Lucknow Bench, Facebook
Lucknow Bench, Facebook 
ಸುದ್ದಿಗಳು

ಫೇಸ್‌ಬುಕ್‌ ಕರೆ ಮೂಲಕ ವಿವಾಹವಾಗಿ ಮಹಿಳೆ ತ್ಯಜಿಸಿದ ಆರೋಪಿಗೆ ಅಲಾಹಾಬಾದ್‌ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು

Bar & Bench

ಫೇಸ್‌ಬುಕ್‌ ಕರೆ ಮೂಲಕ ವಿವಾಹವಾಗಿ ಆನಂತರ ಮಹಿಳೆಯನ್ನು ತ್ಯಜಿಸಿದ ಆರೋಪ ಹೊತ್ತ ವ್ಯಕ್ತಿಗೆ ಅಲಾಹಾಬಾದ್‌ ಹೈಕೋರ್ಟ್‌ ಇತ್ತೀಚೆಗೆ ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.

ಅರ್ಜಿದಾರ ಮೊಹಮ್ಮದ್‌ ಅಲಿ ಬ್ಲ್ಯಾಕ್‌ಮೇಲ್‌ ಮಾಡಿದ್ದಾರೆ ಎಂಬ ಆರೋಪವನ್ನು ಸಾಬೀತುಪಡಿಸಲಾಗಿಲ್ಲ ಮತ್ತು ಆರೋಪಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಹೀಗಾಗಿ ಅಲಿಗೆ ನಿರೀಕ್ಷಣಾ ಜಾಮೀನು ನೀಡಲಾಗಿದೆ ಎಂದು ನ್ಯಾಯಮೂರ್ತಿ ಚಂದ್ರ ಧರಿ ಸಿಂಗ್‌ ನೇತೃತ್ವದ ಏಕಸದಸ್ಯ ಪೀಠ ಹೇಳಿದೆ.

“ಅರ್ಜಿದಾರರ ವಿರುದ್ಧ ಮಾಡಲಾದ ಬ್ಲ್ಯಾಕ್‌ಮೇಲ್‌ ಆರೋಪವನ್ನು ಸಾಬೀತುಪಡಿಸಲಾಗಿಲ್ಲ ಮತ್ತು ಅವರಿಗೆ ಯಾವುದೇ ಕ್ರಿಮಿನಲ್‌ ಹಿನ್ನೆಲೆ ಇಲ್ಲ. ಆರೋಪಗಳ ಲಕ್ಷಣವನ್ನು ಪರಿಗಣಿಸಿ ಮತ್ತು ಪ್ರಕರಣದ ಅರ್ಹತೆ ಕುರಿತು ಯಾವುದೇ ಅಭಿಪ್ರಾಯ ನೀಡದೆ ಈ ಪ್ರಕರಣದಲ್ಲಿ ಅರ್ಜಿದಾರರು ನಿರೀಕ್ಷಣಾ ಜಾಮೀನಿಗೆ ಅರ್ಹವಾಗಿದ್ದಾರೆ” ಎಂದು ನ್ಯಾಯಾಲಯ ಹೇಳಿದೆ.

2019ರಲ್ಲಿ ಅರ್ಜಿದಾರ ಅಲಿ ಅವರು ಆಫ್ರಿಕಾದ ಮೊಜಾಂಬಿಕ್‌ನಲ್ಲಿದ್ದಾಗ ಫೇಸ್‌ಬುಕ್‌ ಕರೆ ಮೂಲಕ ದೂರುದಾರೆಯ ಜೊತೆ ನಿಕಾಹ್‌ ಮಾಡಿಕೊಂಡಿದ್ದಾರೆ. ಇದು ಶಿಯಾ ಇಸ್ಲಾಮಿಕ್‌ ಕಾನೂನಿನ ಮೂಲಕ ಪರಿಗಣನಾರ್ಹ. ಭಾರತಕ್ಕೆ ಮರಳಿದ ಬಳಿಕ ಅಲಿ ಅವರು ದೂರುದಾರೆಯನ್ನು ತ್ಯಜಿಸಿದ್ದಾರೆ. ಫೇಸ್‌ಬುಕ್‌ನಲ್ಲಿ ಆಕೆಯನ್ನು ನಿರ್ಬಂಧಿಸಿದ್ದು, ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಮಾಹಿತಿ ತಂತ್ರಜ್ಞಾನ ಕಾಯಿದೆ 2008ರ ಸೆಕ್ಷನ್‌ಗಳಾದ 67- ಎ, 66-ಇ ಅಡಿ ಮತ್ತು ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 507ರ (ಕ್ರಿಮಿನಲ್‌ ಬೆದರಿಕೆ) ಅಡಿ ಪ್ರಕರಣ ದಾಖಲಿಸಲಾಗಿದೆ ಎಂದು ಆರೋಪಿಸಲಾಗಿದೆ.

ಅರ್ಜಿದಾರರ ಪರ ವಕೀಲರು “ದೂರುದಾರೆಯನ್ನು ನಮ್ಮ ಕಕ್ಷಿದಾರ ಭೇಟಿ ಮಾಡಿಲ್ಲ. ಪ್ರಾಸಿಕ್ಯೂಷನ್‌ ಹೇಳುತ್ತಿರುವ ಕತೆಯು ಸುಳ್ಳು ಮತ್ತು ನಕಲಿಯಾಗಿದೆ. ನಮ್ಮ‌ ಕಕ್ಷಿದಾರರು ವಿದೇಶದಲ್ಲಿ ನೆಲೆಸಿದ್ದು, ಆರ್ಥಿಕವಾಗಿ ಸದೃಢವಾಗಿದ್ದು, ಅವರಿಂದ ಹಣ ಕೀಳುವ ಉದ್ದೇಶದಿಂದ ಎಫ್‌ಐಆರ್‌ ದಾಖಲಿಸಲಾಗಿದೆ. ದೂರುದಾರೆಯ ಜೊತೆ ನಮ್ಮ ಕಕ್ಷಿದಾರ ಪಬ್‌ಜಿ ಆಟದಿಂದ ಸಂಪರ್ಕ ಸಾಧಿಸಿದ್ದಾರೆಯೇ ವಿನಾ ನಿಕಾಹ್‌ ಅಥವಾ ವಿವಾಹ ನಡೆದಿಲ್ಲ. ಆರಂಭದಲ್ಲಿ ದೂರುದಾರೆ 'ಅನಾಯಾ' ಎಂದು ಬಳಿಕ 'ಹುಸ್ನಾ ಅಬೀದಿ' ಎಂದು ಮತ್ತು ಅಂತಿಮವಾಗಿ 'ಇರಾಮ್‌ ಅಬ್ಬಾಸ್‌' ಎಂದು ಹೆಸರು ಬದಲಿಸಿಕೊಂಡಿದ್ದಾರೆ” ಎಂದು ವಾದಿಸಿದರು.

ಇದಕ್ಕೆ ಪ್ರತಿಯಾಗಿ ಹೆಚ್ಚುವರಿ ಸರ್ಕಾರಿ ವಕೀಲರು “ಅರ್ಜಿದಾರರ ವಿರುದ್ದ ಗಂಭೀರವಾದ ಆರೋಪಗಳನ್ನು ಮಾಡಲಾಗಿದೆ. ಆರೋಪಿಯು ವಿದೇಶದಲ್ಲಿ ಉದ್ಯೋಗ ಮಾಡುತ್ತಿದ್ದು, ಅವರು ತಲೆಮರೆಸಿಕೊಳ್ಳುವ ಹಾಗೂ ತನಿಖೆ ಮತ್ತು ವಿಚಾರಣೆಗೆ ಅವರು ಸಹಕರಿಸದೆ ಇರುವ ಸಾಧ್ಯತೆ ಇದೆ” ಎಂದು ಜಾಮೀನಿಗೆ ವಿರೋಧ ವ್ಯಕ್ತಪಡಿಸಿದರು.

ಐಟಿ ಕಾಯಿದೆಯ ಸೆಕ್ಷನ್‌ 67-ಎ ಅಡಿ ಆರೋಪಗಳು ತನಿಖೆಯ ಸಂದರ್ಭದಲ್ಲಿ ಪತ್ತೆಯಾಗಿಲ್ಲ. ಹೀಗಾಗಿ ಅದನ್ನು ಕೈಬಿಡಲಾಗಿದೆ ಎಂದು ನ್ಯಾಯಾಲಯದ ಗಮನಕ್ಕೆ ತರಲಾಯಿತು.

ವಾದ-ಪ್ರತಿವಾದವನ್ನು ಆಲಿಸಿದ ಪೀಠವು ಆರೋಪಿಗೆ ಯಾವಾಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದು ಎಂಬುದನ್ನು ತನ್ನ ಆದೇಶದಲ್ಲಿ ವಿವರಿಸಿದೆ. “ಪ್ರಾಸಿಕ್ಯೂಷನ್‌ ಅನುಮಾನಗಳನ್ನು ಹೊಂದಿದೆ ಎನ್ನುವುದನ್ನು ನಿರೂಪಿಸುವ ಅಧಿಕೃತ ದಾಖಲೆಗಳನ್ನು ಹೊಂದಿದ್ದಾಗ ಅಥವಾ ತಪ್ಪಾಗಿ ಆರೋಪಿಯನ್ನು ಅಪರಾಧದಲ್ಲಿ ಸಿಲುಕಿಸುವ ಯತ್ನ ನಡೆಯುತ್ತಿದೆ ಎನ್ನುವುದನ್ನು ನಿರೂಪಿಸಲು ಅಧಿಕೃತ ದಾಖಲೆಗಳಿದ್ದಾಗ ನಿರೀಕ್ಷಣಾ ಜಾಮೀನು ಮಂಜೂರು ಮಾಡಬಹುದಾಗಿದೆ. ವ್ಯಕ್ತಿಯ ವಿರುದ್ದ ಆರೋಪ ಮಾಡಿ ಅವರನ್ನು ಅದರಲ್ಲಿ ಸಿಲುಕಿಸುವ ಮತ್ತು ಅವರ ಘನತೆಗೆ ಚ್ಯುತಿ ತರುವ ಯತ್ನಗಳು ಆರಂಭವಾದ ಹಿನ್ನೆಲೆಯಲ್ಲಿ ನಿರೀಕ್ಷಣಾ ಜಾಮೀನಿಗೆ ಪ್ರಾಮುಖ್ಯತೆ ಬಂದಿದೆ” ಎಂದು ಪೀಠ ಹೇಳಿದೆ.

ಇದಲ್ಲದೆ ವಿಚಾರಣೆಯಿಂದ ತಪ್ಪಿಸಿಕೊಳ್ಳಲು ಆರೋಪಿಯು ನಾಪತ್ತೆಯಾಗದಿರುವಾಗ, ಕ್ರಿಮಿನಲ್‌ ಹಿನ್ನೆಲೆ ಹೊಂದಿಲ್ಲದಿರುವಾಗ ಮತ್ತು ಸಾಕ್ಷ್ಯ ನಾಶಪಡಿಸದಿರುವಾಗಲೂ ನಿರೀಕ್ಷಣಾ ಜಾಮೀನು ನೀಡಬಹುದಾಗಿದೆ. ಸದರಿ ಪ್ರಕರಣದಲ್ಲಿ ಅರ್ಜಿದಾರರ ಕ್ರಿಮಿನಲ್‌ ಹಿನ್ನೆಲೆ ಮತ್ತು ದಾಖಲೆಗಳನ್ನು ಪರಿಶೀಲಿಸಿ ಜಾಮೀನು ಮನವಿಯನ್ನು ಪೀಠ ಪರಿಗಣಿಸಿದೆ.

“ಐಟಿ ಕಾಯಿದೆಯ ಸೆಕ್ಷನ್‌ 67-ಎ ಅಡಿ ದಾಖಲಿಸಲಾಗಿದ್ದ ದೂರನ್ನು ಕೈಬಿಡಲಾಗಿದೆ. ಐಪಿಸಿ ಸೆಕ್ಷನ್‌ 420, 500, 507 ಮತ್ತು 66-ಎ ಅಡಿ ದೂರು ದಾಖಲಿಸಲಾಗಿದೆ. ಈ ಸಂಬಂಧ 2019ರ ಮೇ 19ರಂದು ಆರೋಪಪಟ್ಟಿಯನ್ನೂ ಸಲ್ಲಿಸಲಾಗಿದೆ. ಅರ್ಜಿದಾರರ ವಿರುದ್ಧ ಮಾಡಲಾದ ಆರೋಪಗಳನ್ನು ಸಾಬೀತುಪಡಿಸಲಾಗಿಲ್ಲ. ಅರ್ಜಿದಾರರಿಗೆ ಕ್ರಿಮಿನಲ್‌ ಹಿನ್ನೆಲೆಯೂ ಇಲ್ಲ” ಎಂಬುದನ್ನು ಪರಿಗಣಿಸಿ ಆರೋಪಿ ಅಲಿಗೆ ನ್ಯಾಯಾಲಯವು ನಿರೀಕ್ಷಣಾ ಜಾಮೀನು ಮಂಜೂರು ಮಾಡಿದೆ.