Lucknow Bench, Allahabad High Court 
ಸುದ್ದಿಗಳು

ಅತ್ಯಾಚಾರ ಆರೋಪಿಗೆ ಅಲಾಹಾಬಾದ್ ಹೈಕೋರ್ಟ್ ಜಾಮೀನು: ಸಾಮಾಜಿಕ ಜಾಲತಾಣಗಳಲ್ಲಿ ಸಂತ್ರಸ್ತೆಯ ಛಾಯಾಚಿತ್ರ ಬಳಸದಂತೆ ತಾಕೀತು

ಸಂತ್ರಸ್ತೆಯೊಂದಿಗೆ 2019ರಿಂದ ದೈಹಿಕ ಸಂಬಂಧ ಹೊಂದಿದ್ದ ಆರೋಪಿ ಮದುವೆಯಾಗುವುದಾಗಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದ ಎಂದು ಆರೋಪಿಸಲಾಗಿತ್ತು.

Bar & Bench

-------------------------------------
ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ ಆರೋಪ ಎದುರಿಸುತ್ತಿದ್ದ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವಂತೆ ಈಚೆಗೆ ಆದೇಶಿಸಿದ್ದ ಅಲಾಹಾಬಾದ್‌ ಹೈಕೋರ್ಟ್‌ ಜಾಮೀನು ನೀಡಬೇಕೆಂದರೆ ವಾಟ್ಸಾಪ್‌ ಅಥವಾ ಫೇಸ್‌ಬುಕ್‌ನಲ್ಲಿ ಸಂತ್ರಸ್ತೆಯ ಛಾಯಾಚಿತ್ರ ಬಳಸುವಂತಿಲ್ಲ ಎಂದು ಷರತ್ತು ವಿಧಿಸಿತು. [ಗಲ್ಫಾನ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಜಾಮೀನು ಷರತ್ತು ಉಲ್ಲಂಘಿಸಿದರೆ ಆರೋಪಿಗೆ ನೀಡಲಾಗಿರುವ ಪರಿಹಾರವನ್ನು ರದ್ದುಪಡಿಸಬೇಕಾಗುತ್ತದೆ ಎಂದು ನ್ಯಾ. ಮಹಮದ್‌ ಫೈಜ್‌ ಆಲಂ ಖಾನ್‌ ಎಚ್ಚರಿಕೆ ನೀಡಿದರು.

"ಅರ್ಜಿದಾರನು ತನ್ನ ವಾಟ್ಸಾಪ್ ಅಥವಾ ಫೇಸ್‌ಬುಕ್‌ ಡಿಪಿಯಾಗಿ ಸಂತ್ರಸ್ತೆಯ ಯಾವುದೇ ಚಿತ್ರವನ್ನು ಪ್ರದರ್ಶಿಸಬಾರದು ಮತ್ತು ಈ ಷರತ್ತಿನ ಉಲ್ಲಂಘನೆಯು  ಅರ್ಜಿದಾರರಿಗೆ ನೀಡಲಾದ ಜಾಮೀನಿನ ಸೌಲಭ್ಯವನ್ನು ರದ್ದುಗೊಳಿಸಲು ಸಾಕಾಗುತ್ತದೆ" ಎಂದು ಆದೇಶದಲ್ಲಿ ತಿಳಿಸಲಾಗಿದೆ.

ದೂರುದಾರೆ, ಆಕೆಯ ಕುಟುಂಬ ಸದಸ್ಯರು ಹಾಗೂ ಪ್ರಾಸಿಕ್ಯೂಷನ್‌ ಸಾಕ್ಷಿಗಳನ್ನು ನೇರವಾಗಿ ಇಲ್ಲವೇ ವಾಟ್ಸಾಪ್ ಮತ್ತು ಫೇಸ್‌ಬುಕ್ ಸೇರಿದಂತೆ ಯಾವುದೇ ಆನ್‌ಲೈನ್‌ ವೇದಿಕೆ ಮೂಲಕ ಸಂಪರ್ಕಿಸದಂತೆಯೂ ನ್ಯಾಯಾಲಯ ಆರೋಪಿಗೆ ನಿರ್ದೇಶಿಸಿದೆ . ಈ ಬಗ್ಗೆ ವಿಚಾರಣಾ ನ್ಯಾಯಾಲಯದ ಮುಂದೆ ವಾಗ್ದಾನ ಅರ್ಜಿ ಸಲ್ಲಿಸುವಂತೆ ಆರೋಪಿಗೆ ಸೂಚಿಸಲಾಗಿದೆ.

ತನ್ನೊಂದಿಗೆ 2019ರಿಂದ ದೈಹಿಕ ಸಂಬಂಧ ಹೊಂದಿದ್ದ ಆರೋಪಿ ಮದುವೆಯಾಗುವುದಾಗಿ ನೀಡಿದ್ದ ಭರವಸೆಯನ್ನು ಹುಸಿಗೊಳಿಸಿದ್ದ ಎಂದು ದೂರಿ 20 ವರ್ಷದ ಸಂತ್ರಸ್ತೆ ನ್ಯಾಯಾಲಯದ ಮೊರೆ ಹೋಗಿದ್ದ ಪ್ರಕರಣ ಇದಾಗಿದೆ.

[ಆದೇಶದ ಪ್ರತಿಯನ್ನು ಇಲ್ಲಿ ಓದಿ]

Gulfran_v_State_of_U_P.pdf
Preview