Justice Govind Mathur and Justice Saumitra Dayal Singh
Justice Govind Mathur and Justice Saumitra Dayal Singh 
ಸುದ್ದಿಗಳು

ವಕೀಲರ ಮೇಲೆ ಪೊಲೀಸರ ದಾಳಿ: ತನಿಖೆ ನಡೆಸಲು ಮುಖ್ಯ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಗೆ ಅಲಾಹಾಬಾದ್ ಹೈಕೋರ್ಟ್ ಆದೇಶ

Bar & Bench

ಉತ್ತರ ಪ್ರದೇಶದ ಪೊಲೀಸರು ವಕೀಲರ ಮೇಲೆ ಹಲ್ಲೆ ನಡೆಸಿದ ಘಟನೆಬಗ್ಗೆ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಅಲಹಾಬಾದ್ ಹೈಕೋರ್ಟ್ ಮಂಗಳವಾರ ಎಟಾ ನಗರದ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್ ಅವರಿಗೆ ನಿರ್ದೇಶನ ನೀಡಿದೆ.

ಘಟನೆಗೆ ಸಂಬಂಧಿಸಿದಂತೆ ಸ್ವಯಂ ಪ್ರೇರಿತ ವಿಚಾರಣೆಗೆ ಮುಂದಾಗಿದ್ದ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್ ಮತ್ತು ನ್ಯಾಯಮೂರ್ತಿ ಸೌಮಿತ್ರ ದಯಾಳ್ ಸಿಂಗ್ ಅವರಿದ್ದ ವಿಭಾಗೀಯ ಪೀಠ ಪ್ರಕರಣ ಕೈಗೆತ್ತಿಕೊಳ್ಳುವ ಸಂಬಂಧ ಭೌತಿಕ ವಿಚಾರಣೆ ನಡೆಸಿ ಈ ಆದೇಶ ಜಾರಿ ಮಾಡಿದೆ.

ದೃಶ್ಯ ಮತ್ತು ಶ್ರವಣ ದಾಖಲೆಗಳು ಸೇರಿದಂತೆ ಎಲ್ಲಾ ಸೂಕ್ತ ದಾಖಲೆಗಳನ್ನು ಪರಿಗಣಿಸಿ ಮುಂದಿನ ವಿಚಾರಣೆಯ ಹೊತ್ತಿಗೆ ವರದಿ ಸಲ್ಲಿಸಬೇಕು. ಈ ಸಂಬಂಧ ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರಿಗೆ ಎಟಾ ಜಿಲ್ಲಾ ದಂಡಾಧಿಕಾರಿ ಮತ್ತು ಪೊಲೀಸ್‌ ವರಿಷ್ಠಾಧಿಕಾರಿಗಳು ಸಹಾಯ ಮಾಡಬೇಕು. ಚೀಫ್‌ ಜುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಅವರು ಬಯಸಿದ ಎಲ್ಲಾ ತಥ್ಯಾಂಶಗಳು ಮತ್ತು ದಾಖಲೆಗಳನ್ನು ಒದಗಿಸುವಂತೆ ಈ ಇಬ್ಬರಿಗೂ ಕೋರ್ಟ್‌ ಸೂಚನೆ ನೀಡಿದೆ.

2021 ರ ಜನವರಿ 8ಕ್ಕೆ ಮುಂದಿನ ವಿಚಾರಣೆ ನಿಗದಿಯಾಗಿದ್ದು ಅಲ್ಲಿಯವರೆಗೆ ಆರೋಪಿಗಳನ್ನು ಬಂಧನದಲ್ಲಿಡುವಂತೆ ಹೈಕೋರ್ಟ್‌ ನಿರ್ದೇಶನ ನೀಡಿದೆ. ಉತ್ತರ ಪ್ರದೇಶ ಪೊಲೀಸರು ಎಟಾ ನಗರದಲ್ಲಿರುವ ವಕೀಲ ರಾಜೇಂದ್ರ ಶರ್ಮಾ ಅವರ ಮನೆಯ ಬಾಗಿಲು ಮುರಿದು ಅವರ ವಕೀಲರ ಧಿರಿಸಿನಲ್ಲಿದ್ದಾಗಲೇ ಹೊರಗೆ ಎಳೆದೊಯ್ದು ಹಲ್ಲೆ ಮಾಡಿದ್ದರು. ಘಟನೆಯ ವೀಡಿಯೊ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್‌ ಆಗಿದ್ದು ವ್ಯಾಪಕ ಖಂಡನೆ ವ್ಯಕ್ತವಾಗಿತ್ತು.

ವಕೀಲರ ಮೇಲೆ ಹಲ್ಲೆ ನಡೆಸಿದ ಪೊಲೀಸರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವಂತೆ ಭಾರತೀಯ ವಕೀಲರ ಪರಿಷತ್ತು ಸಿಜೆಐ ಎಸ್‌ ಎ ಬೊಬ್ಡೆ ಮತ್ತು ಅಲಹಾಬಾದ್ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗೋವಿಂದ್ ಮಾಥುರ್‌ ಅವರಿಗೆ ಪತ್ರ ಬರೆದಿತ್ತು. ಕೃತ್ಯ ಖಂಡಿಸಿ ಸುಪ್ರೀಂಕೋರ್ಟ್‌ ವಕೀಲರ ಸಂಘ ಕೂಡ ಸೋಮವಾರ ಹೇಳಿಕೆ ನೀಡಿತ್ತು.