Allahabad HC with Salman Khurshid and Yogi Adityanath
Allahabad HC with Salman Khurshid and Yogi Adityanath  
ಸುದ್ದಿಗಳು

ಯೋಗಿ ಆದಿತ್ಯನಾಥ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ: ಖುರ್ಷಿದ್ ವಿರುದ್ಧದ ಪ್ರಕರಣ ರದ್ದುಗೊಳಿಸಿದ ಅಲಾಹಾಬಾದ್ ಹೈಕೋರ್ಟ್

Bar & Bench

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ 2019ರ ಲೋಕಸಭಾ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ನೀಡಿದ್ದ ಹೇಳಿಕೆಗೆ ಸಂಬಂಧಿಸಿದಂತೆ ಕಾಂಗ್ರೆಸ್ ನಾಯಕ ಮತ್ತು ಹಿರಿಯ ವಕೀಲ ಸಲ್ಮಾನ್ ಖುರ್ಷಿದ್ ವಿರುದ್ಧ ಹೂಡಲಾಗಿದ್ದ ಕ್ರಿಮಿನಲ್‌ ಮೊಕದ್ದಮೆಗಳನ್ನು ಅಲಾಹಾಬಾದ್‌ ಹೈಕೋರ್ಟ್‌ ರದ್ದುಗೊಳಿಸಿದೆ [ಸಲ್ಮಾನ್‌ ಖುರ್ಷಿದ್‌ ಮತ್ತು ಉತ್ತರ ಪ್ರದೇಶ ಸರ್ಕಾರ ನಡುವಣ ಪ್ರಕರಣ].

ಆದಿತ್ಯನಾಥ್ ಅವರನ್ನು ಉದ್ದೇಶಿಸಿ ಖುರ್ಷಿದ್ ಅವರು ಅಮಿತಾಬ್‌ ಬಚ್ಚನ್‌ ಅಭಿನಯದ ಶಹೆನ್‌ಶಾ ಸಿನಿಮಾದಿಂದ ಪ್ರೇರಿತವಾದ "ರಿಶ್ತೇ ಮೇ ಹಮ್ ಉನ್‌ಕೆ ಬಾಪ್ ಲಗ್ತೇ ಹೈಂ" (ಸಂಬಂಧದಲ್ಲಿ ನಾವು ಅವರಿಗೆ ಅಪ್ಪ ಆಗಬೇಕು) ಎನ್ನುವ ಸಂಭಾಷಣೆ ಹೇಳಿರುವುದಾಗಿ ತಿಳಿದುಬಂದಿತ್ತು. ಇದು ಆಕ್ಷೇಪಕ್ಕೆ ಕಾರಣವಾಗಿತ್ತು.

ಪ್ರಕರಣದ ಸಂಬಂಧ ಖುದ್ದು ಅಫಿಡವಿಟ್‌ ಸಲ್ಲಿಸಿದ್ದ ಖುರ್ಷಿದ್‌ ಅವರು ತಮ್ಮ ಹೇಳಿಕೆಗಾಗಿ ವಿಷಾದ ವ್ಯಕ್ತಪಡಿಸಿದ್ದಾರೆ ಎಂದು ತಿಳಿಸಿ ನ್ಯಾ. ದಿನೇಶ್‌ ಕುಮಾರ್‌ ಸಿಂಗ್‌ ಅವರು ಪ್ರಕರಣ ರದ್ದುಗೊಳಿಸಿದರು.

“ಅರ್ಜಿದಾರರು ತಮ್ಮ ಹೇಳಿಕೆಗಳಿಗೆ ವಿಷಾದ ವ್ಯಕ್ತಪಡಿಸಿದ್ದು ಯೋಗಿ ಆದಿತ್ಯನಾಥ್‌ ಸೇರಿದಂತೆ ಯಾರೊಬ್ಬರ ಭಾವನೆ ನೋಯಿಸುವ ಉದ್ದೇಶ ತಮಗೆ ಇರಲಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಪತ್ರಕರ್ತರು ಕೇಳಿದ ಪ್ರಶ್ನೆಗಳಿಗೆ ಉತ್ತರಿಸುವಾಗ ಅವರು ಲಘುದಾಟಿಯಲ್ಲಿ ಪ್ರತಿಕ್ರಿಯಿಸಿದ್ದರು. ಹಾಗಾಗಿ, ಇದಕ್ಕೆ ಸಂಬಂಧಿಸಿದಂತೆ ಅರ್ಜಿದಾರರ ವಿರುದ್ಧದ ವಿಚಾರಣೆಯನ್ನು ರದ್ದುಪಡಿಸಬೇಕು” ಎಂದು ನ್ಯಾಯಾಲಯ ಹೇಳಿತು.  

ಇತರರ ಭಾವನೆಗಳನ್ನು ನೋಯಿಸುವ ಉದ್ದೇಶವಿಲ್ಲದೆ ವ್ಯಕ್ತಿಯೊಬ್ಬರು ಅವಸರದಲ್ಲಿ ಏನನ್ನಾದರೂ ಹೇಳಿ ಅಂತಹ ಹೇಳಿಕೆಗೆ ವಿಷಾದ ವ್ಯಕ್ತಪಡಿಸಿದ್ದರೆ ನ್ಯಾಯಾಲಯ  ಅಂತಹ ಪ್ರಕರಣವನ್ನು ವಿಶಾಲವಾಗಿ ಪರಿಗಣಿಸಿ ರದ್ದುಗೊಳಿಸಬೇಕು ಎಂದು ನ್ಯಾಯಮೂರ್ತಿ ಹೇಳಿದರು.

“ವಿಷಾದ ಎಂಬುದು ಕಠಿಣವಾದ, ಆದರೆ ಸರಿಯಾದ ಶಿಕ್ಷಕ. ಪಶ್ಚಾತ್ತಾಪವಿಲ್ಲದೆ ಬದುಕುತ್ತಿದ್ದೀರಿ ಎಂದರೆ ನಿಮಗೆ ಕಲಿಯಲು, ತಿದ್ದಿಕೊಳ್ಳಲು ಏನೂ ಉಳಿದಿಲ್ಲ ಎಂದು ಭಾವಿಸಿದ್ದೀರಿ ಎಂದರ್ಥ. ಅಷ್ಟೇ ಅಲ್ಲ, ಬದುಕಿನಲ್ಲಿ ಧೈರ್ಯಶಾಲಿಯಾಗಲು ಬೇಕಾದ ಅವಕಾಶವನ್ನು ಹೊಂದಿಲ್ಲ ಎಂದು ತಿಳಿಯಬೇಕಾಗುತ್ತದೆ” ಎಂಬುದಾಗಿ ನ್ಯಾಯಾಲಯ ಈ ಸಂದರ್ಭದಲ್ಲಿ ನುಡಿಯಿತು.