ಎರಡು ವರ್ಷಗಳ ಅವಧಿಯಲ್ಲಿ ಒಂದೇ ಪರಿಹಾರ ಕೋರಿ ನಾಲ್ಕು ರಿಟ್ ಅರ್ಜಿ ಸಲ್ಲಿಸಿದ್ದ ವ್ಯಕ್ತಿಯೊಬ್ಬರಿಗೆ ಅಲಾಹಾಬಾದ್ ಹೈಕೋರ್ಟ್ 3 ಲಕ್ಷ ರೂಪಾಯಿ ದಂಡ ವಿಧಿಸಿದೆ. ದಂಡವನ್ನು ಒಂದು ತಿಂಗಳೊಳಗೆ ಪಾವತಿ ಮಾಡಬೇಕು. ತಪ್ಪಿದಲ್ಲಿ ಹೈಕೋರ್ಟ್ ರೆಜಿಸ್ಟ್ರಿ ಭೂ ಕಂದಾಯದ ಬಾಕಿಯ ರೀತ್ಯಾ ವಸೂಲಿ ಮಾಡಬೇಕು ಎಂದು ಆದೇಶಿಸಿ ಅರ್ಜಿಯನ್ನು ವಜಾಗೊಳಿಸಿದೆ.
ನೂರ್ ಹಸನ್ ಎಂಬುವವರು ಗ್ರಾಮ ಪ್ರಧಾನರಾಗಿ ಕೆಲಸ ಮಾಡಲು ಅನುಮತಿ ನೀಡಬೇಕು ಮತ್ತು ತಮ್ಮ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಮರಳಿಸಬೇಕೆಂದು ಕೋರಿ ಈ ಹಿಂದೆ ಅರ್ಜಿ ಸಲ್ಲಿಸಿದ್ದರು. ಅರ್ಜಿದಾರರ ಆರ್ಥಿಕ ಮತ್ತು ಆಡಳಿತಾತ್ಮಕ ಅಧಿಕಾರವನ್ನು ಉತ್ತರ ಪ್ರದೇಶ ಪಂಚಾಯತ್ ರಾಜ್ ಕಾಯಿದೆಯಡಿ ಜಿಲ್ಲಾಮಟ್ಟದ ಅಧಿಕಾರಿಯೊಬ್ಬರು ತಡೆದಿದ್ದರು. ಇದನ್ನು ಪ್ರಶ್ನಿಸಿ ಅರ್ಜಿದಾರರು ಹೈಕೋರ್ಟ್ ಮೆಟ್ಟಿಲೇರಿದ್ದರು.
ಈ ಆದೇಶದ ವಿರುದ್ಧ ಸಲ್ಲಿಸಿದ ಮೊದಲ ಅರ್ಜಿಯನ್ನು 2019ರ ಏಪ್ರಿಲ್ 4ರಂದು ಹೈಕೋರ್ಟ್ ವಜಾಗೊಳಿಸಿತ್ತು. ಎರಡನೆಯದನ್ನು 2019ರ ಡಿಸೆಂಬರ್ 12ರಂದು ವಜಾಗೊಳಿಸಲಾಗಿದ್ದು, ಮೂರನೆಯದನ್ನು 2020ರ ಫೆಬ್ರವರಿ 14ರಂದು ವಜಾಗೊಳಿಸಲಾಯಿತು. ಅದೇ ಬಗೆಯ ಪರಿಹಾರವನ್ನು ಕೋರಿ ಅರ್ಜಿದಾರರು ನಾಲ್ಕನೇ ಬಾರಿ ಅರ್ಜಿಯನ್ನು ಸಲ್ಲಿಸಿದರು. ಅರ್ಜಿದಾರ ತಾನು ಹೆಚ್ಚಿನ ಅರ್ಹತೆ ಹೊಂದಿಲ್ಲ. ಕೇವಲ ಐದನೇ ತರಗತಿ ಉತ್ತೀರ್ಣನಾಗಿದ್ದೆ ಜೊತೆಗೆ ಕಾನೂನು ಜ್ಞಾನದ ಕೊರತೆಯಿಂದಾಗಿ ಪದೇ ಪದೇ ಅರ್ಜಿ ಸಲ್ಲಿಸಿದ್ದಾಗಿ ತಿಳಿಸಿದ್ದಾರೆ.
ಮತ್ತೊಂದೆಡೆ ಸ್ಥಾಯಿ ವಕೀಲ ರಾಹುಲ್ ಸಕ್ಸೇನಾ ಅವರು, ಇದು ಸ್ಪಷ್ಟವಾಗಿ ನ್ಯಾಯಾಂಗ ನಿಂದನೆ ಪ್ರಕರಣ. ಅರ್ಜಿದಾರರು ಷರತ್ತುಬದ್ಧವಾಗಿ ಕ್ಷಮಾಪಣೆ ಕೋರಿದ್ದಾರೆ. ಭವಿಷ್ಯದಲ್ಲಿ ಇಂತಹ ಪ್ರಕರಣ ಮರುಕಳಿಸದಂತೆ ನೋಡಿಕೊಳ್ಳುವುದಾಗಿ ತಿಳಿಸಿದ್ದಾರೆ ಎಂದರು. ಸಕ್ಸೇನಾ ಅವರ ವಾದವನ್ನು ಮನ್ನಿಸಿದ ನ್ಯಾಯಾಲಯ ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿತು.