Bhagavad gita Trip advisor
ಸುದ್ದಿಗಳು

ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರ್ಪಡಿಸಲು ಕೋರಿದ್ದ ಅರ್ಜಿ ವಜಾಗೊಳಿಸಿದ ಅಲಾಹಾಬಾದ್‌ ಹೈಕೋರ್ಟ್

ಅರ್ಜಿದಾರ ಬ್ರಹ್ಮ ಶಂಕರ್‌ ಶಾಸ್ತ್ರಿ "ಸಮಾಜದ ಹಿತದೃಷ್ಟಿಯಿಂದ" ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೂ ಭಗವದ್ಗೀತೆಯನ್ನು ಒಂದು ವಿಷಯವನ್ನಾಗಿ ಬೋಧಿಸಬೇಕು ಎಂದು ಕೋರಿದ್ದರು.

Bar & Bench

ಹಿಂದೂಗಳ ಧರ್ಮ ಗ್ರಂಥವಾದ ಭಗವದ್ಗೀತೆಯನ್ನು ಶಾಲಾ ಪಠ್ಯದಲ್ಲಿ ಸೇರ್ಪಡೆ ಮಾಡುವಂತೆ ಕೋರಿ ಸಲ್ಲಿಸಿದ್ದ ಮನವಿಯನ್ನು ಬುಧವಾರ ಅಲಾಹಾಬಾದ್‌ ಹೈಕೋರ್ಟ್ ವಜಾಗೊಳಿಸಿದ್ದು, ಈ ಸಂಬಂಧ ಉತ್ತರ ಪ್ರದೇಶದ ಶಿಕ್ಷಣ ಮಂಡಳಿಗೆ ಮನವಿ ಸಲ್ಲಿಸುವಂತೆ ಸಲಹೆ ನೀಡಿದೆ.

ಮನವಿಯು ಅಸ್ಪಷ್ಟವೂ ಮತ್ತು ತಪ್ಪು ಗ್ರಹಿಕೆಯಿಂದಲೂ ಕೂಡಿದೆ ಎಂದಿರುವ ನ್ಯಾಯಮೂರ್ತಿಗಳಾದ ಪಂಕಜ್‌ ಮಿತ್ತಲ್‌ ಮತ್ತು ಸೌರಭ್‌ ಲಾವನಿಯಾ ಅವರಿದ್ದ ವಿಭಾಗೀಯ ಪೀಠವು ಒಂದು ವೇಳೆ ಮನವಿದಾರರು ಭಗವದ್ಗೀತೆಯನ್ನು ಮಾಧ್ಯಮಿಕ ಶಿಕ್ಷಣದ ಪಠ್ಯಕ್ರಮದಲ್ಲಿ ಒಂದು ವಿಷಯವಾಗಿ ಅಥವಾ ವಿಷಯದ ಒಂದು ಭಾಗವಾಗಿ ಕಲಿಸಬೇಕು ಎನ್ನುವ ಅಭಿಪ್ರಾಯ ಹೊಂದಿದ್ದರೆ ಅದಕ್ಕಾಗಿ ಉತ್ತರ ಪ್ರದೇಶದ ಪ್ರೌಢಶಿಕ್ಷಣ ಮತ್ತು ಇಂಟರ್‌ಮೀಡಿಯಟ್‌ ಮಂಡಳಿ ಅಥವಾ ಸೂಕ್ತವೆಂದು ತೋರುವ ಮಂಡಳಿ, ವಿಶ್ವವಿದ್ಯಾಲಯವನ್ನು ಸಂಪರ್ಕಿಸಬಹುದು ಎಂದು ಅಭಿಪ್ರಾಯಪಟ್ಟಿತು.

ರಿಟ್‌ ಮನವಿಯು ಸಂಪೂರ್ಣವಾಗಿ ಅಸ್ಪಷ್ಟ ಮತ್ತು ತಪ್ಪು ಗ್ರಹಿಕೆಯಿಂದ ಕೂಡಿದೆ ಎಂದು ಅದನ್ನು ನ್ಯಾಯಾಲಯವು ವಜಾಗೊಳಿಸಿದೆ. ಅರ್ಜಿದಾರರಾಗಿ ತಮ್ಮ ಪ್ರಕರಣವನ್ನು ತಾವೇ ನಡೆಸಿದ ಬ್ರಹ್ಮ ಶಂಕರ್‌ ಶಾಸ್ತ್ರಿ ಅವರು ಸಮಾಜದ ಹಿತದೃಷ್ಟಿಯಿಂದ ಎಲ್ಲಾ ತರಗತಿಗಳ ವಿದ್ಯಾರ್ಥಿಗಳಿಗೂ ಅದನ್ನು ಒಂದು ವಿಷಯವನ್ನಾಗಿ ಬೋಧಿಸಬೇಕು ಎಂದು ಕೋರಿದ್ದರು.