Arvind Kejriwal 
ಸುದ್ದಿಗಳು

ಪ್ರಚೋದನಕಾರಿ ಭಾಷಣ: ಕೇಜ್ರಿವಾಲ್ ಮನವಿ ತಿರಸ್ಕರಿಸಿದ ಅಲಾಹಾಬಾದ್ ಹೈಕೋರ್ಟ್

ಕೇಜ್ರಿವಾಲ್ ಅವರು 2014ರ ಲೋಕಸಭಾ ಚುನಾವಣೆ ವೇಳೆ ಮಾದರಿ ನೀತಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿ ಅವರ ವಿರುದ್ಧ ಜನಪ್ರತಿನಿಧಿ ಕಾಯಿದೆಯ ಸೆಕ್ಷನ್ 125 ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿತ್ತು.

Bar & Bench

ಲೋಕಸಭಾ ಚುನಾವಣೆ (2014 ) ಸಮಯದಲ್ಲಿ ಮಾಡಿದ್ದರೆನ್ನಲಾದ ಪ್ರಚೋದನಕಾರಿ ಭಾಷಣ ಪ್ರಕರಣದಿಂದ ತಮ್ಮನ್ನು ಮುಕ್ತಗೊಳಿಸುವಂತೆ ಕೋರಿ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಅವರು ಸಲ್ಲಿಸಿದ್ದ ಮರುಪರಿಶೀಲನಾ ಅರ್ಜಿಯನ್ನು ಅಲಾಹಾಬಾದ್‌ ಹೈಕೋರ್ಟ್‌ ಸೋಮವಾರ ತಿರಸ್ಕರಿಸಿದೆ [ಅರವಿಂದ್‌ ಕೇಜ್ರಿವಾಲ್‌ ಮತ್ತು ಉತ್ತರಪ್ರದೇಶ ಸರ್ಕಾರ ನಡುವಣ ಪ್ರಕರಣ].

'ಖುದಾ' ಎನ್ನುವ ಪದ ನಿರ್ಧಿಷ್ಟ ಧರ್ಮಕ್ಕೆ ಸೇರಿದ ಕೆಲ ಮತದಾರರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರೂ ಕೇಜ್ರಿವಾಲ್‌ ಅವರು ಮತದಾರರನ್ನು ಖುದಾ ಹೆಸರಿನಲ್ಲಿ ಬೆದರಿಸಿದ್ದರು ಎಂದು ನ್ಯಾ. ರಾಜೇಶ್‌ ಸಿಂಗ್‌ ಚೌಹಾಣ್‌ ಅಭಿಪ್ರಾಯಪಟ್ಟಿದ್ದಾರೆ.

ಅರ್ಜಿದಾರರು ನೀಡಿದ ಹೇಳಿಕೆ ಒಂದು ಗುಂಪಿನ ಮತದಾರರಿಗೆ ಅಷ್ಟು ಸರಳವಾಗಿ ಸ್ವೀಕಾರವಾಗುವಂಥದ್ದಲ್ಲ. ಅವರು ಒಂದು ವರ್ಗದ ಮತದಾರರನ್ನು ಉದ್ದೇಶಿಸಿ 'ದೇಶಕ್ಕೆ ದ್ರೋಹ ಎಸಗಿದಂತೆ' (ದೇಶ್‌ ಕೆ ಸಾಥ್‌ ಗದ್ದಾರಿ) ಎಂದು ಹೇಳಿದರೆ ಮತ್ತಿನ್ನೊಂದು ವರ್ಗದ ಮತದಾರರನ್ನು ಕುರಿತು ಖುದಾ (ದೇವರು) ನಿಮ್ಮನ್ನು ಕ್ಷಮಿಸುವುದಿಲ್ಲ ಎಂದಿದ್ದರು. ಖುದಾ ಎನ್ನುವ ಪದ ನಿರ್ದಿಷ್ಟ ಧರ್ಮಕ್ಕೆ ಸೇರಿದ ಕೆಲ ಮತದಾರರ ಮೇಲೆ ತೀವ್ರ ಪರಿಣಾಮ ಬೀರುತ್ತದೆ ಎಂದು ತಿಳಿದಿದ್ದರೂ ಕೇಜ್ರಿವಾಲ್‌ ಅವರು ಖುದಾ ಹೆಸರಿನಲ್ಲಿ ಮತದಾರರಿಗೆ ಬೆದರಿಕೆ ಹಾಕಿದ್ದರು. ಇದರಿಂದ ಮತದಾರರು ತೀವ್ರವಾಗಿ ಪ್ರಭಾವಿತರಾಗಬಹುದು ಎಂದು ನ್ಯಾಯಾಲಯ ತಿಳಿಸಿದೆ.

ಪ್ರಚೋದನಕಾರಿ ಹೇಳಿಕೆ ನೀಡುವ ಮೂಲಕ ಮಾದರಿ ಸಂಹಿತೆ ಉಲ್ಲಂಘಿಸಿದ್ದಾರೆ ಎಂದು  ಫ್ಲೈಯಿಂಗ್ ಸ್ಕ್ವಾಡ್ ಮ್ಯಾಜಿಸ್ಟ್ರೇಟ್ ಅವರು ಕೇಜ್ರಿವಾಲ್ ಅವರ ವಿರುದ್ಧ ಪ್ರಜಾಪ್ರತಿನಿಧಿ ಕಾಯ್ದೆಯ ಸೆಕ್ಷನ್ 125 (ಚುನಾವಣೆಗೆ ಸಂಬಂಧಿಸಿದಂತೆ ವರ್ಗಗಳ ನಡುವೆ ದ್ವೇಷ  ಪ್ರಚೋದನೆ) ಅಡಿಯಲ್ಲಿ ಎಫ್‌ಐಆರ್ ದಾಖಲಿಸಿದ್ದರು.

ಕಾಂಗ್ರೆಸ್‌ ಪರ ಮತ ಚಲಾಯಿಸಿದರೆ ದೇಶಕ್ಕೆ ನಂಬಿಕೆ ದ್ರೋಹ ಎಸಗಿದಂತಾಗುತ್ತದೆ. ಬಿಜೆಪಿಗೆ ಮತ ಚಲಾಯಿಸಿದರೆ ಖುದಾ ಕ್ಷಮಿಸುವುದಿಲ್ಲ ಎಂಬುದಾಗಿ ಕೇಜ್ರಿವಾಲ್‌ ಭಾಷಣ ಮಾಡಿದ್ದರು ಎಂದು ತಿಳಿದುಬಂದಿದೆ.