Allahabad High Court 
ಸುದ್ದಿಗಳು

ಪೊಲೀಸರಿಂದ ವಕೀಲರೊಬ್ಬರ ಮೇಲೆ ಹಲ್ಲೆ: ಸ್ವಯಂಪ್ರೇರಿತ ವಿಚಾರಣೆಗೆ ಮುಂದಾದ ಅಲಾಹಾಬಾದ್‌ ಹೈಕೋರ್ಟ್‌

ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಮತ್ತು ನ್ಯಾಯಮೂರ್ತಿ ಸುಮಿತ್ರಾ ದಯಾಳ್‌ ಸಿಂಗ್‌ ಅವರ ನೇತೃತ್ವದ ಪೀಠದ ಮುಂದೆ ಪ್ರಕರಣವು ಮಂಗಳವಾರ ವಿಚಾರಣೆಗೆ ನಿಗದಿಯಾಗಿದೆ.

Bar & Bench

ಉತ್ತರ ಪ್ರದೇಶದ ಎಟಾನಲ್ಲಿ ಈಚೆಗೆ ವಕೀಲರೊಬ್ಬರ ಮೇಲೆ ಪೊಲೀಸರು ನಡೆಸಿರುವ ಹಲ್ಲೆಗೆ ಸಂಬಂಧಿಸಿದಂತೆ ಅಲಾಹಾಬಾದ್‌ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ಪ್ರಕರಣದ ವಿಚಾರಣೆಗೆ ಮುಂದಾಗಿದೆ.

ಈ ಸಂಬಂಧ ದಾಖಲಾಗಿರುವ ಮೊಕದ್ದಮೆಯು ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಮತ್ತು ನ್ಯಾಯಮೂರ್ತಿ ಸುಮಿತ್ರಾ ದಯಾಳ್‌ ಸಿಂಗ್‌ ಅವರ ನೇತೃತ್ವದ ಪೀಠದ ಮುಂದೆ ಇಂದು, ಮಂಗಳವಾರ ಬೆಳಗ್ಗೆ 11 ಗಂಟೆಗೆ ವಿಚಾರಣೆಗೆ ಬರಲಿದೆ.

ವಕೀಲರು ಮತ್ತು ಅವರ ಕುಟುಂಬದ ಮೇಲೆ ದಾಳಿ ನಡೆಸಿದ ಪೊಲೀಸ್‌ ಸಿಬ್ಬಂದಿಯ ವಿರುದ್ಧ ತಕ್ಷಣ ಕ್ರಮಕೈಗೊಳ್ಳುವಂತೆ ಕೋರಿ ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಎಸ್‌ ಎ ಬೊಬ್ಡೆ ಮತ್ತು ಅಲಾಹಾಬಾದ್‌ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಗೋವಿಂದ್‌ ಮಾಥೂರ್‌ ಅವರಿಗೆ ಭಾರತೀಯ ವಕೀಲರ ಪರಿಷತ್ತು (ಬಿಸಿಐ) ಪತ್ರ ಬರೆದಿದೆ

ವಕೀಲರ ಮೇಲೆ ಪೊಲೀಸರು ಹಲ್ಲೆ ನಡೆಸಿರುವ ವಿಡಿಯೋ ವೈರಲ್‌ ಆಗಿದ್ದು, ಈ ಸಂಬಂಧ ಉತ್ತರ ಪ್ರದೇಶದ ವಕೀಲರ ಪರಿಷತ್ತು ಕಳವಳ ವ್ಯಕ್ತಪಡಿಸಿದೆ. ಅದಾಗ್ಯೂ, ಯೋಗಿ ಆದಿತ್ಯನಾಥ್‌ ನೇತೃತ್ವದ ಸರ್ಕಾರ ಇದನ್ನು ಪರಿಗಣಿಸಿಲ್ಲ ಎಂದು ಬಿಸಿಐ ಪತ್ರದಲ್ಲಿ ಉಲ್ಲೇಖಿಸಿದೆ.

ಪೊಲೀಸ್‌ ಸಿಬ್ಬಂದಿಯು ದುರುದ್ದೇಶಪೂರಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಿರುವ ಬಿಸಿಐ, ಇಂಥ ದೌರ್ಜನ್ಯದ ಘಟನೆಗಳನ್ನು ನ್ಯಾಯಾಂಗ ಮತ್ತು ಸರ್ಕಾರ ಗಂಭೀರವಾಗಿ ಪರಿಗಣಿಸದಿದ್ದರೆ ರಸ್ತೆಗಿಳಿದು ಪ್ರತಿಭಟನೆ ನಡೆಸುವ ದಾರಿ ಬಿಟ್ಟು ಪರಿಷತ್ತಿಗೆ ಅನ್ಯ ಮಾರ್ಗವಿಲ್ಲ ಎಂದು ಎಚ್ಚರಿಸಿದೆ. ವಕೀಲರ ಮೇಲಿನ ಪೊಲೀಸ್‌ ದೌರ್ಜನ್ಯವನ್ನು ಖಂಡಿಸಿ ಸುಪ್ರೀಂ ಕೋರ್ಟ್‌ ವಕೀಲರ ಪರಿಷತ್ತು ಸೋಮವಾರ ಹೇಳಿಕೆ ಬಿಡುಗಡೆ ಮಾಡಿತ್ತು.

Suo motu case on assault of Etah lawyer