುದೇ ರಚನಾತ್ಮಕ ಉದ್ದೇಶವನ್ನು ಪೂರೈಸುವುದಿಲ್ಲ ಎಂದಿರುವ ನ್ಯಾಯಾಲಯ ಜಾತ್ಯತೀತತೆ ನಮ್ಮ ಪ್ರಜಾಪ್ರಭುತ್ವದ ಮೂಲಾಧಾರ, ಧಾರ್ಮಿಕ ಭಾವನೆಗಳನ್ನು ಕೆರಳಿಸುವುದು ಸರಿಯಲ್ಲ ಎಂದು ಹೇಳಿದೆ.

ಧಾರ್ಮಿಕ ವೈವಿಧ್ಯತೆಯಿಂದ ಸಮೃದ್ಧವಾಗಿರುವ ಭಾರತದಂತಹ ಬಹುತ್ವದ ಸಮಾಜದಲ್ಲಿ, ಪರಸ್ಪರ ಗೌರವ ಮತ್ತು ತಿಳುವಳಿಕೆಯ ವಾತಾವರಣವನ್ನು ಬೆಳೆಸುವುದು ಅತ್ಯಗತ್ಯ ಎಂದು ಅದು ನುಡಿದಿದೆ.

ಈ ನಿಟ್ಟಿನಲ್ಲಿ ಪ್ರಕಾಶಕರು ಮತ್ತು ಪತ್ರಕರ್ತರು ನಿರ್ಣಾಯಕ ಪಾತ್ರ ವಹಿಸಬೇಕು. ತಮ್ಮ ಅಧಿಕಾರವನ್ನು ಜವಾಬ್ದಾರಿಯುತವಾಗಿ ಚಲಾಯಿಸಿ, ಧಾರ್ಮಿಕ ಭಾವನೆಗಳನ್ನು ಅವಮಾನಿಸುವುದನ್ನು ತಪ್ಪಿಸಬೇಕು. ಸಹಿಷ್ಣುತೆ, ಗೌರವ ಮತ್ತು ಸಮಾನತೆಯ ತತ್ವಗಳನ್ನು ಎತ್ತಿಹಿಡಿಯುವುದು ಅವರ ಕರ್ತವ್ಯವಾಗಿದೆ. ಹಾಗೆ ಮಾಡುವ ಮೂಲಕ ನಮ್ಮ ಜಾತ್ಯತೀತ ಪ್ರಜಾಪ್ರಭುತ್ವಕದ ಶಕ್ತಿ ಮತ್ತು ಪುನಶ್ಚೇತನಕ್ಕೆ ಕೊಡುಗೆ ನೀಡಬೇಕು. ಇದು ಮುಂದಿನ ಪೀಳಿಗೆಗೆ ಭರವಸೆ ತುಂಬುತ್ತದೆ ಎಂದು ನ್ಯಾಯಾಲಯ ಹೇಳಿದೆ.

ಪತ್ರಕರ್ತರ ಸೋಗಿನಲ್ಲಿ ಆರೋಪಿ ಬಲಾತ್ಕಾರದ ಸಾಧನವಾಗಿ ಪತ್ರಿಕೋದ್ಯಮವನ್ನು ದುರುಪಯೋಗಪಡಿಸಿಕೊಂಡಿದ್ದಾನೆ ಎಂದ ನ್ಯಾಯಾಲಯ ಆತನ ಜಾಮೀನು ಅರ್ಜಿ ತಿರಸ್ಕರಿಸಿತು.

[ಆದೇಶದ ಪ್ರತಿಗಾಗಿ ಇಲ್ಲಿ ಕ್ಲಿಕ್ಕಿಸಿ]

Amit Maurya @ Amit Kumar Singh vs State of UP.pdf
Preview