ನಟ ನವಾಜುದ್ದೀನ್ ಸಿದ್ಧಿಕಿ ಮತ್ತು ಅವರ ನಾಲ್ವರು ಕುಟುಂಬ ಸದಸ್ಯರಿಗೆ ಎದುರಾಗಿದ್ದ ಬಂಧನ ಭೀತಿಗೆ ಸದ್ಯಕ್ಕೆ ಮುಕ್ತಿ ದೊರೆತಿದೆ. ಬಂಧನದ ವಿರುದ್ಧ ಅಲಹಾಬಾದ್ ಹೈಕೋರ್ಟ್ ಮಧ್ಯಂತರ ಪರಿಹಾರ ನೀಡಿದೆ. ತಮ್ಮ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಕುಟುಂಬದ ಅಪ್ರಾಪ್ತ ಮಗುವಿಗೆ ಕಿರುಕುಳ ನೀಡಲಾಗಿದೆ ಎಂದು ಆರೋಪಿಸಿ ನವಾಜುದ್ದೀನ್ ಅವರಿಂದ ದೂರವಾಗಿರುವ ಪತ್ನಿ ಆಲಿಯಾ ದೂರು ನೀಡಿದ್ದರು. ಇದನ್ನು ಆಧರಿಸಿ ನವಾಜುದ್ದೀನ್ ಮತ್ತು ಅವರ ಮೂವರು ಸಹೋದರರು ಹಾಗೂ ತಾಯಿಯ ವಿರುದ್ಧ ಮುಜಾಫರ್‌ನಗರದಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು.
ಭಾರತೀಯ ದಂಡ ಸಂಹಿತೆ ಸೆಕ್ಷನ್ 354, 323, 504, 506, 34 ಮತ್ತು 2012ರ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣಾ ಕಾಯಿದೆ ಸೆಕ್ಷನ್ 8, 12, 21 ರ ಅಡಿಯಲ್ಲಿ ನೋಂದಾಯಿಸಲಾದ ಎಫ್‌ಐಆರ್ ರದ್ದುಪಡಿಸುವಂತೆ ಅರ್ಜಿಯಲ್ಲಿ ಕೋರಲಾಗಿತ್ತು. ಮುಖ್ಯ ಆರೋಪಿಯಾದ ಮಿನಾಜುದ್ದೀನ್ ಸಿದ್ಧಿಕಿ ಹೊರತುಪಡಿಸಿ ಉಳಿದೆಲ್ಲರಿಗೂ ಬಂಧನದ ವಿರುದ್ಧ ತಡೆ ನೀಡಿರುವ ನ್ಯಾಯಮೂರ್ತಿ ಮನೋಜ್ ಮಿಶ್ರಾ ಮತ್ತು ಸಂಜಯ್ ಕುಮಾರ್ ಪಚೋರಿ ಅವರಿದ್ದ ನ್ಯಾಯಪೀಠ, ಮುಖ್ಯ ಆರೋಪಿ ಹೊರತುಪಡಿಸಿದರೆ ಉಳಿದ ಆರೋಪಿಗಳಾದ ಫೈಯಾಜುದ್ದೀನ್ ಸಿದ್ಧಿಕಿ, ಅಯಾಜುದ್ದೀನ್ ಸಿದ್ಧಿಕಿ, ಮೆಹರುನಿಷಾ ಸಿದ್ಧಿಕಿ ಹಾಗೂ ನವಾಜುದ್ದೀನ್ ಸಿದ್ಧಿಕಿ ವಿರುದ್ಧ ಸಾಮಾನ್ಯ ಆರೋಪಗಳನ್ನು ಮಾಡಲಾಗಿರುವುದರಿಂದ ಮತ್ತು ತನಿಖೆಗೆ ಅವರು ಸಹಕರಿಸುತ್ತಿರುವುದರಿಂದ ಈ ಅರ್ಜಿಯನ್ನು ವಿಲೇವಾರಿ ಮಾಡುವುದು ಸೂಕ್ತ ಎಂದು ಭಾವಿಸುತ್ತೇವೆ. ತನಿಖೆ ಮುಂದುವರೆದು ತಾರ್ಕಿಕವಾದ ತೀರ್ಮಾನವೊಂದಕ್ಕೆ ಬರಬೇಕು ಆದರೆ ತನಿಖೆ ನಡೆಸಿ ಪೊಲೀಸ್ ವರದಿ ಸಲ್ಲಿಸುವವರೆಗೆ ಆರೋಪಿಗಳನ್ನು ಬಂಧಿಸಕೂಡದು ಎಂಬುದಾಗಿ ನ್ಯಾಯಾಲಯ ಸೂಚಿಸಿದೆ.
ಅಲ್ಲದೆ ನ್ಯಾಯಾಲಯವು, “ಆರೋಪಗಳನ್ನು ಗಮನಿಸಿದಾಗ, ನವಾಜುದ್ದೀನ್ ಸಿದ್ಧಿಕಿ ಅವರಿಂದ ವಿಚ್ಛೇದನ ಪಡೆಯಲು ಅವರ ಪತ್ನಿ ಆಲಿಯಾ ಪ್ರಯತ್ನಿಸಿರುವುದು ಕಂಡುಬರುತ್ತದೆ,” ಎಂದಿದ್ದು, ಈ ಅಂಶವನ್ನು ದೂರಿನ ಹಿನ್ನೆಲೆಯಲ್ಲಿ ಪರಿಗಣಿಸಿದೆ.
ಎಫ್‌ಐಆರ್ ರದ್ದುಗೊಳಿಸಲು ನಿರಾಕರಿಸಿದ ನ್ಯಾಯಾಲಯ, ʼಆರೋಪಗಳಿಗೆ ಸಂಬಂಧಿಸಿದಂತೆ ತನಿಖೆಯ ಅಗತ್ಯವಿರುತ್ತದೆ. ಆದ್ದರಿಂದ ತ್ವರಿತವಾಗಿ ಕೋರಿಕೆ ಮನ್ನಿಸಲು ಸಾಧ್ಯವಿಲ್ಲʼ ಎಂದು ಅಭಿಪ್ರಾಯಪಟ್ಟಿತು. ಜೊತೆಗೆ ಫೈಯಾಜುದ್ದೀನ್ ಸಿದ್ದಿಕಿ ಅವರಿಗೆ ಜಾಮೀನು ಅಥವಾ ನಿರೀಕ್ಷಣಾ ಜಾಮೀನು ಸಲ್ಲಿಸುವ ಹಕ್ಕನ್ನು ಕೂಡ ನ್ಯಾಯಾಲಯ ನಿರಾಕರಿಸಿತು.