Judge, Allahabad High Court  
ಸುದ್ದಿಗಳು

ತಮ್ಮ ಕುರ್ಚಿ, ಘನತೆ ಹರಾಜಿಗಿಟ್ಟಿದ್ದಾರೆ: ಖೊಟ್ಟಿ ಪ್ರಕರಣ ಹೂಡಿದ ನ್ಯಾಯಾಧೀಶರ ವಿರುದ್ಧ ಅಲಾಹಾಬಾದ್ ಹೈಕೋರ್ಟ್ ಕಿಡಿ

Bar & Bench

ಉತ್ತರ ಪ್ರದೇಶ ವಿದ್ಯುತ್ ಇಲಾಖೆಯ ಅಧಿಕಾರಿಗಳ ವಿರುದ್ಧ ಸುಳ್ಳು ಕ್ರಿಮಿನಲ್ ಮೊಕದ್ದಮೆಯನ್ನು ದಾಖಲಿಸಲು ತನ್ನ ಸ್ಥಾನ ದುರುಪಯೋಗಪಡಿಸಿಕೊಂಡ ಉತ್ತರ ಪ್ರದೇಶದ ಬಂಡಾದಲ್ಲಿರುವ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ಅವರನ್ನು ಅಲಾಹಾಬಾದ್ ಹೈಕೋರ್ಟ್ ಇತ್ತೀಚೆಗೆ ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ [ಮನೋಜ್‌ ಕುಮಾರ್‌ ಗುಪ್ತಾ ಇನ್ನಿತರರು ಹಾಗೂ ಉತ್ತರ ಪ್ರದೇಶ ಸರ್ಕಾರ ಮತ್ತಿತರರ ನಡುವಣ ಪ್ರಕರಣ]

ಸರ್ಕಾರಿ ಅಧಿಕಾರಿಗಳ ವಿರುದ್ಧ ವಂಚನೆ, ಮೋಸ, ಸಾಕ್ಷ್ಯ ತಿರುಚುವಿಕೆ ಹಾಗೂ ಸುಲಿಗೆ ಕುರಿತಂತೆ ಕ್ಷುದ್ರ ಮತ್ತು ವ್ಯವಸ್ಥಿತ ಆರೋಪ ಮಾಡಿ ಸಿಜೆಎಂ ಭಗವಾನ್ ದಾಸ್ ಗುಪ್ತಾ ಅವರು ಹೂಡಿರುವ ಕ್ರಿಮಿನಲ್‌ ಮೊಕದ್ದಮೆ ಸಂಪೂರ್ಣ ಸುಳ್ಳು ಎಂದು ನ್ಯಾಯಮೂರ್ತಿಗಳಾದ ರಾಹುಲ್ ಚತುರ್ವೇದಿ ಮತ್ತು ಅಜರ್ ಹುಸೇನ್ ಇದ್ರಿಸಿ ಅವರಿದ್ದ ಪೀಠ ತಿಳಿಸಿದೆ.

ಸಿಜೆಎಂ ತಮ್ಮ ಅಧಿಕಾರ ಮತ್ತು ಸ್ಥಾನ ಏನೆಂಬುದನ್ನು ಅರ್ಥಮಾಡಿಸಲು ಹಾಗೂ ಸರ್ಕಾರಿ ನೌಕರರಿಗೆ ಕಹಿ ಪಾಠ ಕಲಿಸಲೆಂದಷ್ಟೇ ಪ್ರಕರಣ ದಾಖಲಿಸಿದ್ದಾರೆ ಎಂದು ನ್ಯಾಯಾಲಯ ಹೇಳಿದೆ.

ತಮ್ಮ ತಾಳಕ್ಕೆ ತಕ್ಕಂತೆ ಕುಣಿಯದ ಸರ್ಕಾರಿ ಅಧಿಕಾರಿಗಳ ವಿರುದ್ಧ ನ್ಯಾಯಾಧೀಶರು ಕ್ಷುದ್ರ ಆರೋಪಗಳನ್ನು ಮಾಡಿದ್ದಾರೆ. ಹಾಗೆ ಮಾಡುತ್ತಾ ತಮ್ಮ ಘನತೆ- ಗೌರವವನ್ನು ಅವರು ಮಾರಾಟ ಮಾಡಿರುವಂತಿದೆ ಎಂದು ಅಧಿಕಾರಿಗಳ ವಿರುದ್ಧದ ಪ್ರಕರಣ ರದ್ದುಗೊಳಿಸುವಾಗ ನ್ಯಾಯಾಲಯ ತಿಳಿಸಿದೆ.

ನ್ಯಾಯಾಧೀಶರಿಂದ ಉತ್ತಮ ನಡೆಯನ್ನು ನಿರೀಕ್ಷಿಸಲಾಗುತ್ತದೆ. ಆದರೆ ಸಿಜೆಎಂ ಗುಪ್ತಾ ಅವರ ನಡೆ ಉತ್ತಮ ಗುಣಮಟ್ಟಕ್ಕಿಂತ ಕೆಳಗಿದ್ದು ನ್ಯಾಯಾಧೀಶರ ಹುದ್ದೆಗೆ ತಕ್ಕುದಾಗಿಲ್ಲ‌ ಎಂದು ಪೀಠ ಖಂಡಿಸಿದೆ.

ಅರ್ಜಿದಾರರು ಮಂಡಿಯೂರಿ ತನ್ನ ತಾಳಕ್ಕೆ ತಕ್ಕಂತೆ ಕುಣಿಯುವಂತೆ ಮಾಡುವುದಕ್ಕಾಗಿ ನ್ಯಾಯಾಂಗ ಅಧಿಕಾರಿ, ತಮ್ಮ ಅಧಿಕೃತ ಕರ್ತವ್ಯಗಳನ್ನು ನಿರ್ವಹಿಸುವ ಸರ್ಕಾರಿ ನೌಕರರಾದ ಅರ್ಜಿದಾರರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಿದ್ದಾರೆ ಎಂದು ಅದು ಹೇಳಿದೆ.

ನ್ಯಾಯಾಂಗ ಅಧಿಕಾರಿಗಳು ವೈಯಕ್ತಿಕ ನೆಲೆಯಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲು ಬಯಸಿದರೆ ಅಂತಹ ಸಂದರ್ಭಗಳಲ್ಲಿ ಅಧಿಕಾರ ದುರುಪಯೋಗವಾಗದಂತೆ ನೋಡಿಕೊಳ್ಳಲು ಇದೇ ವೇಳೆ ನ್ಯಾಯಾಲಯ ಸಂಬಂಧಪಟ್ಟವರಿಗೆ ಕೆಲ ನಿರ್ದೇಶನಗಳನ್ನು ನೀಡಿತು.

ಕೊಲೆ, ಆತ್ಮಹತ್ಯೆ, ಅತ್ಯಾಚಾರ ವರದಕ್ಷಿಣೆ ಸಾವು, ಡಕಾಯಿತಿ ಅಥವಾ ಇತರ ಲೈಂಗಿಕ ಅಪರಾಧಗಳಂತಹ ಗಂಭೀರ ಸ್ವರೂಪದ ಪ್ರಕರಣಗಳನ್ನು ಹೊರತುಪಡಿಸಿ ಯಾವುದೇ ಎಫ್‌ಐಆರ್‌ ದಾಖಲಿಸುವ ಮುನ್ನ ಕೆಳ ನ್ಯಾಯಾಲಯಗಳ ನ್ಯಾಯಾಧೀಶರು ಜಿಲ್ಲಾ ನ್ಯಾಯಾಧೀಶರ ಅನುಮತಿ ಪಡೆಯಬೇಕು ಎಂದು ಅದು ಸೂಚಿಸಿತು. 

ಹಿನ್ನೆಲೆ

ತಾವು ಖರೀದಿಸಿದ್ದ ಮನೆಗೆ ಸಂಬಂಧಿಸಿದಂತೆ ಹಿಂದಿನ ವಿದ್ಯುತ್ ಖಾತೆಯನ್ನು ತಮ್ಮ ಹೆಸರಿಗೆ ಪರಿವರ್ತಿಸುವಂತೆ ವಿದ್ಯುತ್ ಇಲಾಖೆಗೆ ಸಿಜೆಎಂ ಗುಪ್ತಾ ಮನವಿ ಮಾಡಿದ್ದರು. ಆದರೆ ₹1,66,916ದಷ್ಟು ಮೊತ್ತದ  ಹಳೆಯ ಬಿಲ್‌ ಪಾವತಿಯಾಗಿಲ್ಲ ಎಂಬ ಉತ್ತರ ಅಧಿಕಾರಿಗಳಿಂದ ದೊರೆಯಿತು. ಇದರಿಂದ ಆಘಾತಕ್ಕೀಡಾದ ಸಿಜೆಎಂ ಗುಪ್ತಾ ಐಪಿಸಿ ಸೆಕ್ಷನ್‌ 420, 464, 467, 468, 504, 506 ರ ಅಡಿಯಲ್ಲಿ ಈ ಹಿಂದಿನ ಮನೆ ಮಾಲೀಕ, ಅವರ ಪತ್ನಿ ಹಾಗೂ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದರು.

ನ್ಯಾ. ಗುಪ್ತಾ ಹಾಗೂ ಹಿಂದಿನ ಮಾಲೀಕರ ನಡುವಿನ ವಿವಾದಕ್ಕೂ ತಮಗೂ ಸಂಬಂಧವಿಲ್ಲ. ಹೊಸ ವಿದ್ಯುತ್‌ ಸಂಪರ್ಕ ಪಡೆಯಲು ಬಾಕಿ ಮೊತ್ತ ಪಾವತಿಸಬೇಕು ಎಂದು ಅಧಿಕಾರಿಗಳು ತಿಳಿಸಿದರು.

ಲಖನೌನ ವಿಚಾರಣಾ ನ್ಯಾಯಾಲಯ ಮಹತ್ವದ ಲೋಪ ಕಂಡುಬಾರದ ಹಿನ್ನೆಲೆಯಲ್ಲಿ ಅಧಿಕಾರಿಗಳ ವಿರುದ್ಧದ ಪ್ರಕರಣವನ್ನು ಕೈಬಿಟ್ಟಿತು. ಇದನ್ನು ಪ್ರಶ್ನಿಸಿ ನ್ಯಾ. ಗುಪ್ತಾ ವಿದ್ಯುತ್ ಓಂಬುಡ್ಸ್‌ಮನ್‌ ಮೊರೆ ಹೋದರಾದರೂ ಅವರಿಗೆ ಪರಿಹಾರ ದೊರೆಯಲಿಲ್ಲ. ನಂತರ ಅವರು 2023ರಲ್ಲಿ ವೈಯಕ್ತಿಕ ನೆಲೆಯಲ್ಲಿ ಎಫ್‌ಐಆರ್‌ ದಾಖಲಿಸಿದರು. ಇದನ್ನು ಪ್ರಶ್ನಿಸಿ ಸರ್ಕಾರಿ ಅಧಿಕಾರಿಗಳು ಹೈಕೋರ್ಟ್‌ ಮೊರೆ ಹೋಗಿದ್ದರು.