ಜ್ಞಾನವಾಪಿ ಮಸೀದಿ ಮತ್ತು ಅಲಾಹಾಬಾದ್ ಹೈಕೋರ್ಟ್ 
ಸುದ್ದಿಗಳು

ಜ್ಞಾನವಾಪಿ ಮಸೀದಿಯಲ್ಲಿ ಹಿಂದೂಗಳ ಪೂಜೆಗೆ ಅವಕಾಶ ಪ್ರಶ್ನಿಸಿದ್ದ ಅರ್ಜಿ ತಿರಸ್ಕರಿಸಿದ ಅಲಾಹಾಬಾದ್‌ ಹೈಕೋರ್ಟ್‌

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ನೀಡಿದ್ದ ಆದೇಶ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು.

Bar & Bench

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ ಹಿಂದೂ ಪಕ್ಷಕಾರರು ಪ್ರಾರ್ಥನೆ ಮತ್ತು ಪೂಜೆ ಸಲ್ಲಿಸಲು ಅವಕಾಶ ನೀಡಿದ ವಾರಾಣಸಿ ಜಿಲ್ಲಾ ನ್ಯಾಯಾಲಯದ ಆದೇಶ ಪ್ರಶ್ನಿಸಿ ಮುಸ್ಲಿಂ ಪಕ್ಷಕಾರರು ಸಲ್ಲಿಸಿದ್ದ ಮನವಿಯನ್ನು ಅಲಾಹಾಬಾದ್ ಹೈಕೋರ್ಟ್ ಸೋಮವಾರ ತಿರಸ್ಕರಿಸಿದೆ.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್ ಈ ತೀರ್ಪು ನೀಡಿದ್ದು ಫೆ.15ರಂದು ತೀರ್ಪು ಕಾಯ್ದಿರಿಸಿದ್ದರು.

ನ್ಯಾಯಮೂರ್ತಿ ರೋಹಿತ್ ರಂಜನ್ ಅಗರ್ವಾಲ್

ಜ್ಞಾನವಾಪಿ ಮಸೀದಿಯ ದಕ್ಷಿಣ ನೆಲಮಾಳಿಗೆಯಲ್ಲಿ (ತೆಹ್‌ಖಾನಾ) ಹಿಂದೂಗಳಿಗೆ ಪ್ರಾರ್ಥನೆ ಸಲ್ಲಿಸಲು ಅನುಮತಿಸಿ ವಾರಾಣಸಿ ಜಿಲ್ಲಾ ನ್ಯಾಯಾಲಯ ಜನವರಿ 31ರಂದು ನೀಡಿದ್ದ ಆದೇಶ ಪ್ರಶ್ನಿಸಿ ಅಂಜುಮನ್ ಇಂತೆಜಾಮಿಯಾ ಮಸೀದಿ ಸಮಿತಿ ಅರ್ಜಿ ಸಲ್ಲಿಸಿತ್ತು.

ಜ್ಞಾನವಾಪಿ ಮಸೀದಿ ಇರುವ ಭೂಮಿಯ ಧಾರ್ಮಿಕ ಸ್ವರೂಪ ಕುರಿತಂತೆ ನ್ಯಾಯಾಲಯದಲ್ಲಿ ಬಿರುಸಿನ ವಿಚಾರಣೆ ನಡೆಯುತ್ತಿರುವ ಮಧ್ಯೆಯೇ ಜಿಲ್ಲಾ ನ್ಯಾಯಾಲಯ  ಈ ಆದೇಶ ಹೊರಡಿಸಿತ್ತು.

ಸೋಮನಾಥ್ ವ್ಯಾಸ್ ಮತ್ತು ಅವರ ಕುಟುಂಬವು ಮಸೀದಿಯ ನೆಲಮಾಳಿಗೆಯಲ್ಲಿ ಪ್ರಾರ್ಥನೆ ಸಲ್ಲಿಸುತ್ತಿತ್ತು. ಮುಲಾಯಂ ಸಿಂಗ್ ಯಾದವ್ ನೇತೃತ್ವದ ಸರ್ಕಾರ 1993ರಲ್ಲಿ ಈ ಪೂಜೆಗೆ ಅಂತ್ಯ ಹಾಡಿತು ಎಂದು ಹಿಂದೂ ಪಕ್ಷಕಾರರು ಆರೋಪಿಸಿದ್ದರು.

ಈ ವಾದ ವಿರೋಧಿಸಿದ್ದ ಮುಸ್ಲಿಂ ದಾವೆದಾರರು ತಾವು ಮೊದಲಿನಿಂದಲೂ ಮಸೀದಿಯ ಕಟ್ಟಡದ ಮೇಲೆ ಹಿಡಿತ ಹೊಂದಿದ್ದಾಗಿ ಸಮರ್ಥಿಸಿಕೊಂಡಿದ್ದರು.

17 ನೇ ಶತಮಾನದಲ್ಲಿ ಮೊಘಲ್ ಚಕ್ರವರ್ತಿ ಔರಂಗಜೇಬನ ಆಳ್ವಿಕೆಯಲ್ಲಿ ಈ ಭೂಮಿಯಲ್ಲಿರುವ ಪ್ರಾಚೀನ ದೇವಾಲಯದ ಒಂದು ಭಾಗ ನಾಶವಾಯಿತು. ಹೀಗಾಗಿ ತಮಗೆ ಸಂಕೀರ್ಣದೊಳಗೆ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಬೇಕು ಎಂದು ಜ್ಞಾನವಾಪಿ ಕಾಂಪೌಂಡ್ ಕುರಿತ ಮುಖ್ಯ ಅರ್ಜಿಯಲ್ಲಿ ಹಿಂದೂ ಪಕ್ಷಕಾರರು ಮನವಿ ಮಾಡಿದ್ದರು.

ಆದರೆ, ಮಸೀದಿ ಔರಂಗಜೇಬನ ಆಳ್ವಿಕೆಗಿಂತ ಮುಂಚಿನದು ಮತ್ತು ಕಾಲಾನಂತರದಲ್ಲಿ ಅದು ವಿವಿಧ ಬದಲಾವಣೆಗಳಿಗೆ ಒಳಪಟ್ಟಿತ್ತು ಎಂದು ಮುಸ್ಲಿಂ ದಾವೆದಾರರು ವಾದಿಸಿದ್ದರು.