NEET-UG 2024, Allahabad High Court Lucknow Bench  
ಸುದ್ದಿಗಳು

[ನೀಟ್‌] ನಕಲಿ ದಾಖಲೆ ನೀಡಿ ಮರುಮೌಲ್ಯಮಾಪನ ಕೋರಿಕೆ: ಕಾನೂನು ಕ್ರಮ ನಿರ್ಬಂಧಿಸುವುದಿಲ್ಲ ಎಂದ ಅಲಾಹಾಬಾದ್ ಹೈಕೋರ್ಟ್

Bar & Bench

ಪ್ರಸಕ್ತ ಸಾಲಿನ ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶಾತಿ ಪದವಿ ಪರೀಕ್ಷೆಯಲ್ಲಿ ತನಗೆ ದೊರೆತ ಅಂಕಗಳಿಗೆ ಆಕ್ಷೇಪ ವ್ಯಕ್ತಪಡಿಸಿ ಅರ್ಜಿ ಸಲ್ಲಿಸಿದ್ದ ಅಭ್ಯರ್ಥಿಯೊಬ್ಬರು ನೀಡಿದ ದಾಖಲೆ ನಕಲಿಯಾಗಿರುವುದರಿಂದ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ ಎಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಮಂಗಳವಾರ ಅಲಾಹಾಬಾದ್‌ ಹೈಕೋರ್ಟ್‌ಗೆ ತಿಳಿಸಿದೆ [ಆಯುಷಿ ಪಟೇಲ್ ಮತ್ತು ಭಾರತ ಒಕ್ಕೂಟ ಇನ್ನಿತರರ ನಡುವಣ ಪ್ರಕರಣ].

ನಕಲಿ ದಾಖಲೆ ಸಲ್ಲಿಸಿರುವುದರಿಂದ ಅರ್ಜಿದಾರೆ ಆಯುಷಿ ಪಟೇಲ್‌ ಪರ ವಕೀಲರಿಗೆ ವಾದಿಸಲು ಏನೂ ಉಳಿದಿಲ್ಲ ಎಂದ ದ ನ್ಯಾಯಮೂರ್ತಿ ರಾಜೇಶ್ ಸಿಂಗ್ ಚೌಹಾಣ್ ಅರ್ಜಿ ವಜಾಗೊಳಿಸಿದರು. 

ಆಯುಷಿ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳದಂತೆ ಅಧಿಕಾರಿಗಳನ್ನು ನಿರ್ಬಂಧಿಸಲು ಕೂಡ ಸಾಧ್ಯವಿಲ್ಲ ಎಂದು ನ್ಯಾಯಾಲಯ ನುಡಿದಿದೆ.

ಅರ್ಜಿದಾರೆ ನಕಲಿ ಮತ್ತು ಕಪೋಲಕಲ್ಪಿತ ದಾಖಲೆಗಳೊಂದಿಗೆ ಅರ್ಜಿ ಸಲ್ಲಿಸಿರುವುದು ನಿಜಕ್ಕೂ ಶೋಚನೀಯ. ಆದ್ದರಿಂದ, ಆಕೆಯ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳದಂತೆ ನ್ಯಾಯಾಲಯ ಅಧಿಕಾರಿಗಳನ್ನು ನಿರ್ಬಂಧಿಸಲಾಗದು ಎಂದು ಅದು ಹೇಳಿದೆ.

ತನ್ನ ಒಎಂಆರ್‌ ಪತ್ರಿಕೆಯನ್ನು ಭೌತಿಕವಾಗಿ ಪರಿಶೀಲಿಸುವಂತೆ ಕೋರಿದ್ದ ಆಯುಷಿ ಎನ್‌ಟಿಎ ವಿರುದ್ಧ ತನಿಖೆ ನಡೆಸುವಂತೆಯೂ ಮನವಿ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಎನ್‌ಟಿಎ ಅಭ್ಯರ್ಥಿಯ ಮೂಲ ಒಎಂಆರ್‌ ಪತ್ರಿಕೆಯನ್ನು ಹಾಗೂ ಹಾಜರಾತಿ ಪತ್ರ ಮತ್ತು ಅಂಕಪಟ್ಟಿಯನ್ನು ಸಲ್ಲಿಸಿತ್ತು. ಆಯುಷಿ ಸಲ್ಲಿಸಿದ್ದ ದಾಖಲೆಗೂ ಎನ್‌ಟಿಎ ಸಲ್ಲಿಸಿದ ದಾಖಲೆಗೂ ವ್ಯತ್ಯಯ ಇರುವುದು ಕಂಡುಬಂದಿತ್ತು.

ಅರ್ಜಿಯೊಂದಿಗೆ ಸಲ್ಲಿಸಲಾದ ದಾಖಲೆಗಳು ನಕಲಿ ಮತ್ತು ಕಪೋಲಕಲ್ಪಿತ ಎಂದು ಕಂಡುಬಂದಿರುವುದರಿಂದ, ಅಭ್ಯರ್ಥಿಯ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲು ಸಕ್ಷಮ ಪ್ರಾಧಿಕಾರ ನಿರ್ಧರಿಸಿದೆ ಎಂದು ಎನ್‌ಟಿಎ ಪರ ವಕೀಲರು ನ್ಯಾಯಾಲಯಕ್ಕೆ ತಿಳಿಸಿದರು. 

ತನ್ನ ಅರ್ಜಿಯೊಂದಿಗೆ ನಕಲಿ ದಾಖಲೆ ಸಲ್ಲಿಸಿರುವ ಅಭ್ಯರ್ಥಿಯ ವಿರುದ್ಧ ಎಫ್‌ಐಆರ್ ದಾಖಲಿಸಲು ಈ ವರ್ಷದ ಫೆಬ್ರವರಿಯಲ್ಲಿ ಹೈಕೋರ್ಟ್ ನೀಡಿದ್ದ ಆದೇಶವನ್ನು ಎನ್‌ಟಿಎ ಉಲ್ಲೇಖಿಸಿತು. ಅಂತಿಮವಾಗಿ ನ್ಯಾಯಾಲಯ ಅರ್ಜಿ ವಜಾಗೊಳಿಸಿತು.