Maneka Gandhi, Ram Bhuwal Nishad and Allahabad High Court  
ಸುದ್ದಿಗಳು

ಸಂಸದ ನಿಷಾದ್ ಆಯ್ಕೆ ಪ್ರಶ್ನಿಸಿ ಮೇನಕಾ ಗಾಂಧಿ ಸಲ್ಲಿಸಿದ್ದ ಅರ್ಜಿ ವಜಾಗೊಳಿಸಿದ ಅಲಾಹಾಬಾದ್ ಹೈಕೋರ್ಟ್

ಪ್ರಜಾಪ್ರತಿನಿಧಿ ಕಾಯಿದೆಯ ಸೆಕ್ಷನ್ 81ರ ಅಡಿಯಲ್ಲಿ ಚುನಾವಣಾ ಅರ್ಜಿಗಳಿಗೆ ವಿಧಿಸಲಾಗಿರುವ ಕಾಲಮಿತಿಯಲ್ಲಿ ಮೇನಕಾ ಮನವಿ ಸಲ್ಲಿಸಿಲ್ಲ ಎಂದು ನ್ಯಾ. ರಾಜನ್ ರಾಯ್ ಹೇಳಿದ್ದಾರೆ.

Bar & Bench

ಕಳೆದ ಲೋಕಸಭಾ ಚುನಾವಣೆಯಲ್ಲಿ ಸುಲ್ತಾನಪುರ ಲೋಕಸಭಾ ಕ್ಷೇತ್ರದಿಂದ ಚುನಾಯಿತರಾಗಿರುವ ಸಮಾಜವಾದಿ ಪಕ್ಷದ ಸಂಸದ ರಾಮ್ ಭುವಲ್ ನಿಶಾದ್ ಆಯ್ಕೆ ಪ್ರಶ್ನಿಸಿ ಬಿಜೆಪಿ ನಾಯಕಿ ಮೇನಕಾ ಗಾಂಧಿ ಅವರು ಸಲ್ಲಿಸಿದ್ದ ಚುನಾವಣಾ ಅರ್ಜಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ  [ ಮೇನಕಾ ಸಂಜಯ್ ಗಾಂಧಿ ಮತ್ತು ರಾಂಭುವಲ್ ನಿಶಾದ್ ಇನ್ನಿತರರ ನಡುವಣ ಪ್ರಕರಣ] .

ಅಭ್ಯರ್ಥಿಯ ಗೆಲುವು ಪ್ರಕಟವಾದ ದಿನದಿಂದ 45 ದಿನದೊಳಗೆ ಅರ್ಜಿ ಸಲ್ಲಿಸಬೇಕು ಎಂಬ 1951ರ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 81ಕ್ಕೆ ವ್ಯತಿರಿಕ್ತವಾಗಿ ಅರ್ಜಿ ಸಲ್ಲಿಸಿರುವುದರಿಂದ ಮೇನಕಾ ಅವರ ಮನವಿ ವಜಾಗೊಳಿಸಲಾಗುತ್ತಿದೆ ಎಂದು ನ್ಯಾಯಮೂರ್ತಿ ರಾಜನ್ ರಾಯ್ ತಿಳಿಸಿದ್ದಾರೆ.

ಅಲ್ಲದೆ ಕಾಯಿದೆಯ ಸೆಕ್ಷನ್ 86 ರ ಪ್ರಕಾರ, ಸೆಕ್ಷನ್ 81 ರ ಅಡಿಯಲ್ಲಿ ಆದೇಶ ಪಾಲಿಸದ ಚುನಾವಣಾ ಅರ್ಜಿಗಳನ್ನು ಹೈಕೋರ್ಟ್‌ಗಳು ವಜಾಗೊಳಿಸಬೇಕಿರುತ್ತದೆ. ಪ್ರಸ್ತುತ ಪ್ರಕರಣದಲ್ಲಿ ಅರ್ಜಿ ಸಲ್ಲಿಸಲು ಏಳು ದಿನ ವಿಳಂಬವಾಗಿದೆ ಎಂದು ನ್ಯಾಯಾಲಯ ತಿಳಿಸಿದೆ.

ಚುನಾವಣಾ ಅರ್ಜಿಯನ್ನು ನಿರ್ವಹಣಾರ್ಹವಲ್ಲದ ಕಾರಣ, ನ್ಯಾಯಾಲಯ ಪ್ರಕರಣದ ಅರ್ಹತೆಯನ್ನು ಪರಿಶೀಲಿಸಲಿಲ್ಲ.

ರಾಮ್ ಭುವಲ್ ನಿಶಾದ್ ಅವರು 2024 ರ ಲೋಕಸಭಾ ಚುನಾವಣೆಯಲ್ಲಿ 43,000 ಕ್ಕೂ ಹೆಚ್ಚು ಮತಗಳಿಂದ (ಈ ಹಿಂದೆ ಸುಲ್ತಾನ್ಪುರವನ್ನು ಪ್ರತಿನಿಧಿಸುತ್ತಿದ್ದ) ಮೇನಕಾ ಗಾಂಧಿ ಅವರನ್ನು ಮಣಿಸಿದ್ದರು. ಮೇನಕಾ ಅವರಿಗೆ 4,01,156 ಮತಗಳು ದೊರೆತಿದ್ದರೆ ನಿಶಾದ್ ಅವರು 4,44,330 ಮತ ಗಳಿಸಿ ವಿಜಯಿಯಾಗಿದ್ದರು.

ನಾಮಪತ್ರ ಸಲ್ಲಿಕೆ ವೇಳೆ ನಿಷಾದ್‌ ಅವರು ತಮ್ಮ ಅಪರಾಧಿಕ ಹಿನ್ನೆಲೆಯನ್ನು ಬಹಿರಂಗಪಡಿಸಿಲ್ಲ. ಅವರ ವಿರುದ್ಧ 12 ಇತ್ಯರ್ಥವಾಗದ ಪ್ರಕರಣಗಳಿದ್ದರೂ ಕೇವಲ 8 ಕ್ರಿಮಿನಲ್ ಅಪರಾಧಗಳಿವೆ ಎಂದು ಘೋಷಿಸಿಕೊಂಡಿದ್ದರು. ಹೀಗೆ ವಿವರಗಳನ್ನು ಬಹಿರಂಗಪಡಿಸದೆ ಇರುವುದು ಕಾಯಿದೆಯ ಸೆಕ್ಷನ್ 100 ರ ಅಡಿ ಭ್ರಷ್ಟಾಚಾರವಾಗುತ್ತದೆ ಎಂದು ಮೇನಕಾ ವಾದಿಸಿದ್ದರು.

ಮೇನಕಾ ಅವರ ಪರ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಮತ್ತು ವಕೀಲರಾದ ಪ್ರಶಾಂತ್ ಸಿಂಗ್ ಅಟಲ್, ಅಮಿತ್ ಜೈಸ್ವಾಲ್, ಡಾ ಪೂಜಾ ಸಿಂಗ್ ಮತ್ತು ವಿಜಯ್ ವಿಕ್ರಮ್ ಸಿಂಗ್ ವಾದ ಮಂಡಿಸಿದ್ದರು.