ಸುದ್ದಿಗಳು

ಸಿದ್ದಿಕ್ ಕಪ್ಪನ್ ಜಾಮೀನು ಅರ್ಜಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

Bar & Bench

ಹಾಥ್‌ರಸ್‌ ಅತ್ಯಾಚಾರ ಪ್ರಕರಣದ ವರದಿಗೆಂದು ತೆರಳಿ ಉತ್ತರಪ್ರದೇಶ ಪೊಲೀಸರಿಂದ ಯುಎಪಿಎ ಕಾಯಿದೆಯಡಿ ಬಂಧಿತರಾಗಿದ್ದ ಕೇರಳ ಮೂಲದ ಪತ್ರಕರ್ತ ಸಿದ್ದಿಕ್‌ ಕಪ್ಪನ್‌ ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಅಲಾಹಾಬಾದ್ ಹೈಕೋರ್ಟ್ ತಿರಸ್ಕರಿಸಿದೆ.

ತನಗೆ ಜಾಮೀನು ನಿರಾಕರಿಸಿದ್ದ ಮಥುರಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಸಿದ್ದಿಕ್ ಕಪ್ಪನ್‌ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಕ್ರಿಶನ್ ಪಹಲ್ ಅವರಿದ್ದ ಏಕಸದಸ್ಯ ಪೀಠ ತಿರಸ್ಕರಿಸಿತು. ಮೆರಿಟ್‌ ಆಧಾರದಲ್ಲಿ ಅರ್ಜಿ ವಜಾಗೊಳಿಸಿರುವುದಾಗಿ ಹೈಕೋರ್ಟ್‌ ಜಾಲತಾಣದಲ್ಲಿರುವ ಪ್ರಕರಣದ ಸ್ಥಿತಿಗತಿ ವಿವರ ತಿಳಿಸುತ್ತಿದೆ. ಆದೇಶದ ವಿವರವಾದ ಪ್ರತಿಯನ್ನು ನಿರೀಕ್ಷಿಸಲಾಗುತ್ತಿದೆ.

19 ವರ್ಷದ ದಲಿತ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿ ಕೊಲೆ ಮಾಡಲಾಗಿದ್ದ ಪ್ರಕರಣದ ವರದಿಗೆಂದು ಉತ್ತರ ಪ್ರದೇಶದ ಹಾಥ್‌ರಸ್‌ಗೆ ತೆರಳುತ್ತಿದ್ದಾಗ ಮಲಯಾಳಂ ಸುದ್ದಿ ಪೋರ್ಟಲ್‌ ಒಂದರ ವರದಿಗಾರ ಹಾಗೂ ಕೇರಳದ ಕಾರ್ಯನಿರತ ಪತ್ರಕರ್ತರ ಒಕ್ಕೂಟದ (ಕೆಯುಡಬ್ಲ್ಯೂಜೆ) ದೆಹಲಿ ಘಟಕದ ಕಾರ್ಯದರ್ಶಿ ಕಪ್ಪನ್ ಸೇರಿ ಮೂವರನ್ನು ಬಂಧಿಸಲಾಗಿತ್ತು.

ಕಪ್ಪನ್ ಹಾಗೂ ಇತರ ಆರೋಪಿಗಳು ಉತ್ತರ ಪ್ರದೇಶದ ಹಾ‌ಥ್‌ರಸ್‌ ಸಾಮೂಹಿಕ ಅತ್ಯಾಚಾರದ ಘಟನೆ ವರದಿ ಮಾಡಲು ಹೊರಟಾಗ ಕಾನೂನು ಮತ್ತಿತರ ಪರಿಸ್ಥಿತಿಯನ್ನು ಭಂಗಗೊಳಿಸಲು ಯತ್ನಿಸಿದ್ದರು ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ ಎಂಬುದಾಗಿ ತಿಳಿಸಿದ್ದ ಮಥುರಾ ನ್ಯಾಯಾಲಯ, ಜುಲೈ 2021ರಲ್ಲಿ ಕಪ್ಪನ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು.