Gambling, Allahabad HC 
ಸುದ್ದಿಗಳು

ಆನ್‌ಲೈನ್‌ ಗೇಮಿಂಗ್, ಬೆಟ್ಟಿಂಗ್ ನಿಯಂತ್ರಣ ಪರಿಶೀಲಿಸಲು ಸಮಿತಿ ರಚನೆ: ಅಲಾಹಾಬಾದ್ ಹೈಕೋರ್ಟ್ ಆದೇಶ

ಅಸ್ತಿತ್ವದಲ್ಲಿರುವ ಸಾರ್ವಜನಿಕ ಜೂಜಾಟ ಕಾಯಿದೆ- 1867, ವಸಾಹತುಶಾಹಿ ಯುಗದ ಕಾಯಿದೆಯಾಗಿದ್ದು, ಕಾರ್ಡ್ ಆಟಗಳಂತಹ ಸಾಂಪ್ರದಾಯಿಕ ಜೂಜಾಟದ ಬಗ್ಗೆ ಮಾತ್ರ ಅದು ಮಾತನಾಡುತ್ತದೆ ಎಂದ ಪೀಠ.

Bar & Bench

ಆನ್‌ಲೈನ್ ಗೇಮಿಂಗ್, ಬೆಟ್ಟಿಂಗ್ ದಂಧೆಯ  ನಿಯಂತ್ರಣ ಮತ್ತು ಮೇಲ್ವಿಚಾರಣೆಗಾಗಿ ಕಾಯಿದೆ ರೂಪಿಸುವ ಅಗತ್ಯ ಪರಿಶೀಲಿಸಲು ಉನ್ನತಾಧಿಕಾರ  ಸಮಿತಿ ರಚಿಸುವಂತೆ ಅಲಾಹಾಬಾದ್‌ ಹೈಕೋರ್ಟ್ ಇತ್ತೀಚೆಗೆ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿತು [ಇಮ್ರಾನ್ ಖಾನ್ ಮತ್ತಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಮತ್ತಿತರರ ನಡುವಣ ಪ್ರಕರಣ ].

ಸಮಿತಿಯ ನೇತೃತ್ವವನ್ನು ಉತ್ತರ ಪ್ರದೇಶ ಸರ್ಕಾರದ ಆರ್ಥಿಕ ಸಲಹೆಗಾರ ಪ್ರೊಫೆಸರ್ ಕೆ ವಿ ರಾಜು ಅವರು ಸಮಿತಿಯ ನೇತೃತ್ವ ವಹಿಸಬೇಕು. ಜೊತೆಗೆ ರಾಜ್ಯ ತೆರಿಗೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಅವರನ್ನು ಸದಸ್ಯ ಕಾರ್ಯದರ್ಶಿಯಾಗಿ ಹಾಗೂ ಉಳಿದ ತಜ್ಞರನ್ನು ಸದಸ್ಯರನ್ನಾಗಿ ಸೇರಿಸಿಕೊಳ್ಳಬಹುದು ಎಂದು ನ್ಯಾಯಮೂರ್ತಿ ವಿನೋದ್ ದಿವಾಕರ್ ಸೂಚಿಸಿದರು.

ಆನ್‌ಲೈನ್ ಬೆಟ್ಟಿಂಗ್ ಮತ್ತು ಗೇಮಿಂಗ್‌ನಲ್ಲಿನ ಪರಿವರ್ತನಾತ್ಮಕ ಬದಲಾವಣೆಗಾಗಿ ಕಾಯಿದೆ ಜಾರಿಗೆ ತರಬೇಕು ಎಂದು ನ್ಯಾಯಾಲಯ ಹೇಳಿದ್ದು ಪ್ರಕರಣವನ್ನು ಸ್ವಯಂಪ್ರೇರಿತವಾಗಿ ಕೈಗೆತ್ತಿಕೊಂಡಿದೆ.

ತಮ್ಮ ವಿರುದ್ಧದ ಆರೋಪ ಮತ್ತು ವಿಚಾರಣೆ ರದ್ದುಗೊಳಿಸುವಂತೆ ಕೋರಿ ಸಾರ್ವಜನಿಕ ಜೂಜಾಟ ಕಾಯಿದೆಯಡಿಯ ಪ್ರಕರಣವೊಂದರಲ್ಲಿ ಆರೋಪಿಗಳಾಗಿದ್ದ ಇಬ್ಬರು ವ್ಯಕ್ತಿಗಳು  ಸಲ್ಲಿಸಿದ್ದ ಅರ್ಜಿಯ  ವಿಚಾರಣೆ ನಡೆಸಿದ ನ್ಯಾಯಾಲಯ  ಈ ಆದೇಶ ನೀಡಿದೆ.

ಅಸ್ತಿತ್ವದಲ್ಲಿರುವ ಸಾರ್ವಜನಿಕ ಜೂಜಾಟ ಕಾಯಿದೆ- 1867, ವಸಾಹತುಶಾಹಿ ಯುಗದ ಕಾಯಿದೆಯಾಗಿದ್ದು, ಕಾರ್ಡ್ ಆಟಗಳಂತಹ ಸಾಂಪ್ರದಾಯಿಕ ಜೂಜಾಟದ ಬಗ್ಗೆ ಮಾತ್ರ ಅದು ಮಾತನಾಡುತ್ತದೆ ಎಂದು ಕೂಡ ಅದು ಇದೇ ವೇಳೆ ತಿಳಿಸಿದೆ.

"ಸಾರ್ವಜನಿಕ ಜೂಜಾಟ ಕಾಯಿದೆ ಎಂಬುದು ಡಿಜಿಟಲ್ ಪೂರ್ವ ಕಾಲದ ಕಾನೂನಾಗಿದೆ. ಇದು ಡಿಜಿಟಲ್ ವೇದಿಕೆ, ಸರ್ವರ್‌ಗಳು ಅಥವಾ ಗಡಿಯಾಚೆಗಿನ ವಹಿವಾಟುಗಳ ಬಗ್ಗೆ ಮಾತನಾಡುವುದಿಲ್ಲ . ಭೌತಿಕ ಜೂಜಿನ ಮನೆಗಳಿಗೆ ಈ ಕಾನೂನು ಜಾರಿ ಸೀಮಿತವಾಗಿದ್ದು ಮೊಬೈಲ್ ಫೋನ್‌ಗಳು, ಕಂಪ್ಯೂಟರ್‌ಗಳು ಅಥವಾ ಆಫ್‌ಶೋರ್ ಸರ್ವರ್‌ಗಳ ಮೂಲಕನಡೆಯುವ ವರ್ಚುವಲ್ ಜೂಜಿನ ಮೇಲೆ ಯಾವುದೇ ನ್ಯಾಯವ್ಯಾಪ್ತಿ  ಹೊಂದಿಲ್ಲ " ಎಂದು ಅದು ವಿವರಿಸಿದೆ.

ಆನ್‌ಲೈನ್ ಜೂಜಾಟದ ಯುಗದಲ್ಲಿ, ಆನ್‌ಲೈನ್ ಜೂಜಾಟಕ್ಕೆ ಯಾವುದೇ ವ್ಯಾಖ್ಯಾನ ಅಥವಾ ನಿಯಂತ್ರಣ ಇಲ್ಲದ ಕಾರಣ ಅಸ್ತಿತ್ವದಲ್ಲಿರುವ ಕಾನೂನು ತನ್ನ ಪ್ರಭಾವ ಮತ್ತು ಪ್ರಸ್ತುತತೆಯನ್ನು ಕಳೆದುಕೊಂಡಿದೆ ಎಂದು ಅದು ಹೇಳಿದೆ.

ಕಾನೂನು ಪ್ರಸ್ತುತ ನಗಣ್ಯ ದಂಡಗಳಿಗೆ ಮಾತ್ರ ಅವಕಾಶ ನೀಡುತ್ತಿದ್ದು ವಿಸ್ತೃತ ಜೂಜಾಟವನ್ನು ತಡೆಯುವುದಿಲ್ಲ ಎಂದಿದೆ. " ಫ್ಯಾಂಟಸಿ ಕ್ರೀಡೆಗಳು, ಪೋಕರ್ ಮತ್ತು ಇ-ಸ್ಪೋರ್ಟ್‌ಗಳ ಕಾನೂನು ಸ್ಥಿತಿಯ ಬಗ್ಗೆ ಸ್ಪಷ್ಟತೆ ಇಲ್ಲ. ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ರಾಜ್ಯ, ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಗಡಿ ದಾಟಿ ಕಾರ್ಯನಿರ್ವಹಿಸುವುದರಿಂದ ನ್ಯಾಯವ್ಯಾಪ್ತಿಯ ಸಮಸ್ಯೆಗಳೂ ಉದ್ಭವಿಸುತ್ತವೆ " ಎಂದು ನ್ಯಾಯಾಲಯ ತಿಳಿಸಿದೆ.

ಭಾರತದಲ್ಲಿ ಫ್ಯಾಂಟಸಿ ಕ್ರೀಡೆಗಳು ಕಾನೂನಿನ ಮಸುಕು ನೆಲೆಯಲ್ಲಿದ್ದು ಕೌಶಲ್ಯದ ಆಟಗಳು (ಅನುಮತಿಸಿರುವುದು) ಮತ್ತು ಅವಕಾಶದ ಆಟಗಳ (ನಿಷೇಧಿಸಿರುವುದು) ಆಚೀಚೆ ಸುಳಿದಾಡುತ್ತಿರುತ್ತವೆ.
ಅಲಾಹಾಬಾದ್‌ ಹೈಕೋರ್ಟ್

ಡ್ರೀಮ್11, ಎಂಪಿಎಲ್ ಮತ್ತು ಮೈ11ಸರ್ಕಲ್‌ನಂತಹ ಫ್ಯಾಂಟಸಿ ಕ್ರೀಡಾ ವೇದಿಕೆಗಳ ಉದಯವನ್ನು ಉಲ್ಲೇಖಿಸಿದ ನ್ಯಾಯಾಲಯ, ಅವು ಭಾರತೀಯ ಡಿಜಿಟಲ್ ಗೇಮಿಂಗ್ ಸ್ವರೂಪವನ್ನು ಮರುರೂಪಿಸಿವೆ ಎಂದು ಹೇಳಿದೆ. ದೇಶದ  ಹದಿಹರೆಯದವರು ಮತ್ತು ಯುವಜನರಲ್ಲಿ ಗೇಮಿಂಗ್ ಚಟ, ಆತಂಕ, ಖಿನ್ನತೆ ಮತ್ತು ಸಾಮಾಜಿಕ ಪ್ರತ್ಯೇಕತೆಯ ಹೆಚ್ಚಳಕ್ಕೆ ಕಾರಣವಾಗಿವೆ.

ಹೀಗಾಗಿ, ಆನ್‌ಲೈನ್ ಗೇಮಿಂಗ್‌ ಬೀರುವ ಮಾನಸಿಕ, ಸಾಮಾಜಿಕ ಮತ್ತು ರಾಷ್ಟ್ರೀಯ ಭದ್ರತಾ ಪ್ರಭಾವ ತಡೆಯಲು ಆಧುನಿಕ, ತಂತ್ರಜ್ಞಾನ-ಸೂಕ್ಷ್ಮ ಕಾಯಿದೆ ತುರ್ತಾಗಿ ಅಗತ್ಯವಿದೆ ಎಂದು ನ್ಯಾಯಾಲಯ ಹೇಳಿದೆ.

ಈ ಮಧ್ಯೆ ಪ್ರಕರಣದ ಆರೋಪಿಗಳ ಕೃತ್ಯ ಅಸಂಜ್ಞೆಯ ಅಪರಾಧ ಒಳಗೊಂಡಿರುವುದರಿಂದ ಮ್ಯಾಜಿಸ್ಟ್ರೇಟ್ ಆದೇಶವಿಲ್ಲದೆ ಪೊಲೀಸರು ಅದರ ತನಿಖೆ ನಡೆಸಲು ಸಾಧ್ಯವಿಲ್ಲ ಎಂದಿರುವ ನ್ಯಾಯಾಲಯ ಕಾನೂನು ರೂಪುಗೊಂಡ ಬಳಿಕ ಹೊಸದಾಗಿ ತನಿಖೆ ನಡೆಸಲು ಪೊಲೀಸರಿಗೆ ಸ್ವಾತಂತ್ರ್ಯ ಇದೆ ಎಂದಿತು.