ಐಸಿಐಸಿಐ ಬ್ಯಾಂಕ್ ಅಧಿಕಾರಿಗಳು ಸಾಲ ವಸೂಲಾತಿಗಾಗಿ ಏಜೆಂಟ್‌ಗಳನ್ನು ಬಳಸುತ್ತಿರುವ ಬಗ್ಗೆ ಖುದ್ದು ವಿವರಣೆ ನೀಡುವಂತೆ ಬ್ಯಾಂಕ್‌ನ ಅಧ್ಯಕ್ಷರಿಗೆ ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ಸೂಚಿಸಿದೆ [ಜಸ್ಮೀಂದರ್ ಚಹಾಲ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಇನ್ನಿತರರ ನಡುವಣ ಪ್ರಕರಣ].
ಸಾಲದ ಮೊತ್ತವನ್ನು ಬಡ್ಡಿಸಹಿತ ತೀರಿಸಿರುವಾಗ ಗ್ರಾಹಕರ ವಿರುದ್ಧ ಸಿವಿಲ್ ಮೊಕದ್ದಮೆ ಹೂಡಿದ್ದು ಏಕೆ ಎಂಬುದನ್ನು ಸ್ಪಷ್ಟಪಡಿಸುವಂತೆ ಬ್ಯಾಂಕ್ ಅಧ್ಯಕ್ಷರಿಗೆ ಆದೇಶಿರುವ ನ್ಯಾ. ಪ್ರಶಾಂತ್ ಕುಮಾರ್ ಅವರಿದ್ದ ಪೀಠ ಈ ಬಗ್ಗೆ ವೈಯಕ್ತಿಕ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ.
“ಸರ್ವೋಚ್ಚ ನ್ಯಾಯಾಲಯ ಸ್ಪಷ್ಟವಾಗಿ ತಡೆ ನೀಡಿದ್ದರೂ ಬ್ಯಾಂಕ್ ಈಗಲೂ ವಸೂಲಾತಿ ಏಜೆಂಟ್‌ಗಳ ಸೇವೆ ಪಡೆಯುತ್ತಿರುವುದೇಕೆ ಎಂಬುದನ್ನೂ ಅಧ್ಯಕ್ಷರು ಹೇಳಬಹುದು” ಎಂದು ನ್ಯಾಯಾಲಯ ನುಡಿದಿದೆ.
ಬ್ಯಾಂಕ್‌ನ ನೋಯ್ಡಾ ಶಾಖೆಯಿಂದ ಗೃಹ ಸಾಲ ಪಡೆದಿರುವ ರಾಹುಲ್ ಸಿಂಗ್ ಎಂಬುವವರು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಹೂಡಿರುವ ಮಾನನಷ್ಟ ಮೊಕದ್ದಮೆಯನ್ನು ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು.
ಬಡ್ಡಿ ಸಹಿತ ಸಾಲ ಮರುಪಾವತಿಸಿದ್ದರೂ ಸಿಂಗ್ ಅವರನ್ನು ಸಿಬಿಲ್ ರೇಟಿಂಗ್‌ನಲ್ಲಿ ಸುಸ್ತಿದಾರನೆಂದು ತೋರಿಸಲಾಗಿತ್ತು. ಅಲ್ಲದೆ ಬ್ಯಾಂಕ್ ಅವರ ವಿರುದ್ಧ ಸಿವಿಲ್ ಮೊಕದ್ದಮೆಯನ್ನೂ ಹೂಡಿತ್ತು. ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಿದರೂ ಬ್ಯಾಂಕ್ ತನ್ನನ್ನು ಸುಸ್ತಿದಾರನೆಂದೇ ಬಿಂಬಿಸುತ್ತಿತ್ತು. ಮನೆಗೆ ಬರುತ್ತಿದ್ದ ಸಾಲ ವಸೂಲಾತಿ ಏಜೆಂಟ್‌ಗಳು ತಮ್ಮನ್ನು ಅವಹೇಳನ ಮಾಡುತ್ತಿದ್ದರು ಎಂದು ಅಮೆರಿಕದ ಪ್ರಜೆ ಮತ್ತು ಭಾರತದ ಸಾಗರೋತ್ತರ ಪೌರತ್ವ (ಒಸಿಐ) ಕಾರ್ಡ್ ಹೊಂದಿರುವ ಸಿಂಗ್ ಅವರು ನ್ಯಾಯಾಲಯಕ್ಕೆ ತಿಳಿಸಿದರು. ಹೀಗಾಗಿ ಅವರ ಮಾನನಷ್ಟ ಮೊಕದ್ದಮೆ ಹೂಡಿದ್ದರು.
ಈ ಮೊಕದ್ದಮೆ ರದ್ದುಗೊಳಿಸುವಂತೆ ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾ. ಕುಮಾರ್, ಸುಪ್ರೀಂ ಕೋರ್ಟ್ ಸಾಲ ವಸೂಲಾತಿ ಏಜೆಂಟರನ್ನು ಬ್ಯಾಂಕ್‌ಗಳು ಬಳಸುವಂತಿಲ್ಲ ಎಂದು ತೀರ್ಪು ನೀಡಿ 6 ವರ್ಷಗಳ ಬಳಿಕವೂ ಅವರನ್ನು ಸಾಲ ವಸೂಲಾತಿಗೆ ಬಳಸಿಕೊಳ್ಳುತ್ತಿದೆ ಎಂದರು. ಜುಲೈ 10ರಂದು ಪ್ರಕರಣದ ಮುಂದಿನ ವಿಚಾರಣೆ ನಡೆಯಲಿದೆ.