Allahabad High Court, Marriage 
ಸುದ್ದಿಗಳು

ಇಸ್ಲಾಂನಿಂದ ಮತಾಂತರವಾಗಿ ಹಿಂದೂ ವಿಧಿಯಂತೆ ವಿವಾಹವಾಗಿದ್ದ ಯುವತಿಗೆ ರಕ್ಷಣೆ ನೀಡಲು ಅಲಾಹಾಬಾದ್ ಹೈಕೋರ್ಟ್ ಆದೇಶ

ಯುವತಿಯ ಕುಟುಂಬದ ಯಾವುದೇ ಸದಸ್ಯ, ಸ್ಥಳೀಯ ಸಮುದಾಯ ಅಥವಾ ಸ್ಥಳೀಯ ಪೊಲೀಸರಿಂದ ಯುವತಿ ಮತ್ತು ಆಕೆಯ ಪತಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳಬೇಕೆಂದು ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ನ್ಯಾಯಾಲಯ ಸೂಚಿಸಿದೆ.

Bar & Bench

ಇಸ್ಲಾಂನಿಂದ ಹಿಂದೂ ಧರ್ಮಕ್ಕೆ ಮತಾಂತರವಾಗಿ ಹಿಂದೂ ವಿಧಿ ಪ್ರಕಾರ ವಿವಾಹವಾಗಿದ್ದ ಯುವತಿಗೆ ರಕ್ಷಣೆ ನೀಡುವಂತೆ ಅಲಾಹಾಬಾದ್‌ ಹೈಕೋರ್ಟ್‌ ಬುಧವಾರ ಪೊಲೀಸರಿಗೆ ಆದೇಶಿಸಿದೆ.

ಮತಾಂತರ ಮತ್ತು ಮದುವೆಗೆ ಆಕ್ಷೇಪಿಸಿದ್ದ ತನ್ನ ತಂದೆಯಿಂದ ಬೆದರಿಕೆ ಇದೆ ಎಂದು 19 ವರ್ಷದ ಯುವತಿ ಮತ್ತು ಅವರ ಪತಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನ್ಯಾಯಾಲಯದಲ್ಲಿ ನಡೆಯಿತು. ಈ ವೇಳೆ ನ್ಯಾಯಮೂರ್ತಿ ಜೆ ಜೆ ಮುನೀರ್ ಅವರು ಯುವತಿಯ ಕುಟುಂಬದ ಯಾವುದೇ ಸದಸ್ಯ, ಸ್ಥಳೀಯ ಸಮುದಾಯ ಅಥವಾ ಸ್ಥಳೀಯ ಪೊಲೀಸರಿಂದ ಯುವತಿ ಮತ್ತು ಆಕೆಯ ಪತಿಗೆ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳಬೇಕೆಂದು ಮೀರತ್‌ನ ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗೆ ಸೂಚಿಸಿದ್ದಾರೆ

ತಂದೆಯ (ಹುಡುಗಿಯ) ಅಣತಿಯಂತೆ ಸ್ಥಳೀಯ ಪೊಲೀಸರು ಅರ್ಜಿದಾರ ಯುವತಿಯ ಶಾಂತಿಯುತ ಜೀವನದಲ್ಲಿ ಹಸ್ತಕ್ಷೇಪ ಮಾಡದಂತೆ ಕ್ರಮ ವಹಿಸಬೇಕು. ಅಲ್ಲದೆ, ಅರ್ಜಿದಾರರಿಗೆ ಯಾವುದೇ ದೈಹಿಕ ಹಾನಿ ಉಂಟಾಗದಂತೆ ನೋಡಿಕೊಳ್ಳುವುದು ಸಹ ಸ್ಥಳೀಯ ಪೊಲೀಸರ ಕರ್ತವ್ಯ ಎಂದು ನ್ಯಾಯಾಲಯ ಹೇಳಿದೆ.

ಯುವತಿಯ ಪರ ವಾದಿಸಿದ ವಕೀಲರು, ”ಹುಟ್ಟಿನಿಂದ ಮುಸ್ಲಿಂ ಧರ್ಮಕ್ಕೆ ಸೇರಿದ್ದ ಯುವತಿ ಹಿಂದೂ ಧರ್ಮದ ಬಗ್ಗೆ ಅಪಾರ ನಂಬಿಕೆ ಇರಿಸಿಕೊಂಡಿದ್ದರು. ಮತ್ತು ಹಿಂದೂ ಧರ್ಮ ಮತ್ತು ಹಿಂದೂ ಹೆಸರನ್ನು ಸ್ವೀಕರಿಸಿದ್ದರು. ಏಪ್ರಿಲ್ 15 ರಂದು, ಮೀರತ್‌ನ ಜಿಲ್ಲಾಧಿಕಾರಿಗಳಿಗೆ ಅರ್ಜಿ ಸಲ್ಲಿಸಿ ಆಕೆಯ ಹೆಸರು ಮತ್ತು ಧರ್ಮ ಬದಲಾವಣೆಗೆ ಸಂಬಂಧಿಸಿದಂತೆ ಪತ್ರಿಕೆಗಳಲ್ಲಿ ಅಗತ್ಯ ಪ್ರಕಟಣೆ ಹೊರಡಿಸಲಾಗಿತ್ತು. ಮೀರತ್‌ನ ಆರ್ಯ ಸಮಾಜದಲ್ಲಿ ಯುವತಿ, ಯುವಕ ಹಿಂದೂ ಧಾರ್ಮಿಕ ವಿಧಿಗಳ ಪ್ರಕಾರ ಏಪ್ರಿಲ್ 16 ರಂದು ವಿವಾಹವಾದರು. ಅದೇ ದಿನ ವಿವಾಹ ನೋಂದಣಿ ಕೂಡ ಮಾಡಿಸಿಕೊಳ್ಳಲು ಅರ್ಜಿ ಸಲ್ಲಿಸಲಾಗಿದ್ದು ಇನ್ನೂ ವಿವಾಹ ನೋಂದಣಿ ಕಾರ್ಯ ಬಾಕಿ ಇದೆ. ಈ ಮಧ್ಯೆ ಮದುವೆಯಿಂದಾಗಿ ತೀವ್ರ ಕೋಪಗೊಂಡ ಯುವತಿಯ ತಂದೆ ದಂಪತಿಗೆ ಗಂಭೀರ ರೀತಿಯಲ್ಲಿ ಜೀವ ಬೆದರಿಕೆಯೊಡ್ಡಿದರು" ಎಂದು ನ್ಯಾಯಾಲಯಕ್ಕೆ ತಿಳಿಸಿದರು.

ಹೀಗಾಗಿ ನ್ಯಾಯಾಲಯ "ಅರ್ಜಿದಾರರ ಮನೆಗೆ ಕುಟುಂಬದ ಸದಸ್ಯರು, ಸ್ನೇಹಿತರು, ಪ್ರತಿನಿಧಿಗಳು ಹಾಗೂ ಬಳಗದವರು ಪ್ರವೇಶಿಸುವಂತಿಲ್ಲ ಅಥವಾ ಯಾವುದೇ ಎಲೆಕ್ಟ್ರಾನಿಕ್‌ ಮಾಧ್ಯಮ ಬಳಸಿ ಸಂಪರ್ಕಿಸಲು ಯತ್ನಿಸುವಂತಿಲ್ಲ. ಇಲ್ಲವೇ ಅರ್ಜಿದಾರರಿಗೆ ದೈಹಿಕವಾಗಿ ತೊಂದರೆ ಅಥವಾ ಹಲ್ಲೆ ಇನ್ನಾವುದೇ ರೀತಿಯಲ್ಲಿ ಧಕ್ಕೆ ತರುವಂತಿಲ್ಲ" ಎಂದು ಹೇಳಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಕೌಂಟರ್‌ ಅಫಿಡವಿಟ್‌ ಸಲ್ಲಿಸುವಂತೆ ಸರ್ಕಾರಿ ಅಧಿಕಾರಿಗಳಿಗೆ ಸೂಚಿಸಿರುವ ಪೀಠ ವಿಚಾರಣೆಯನ್ನು ಜೂನ್‌ 23ಕ್ಕೆ ಮುಂದೂಡಿದೆ.