Allahabad High Court 
ಸುದ್ದಿಗಳು

ಅಲ್‌ ಜಝೀರಾದ ಸಾಕ್ಷ್ಯಚಿತ್ರ ಪ್ರಸಾರ ನಿರ್ಬಂಧಿಸಿದ ಅಲಾಹಾಬಾದ್‌ ಹೈಕೋರ್ಟ್‌

ಭಾರತದಲ್ಲಿನ ಜನರ ಶಾಂತಿಗೆ ಧಕ್ಕೆ ತರುವ ಸಾಧ್ಯತೆ ಎಂದು ಆಕ್ಷೇಪಿಸಿ ಸಲ್ಲಿಸಿರುವ ಅರ್ಜಿ ಇತ್ಯರ್ಥವಾಗುವವರೆಗೆ ಸಿನಿಮಾಕ್ಕೆ ತಾತ್ಕಾಲಿಕ ನಿರ್ಬಂಧಿ ವಿಧಿಸಲಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ಹೇಳಿದೆ.

Bar & Bench

ಕತಾರ್‌ನ ದೋಹಾದಲ್ಲಿ ಕೇಂದ್ರ ಕಚೇರಿ ಹೊಂದಿರುವ ಅಂತಾರಾಷ್ಟ್ರೀಯ ಸುದ್ದಿ ವಾಹಿನಿಯಾದ ಅಲ್‌ ಜಝೀರಾ ನಿರ್ಮಿಸಿರುವ ಸಾಕ್ಷ್ಯಚಿತ್ರ 'ಇಂಡಿಯಾ... ಹೂ ಲಿಟ್‌ ದ ಫ್ಯೂಸ್' (ಭಾರತ… ಬೆಂಕಿ ಹಚ್ಚಿದ್ದು ಯಾರು?) ಪ್ರಸಾರ, ಬಿಡುಗಡೆಗೆ ತಾತ್ಕಾಲಿಕ ನಿರ್ಬಂಧ ವಿಧಿಸಿ ಅಲಾಹಾಬಾದ್‌ ಹೈಕೋರ್ಟ್‌ ಈಚೆಗೆ ಆದೇಶಿಸಿದೆ [ಸುಧೀರ್‌ ಕುಮಾರ್‌ ಮತ್ತು ಭಾರತ ಸರ್ಕಾರ ಮತ್ತು ಇತರರು].

ಚಿತ್ರ ಪ್ರಸಾರ ಪ್ರಶ್ನಿಸಿ ಸುಧೀರ್‌ ಕುಮಾರ್‌ ಅವರು ಸಲ್ಲಿಸಿರುವ ಅರ್ಜಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಅಶ್ವನಿ ಕುಮಾರ್‌ ಮಿಶ್ರಾ ಮತ್ತು ಅಷುತೋಷ್‌ ಶ್ರೀವಾಸ್ತವ ಅವರ ನೇತೃತ್ವದ ವಿಭಾಗೀಯ ಪೀಠವು ವಿಚಾರಣೆ ನಡೆಸಿತು. ಅರ್ಜಿದಾರರು ಎತ್ತಿರುವ ವಿಚಾರಗಳನ್ನು ಆಧಾರರಹಿತ ಮತ್ತು ದುರುದ್ದೇಶಪೂರಿತ ಎನ್ನಲಾಗದು ಎಂದು ನ್ಯಾಯಾಲಯವು ಹೇಳಿದೆ.

ಸಿನಿಮಾ ಬಿಡುಗಡೆಯಾದರೆ ಭಾರತದ ಜನರ ನಡುವೆ ಶಾಂತಿ ಕದಡುವ ಮತ್ತು ದೇಶದಲ್ಲಿ ಭ್ರಾತೃತ್ವಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ ಎಂದು ಅರ್ಜಿಯಲ್ಲಿ ಆಕ್ಷೇಪಿಸಲಾಗಿದೆ.

ಅರ್ಜಿದಾರರು ಎತ್ತಿರುವ ವಿಚಾರಗಳಿಗೆ ಸಂಬಂಧಿಸಿದಂತೆ ಪರಿಶೀಲನೆ ನಡೆಸಿದ ಬಳಿಕ ಚಿತ್ರ ಪ್ರಸಾರಕ್ಕೆ ಅನುಮತಿಸುವುದರಿಂದ ಅಲ್‌ ಜಜೀರಾಗೆ ಯಾವುದೇ ರೀತಿಯಲ್ಲಿಯೂ ಸರಿಪಡಿಸಲಾಗದಂತಹ ಸಮಸ್ಯೆ ಉಂಟಾಗುವುದಿಲ್ಲ ಎಂದು ನ್ಯಾಯಾಲಯವು ಆದೇಶದಲ್ಲಿ ಹೇಳಿದೆ.

ಕಾನೂನು ಪ್ರಾಧಿಕಾರಗಳು ಚಿತ್ರದ ವಿಚಾರಗಳನ್ನು ಪರಿಶೀಲಿಸುವವರೆಗೆ ಅದರ ಬಿಡುಗಡೆ ಅವಕಾಶ ಮಾಡಿಕೊಡದಿರುವ ವಿಚಾರದಲ್ಲಿ ಕ್ರಮಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ನ್ಯಾಯಾಲಯ ನಿರ್ದೇಶಿಸಿದೆ. ಸಂಬಂಧಿತ ಪ್ರಾಧಿಕಾರದಿಂದ ಅಲ್‌ ಜಝೀರಾ ಅಗತ್ಯ ಸರ್ಟಿಫಿಕೇಟ್‌ ಮತ್ತು ಅನುಮತಿ ಪಡೆಯಬೇಕು ಎಂದೂ ಹೇಳಲಾಗಿದೆ.

ಸಾಮಾಜಿಕ ಶಾಂತಿ, ದೇಶದ ಭದ್ರತೆ ಮತ್ತು ಹಿತಾಸಕ್ತಿ ಕಾಯುವ ನಿಟ್ಟಿನಲ್ಲಿ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಪ್ರಾಧಿಕಾರಗಳು ನ್ಯಾಯಾಲಯದ ನಿರ್ದೇಶನದಂತೆ ಕ್ರಮಕೈಗೊಳ್ಳಲು ಆದೇಶಿಸಲಾಗಿದೆ ಎಂದು ಹೈಕೋರ್ಟ್‌ ಆದೇಶದಲ್ಲಿ ಹೇಳಿದೆ.

ಪ್ರಪಂಚದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾದ ಭಾರತದಲ್ಲಿ ಸಾಮಾಜಿಕ ಮತ್ತು ಕೋಮು ಶಾಂತಿ ಕದಡುವ ಉದ್ದೇಶದಿಂದ ಆಕ್ಷೇಪಾರ್ಹವಾದ ಚಿತ್ರವು ದೋಷಪೂರಿತ ಅಂಶಗಳನ್ನು ಒಳಗೊಂಡಿದೆ ಎಂದು ಅರ್ಜಿದಾರರು ಗಂಭೀರ ಆರೋಪ ಮಾಡಿದ್ದಾರೆ ಎಂಬುದನ್ನು ಪೀಠವು ಪ್ರಸ್ತಾಪಿಸಿದೆ.