ಸುದ್ದಿಗಳು

ಅಯೋಧ್ಯೆಯ ಸೇನಾಭೂಮಿ ಒತ್ತುವರಿ ಆರೋಪ: ಅಲಾಹಾಬಾದ್ ಹೈಕೋರ್ಟ್‌ನಿಂದ ಸ್ವಯಂಪ್ರೇರಿತ ಪಿಐಎಲ್‌

ಸೇನಾಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂದು ಆರೋಪಿಸಿ ಅಯೋಧ್ಯೆಯ ವಕೀಲರೊಬ್ಬರು ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ವಕೀಲರ ಅರ್ಜಿಯನ್ನು ವಿಲೇವಾರಿ ಮಾಡಿದ ನ್ಯಾಯಾಲಯ ಸ್ವಯಂ ಪ್ರೇರಿತವಾಗಿ ವಿಚಾರಣೆ ನಡೆಸಲು ನಿರ್ಧರಿಸಿತು.

Bar & Bench

ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಭಾರತೀಯ ಸೇನೆಗೆ ಹಸ್ತಾಂತರಿಸಲಾದ ಭೂಮಿಯನ್ನು ಅತಿಕ್ರಮಿಸಿಕೊಳ್ಳಲಾಗಿದೆ ಎಂಬ ಆರೋಪದ ತನಿಖೆಗಾಗಿ ಅಲಾಹಾಬಾದ್‌ ಹೈಕೋರ್ಟ್‌ ಸ್ವಯಂ ಪ್ರೇರಿತವಾಗಿ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ವಿಚಾರಣೆಗೆ ಮುಂದಾಗಿದೆ [ಅಯೋಧ್ಯೆಯ ಸೇನಾಭೂಮಿ ರಕ್ಷಣೆಗಾಗಿ ಸ್ವಯಂ ಪ್ರೇರಿತ ಪ್ರಕರಣ].

ಸೇನೆಗೆ ಸೇರಿದ ಭೂಮಿಯಲ್ಲಿ ಅನಧಿಕೃತ ಒತ್ತುವರಿ ನಡೆದಿರುವುದನ್ನು ತಡೆಯಲು ಜಿಲ್ಲಾಧಿಕಾರಿಗಳು ವಿಫಲರಾಗಿದ್ದಾರೆ ಎಂದು ದೂರಿ ಅಯೋಧ್ಯೆಯ ವಕೀಲರೊಬ್ಬರು ಈ ಮೊದಲು ಪಿಐಎಲ್‌ ಸಲ್ಲಿಸಿದ್ದರು.

ಆದರೆ ಈ ಅರ್ಜಿಯನ್ನು ವಜಾಗೊಳಿಸಿ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡು ಆರೋಪಗಳನ್ನು ಮತ್ತಷ್ಟು ತನಿಖೆ ನಡೆಸಲು ನ್ಯಾಯಮೂರ್ತಿಗಳಾದ ರಾಜನ್ ರಾಯ್ ಮತ್ತು ಓಂ ಪ್ರಕಾಶ್ ಶುಕ್ಲಾ ಅವರಿದ್ದ ಪೀಠ ನಿರ್ಧರಿಸಿತು.

 ಇದಕ್ಕೂ ಮೊದಲು, ನವೆಂಬರ್ 2023 ರಲ್ಲಿ, ಹೈಕೋರ್ಟ್‌ನ ಸಮನ್ವಯ ಪೀಠ ಇದೇ ಪ್ರಕರಣದ ಕುರಿತು ವಕೀಲರು ಸಲ್ಲಿಸಿದ್ದ ಪಿಐಎಲ್‌ ಅನ್ನು ವಿಲೇವಾರಿ ಮಾಡಿತ್ತು. ಆದರೆ ವಕೀಲರು ಏಪ್ರಿಲ್ 22ರಂದು ಎರಡನೇ ಬಾರಿಗೆ ಸಲ್ಲಿಸಿದ ಅರ್ಜಿ ನ್ಯಾಯಮೂರ್ತಿಗಳಾದ ರಾಯ್ ಮತ್ತು ಶುಕ್ಲಾ ಅವರ ಪೀಠದ ಮುಂದೆ ಬಂದಿತು.

ಈ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿರೋಧಿಸಿದ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ ವಕೀಲರು ಅರ್ಜಿದಾರರು ನಾಲ್ಕು ಕ್ರಿಮಿನಲ್ ಪ್ರಕರಣಗಳಲ್ಲಿ ಆರೋಪಿಯಾಗಿರುವುದರಿಂದ ಕ್ರಿಮಿನಲ್ ಇತಿಹಾಸವನ್ನು ಹೊಂದಿದ್ದಾರೆ ಎಂದಿತು. ಈ ಹಿನ್ನೆಲೆಯಲ್ಲೇ ಅರ್ಜಿಯನ್ನು ಮೇ 25, 2023 ರಂದು ಹೈಕೋರ್ಟ್ ವಜಾಗೊಳಿಸಿದೆ ಎಂದು ವಾದಿಸಿದರು.

ಆದರೆ ಅರ್ಜಿ ಸಲ್ಲಿಸಿದ್ದ ವಕೀಲರ ಪರ ವಾದ ಮಂಡಿಸಿದ ನ್ಯಾಯವಾದಿಗಳು ಅವರು ಬಹುತೇಕ ಪ್ರಕರಣಗಳಲ್ಲಿ ದೋಷಮುಕ್ತರಾಗಿದ್ದಾರೆ ಎಂದು ಪ್ರತಿಪಾದಿಸಿದರು.

ಹೀಗಿದ್ದರೂ ನ್ಯಾಯಪೀಠವು ವಕೀಲರ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಲೇವಾರಿ ಮಾಡುವುದು ಸೂಕ್ತ ಎಂದು ಅಭಿಪ್ರಾಯಪಟ್ಟಿತು. ಭವಿಷ್ಯದಲ್ಲಿ ಅವರು ಸಲ್ಲಿಸಿದ ಯಾವುದೇ ಪಿಐಎಲ್‌ನಲ್ಲಿ ಮೇ 2023 ರ ಆದೇಶವನ್ನು ಬಹಿರಂಗಪಡಿಸುವಂತೆ ವಕೀಲರಿಗೆ ಸೂಚಿಸಲಾಯಿತು.

ಇದೇ ವೇಳೆ ಸ್ವಯಂ ಪ್ರೇರಿತ ಪಿಐಎಲ್ ದಾಖಲಿಸಿಕೊಳ್ಳುವ ಮೂಲಕ ರಕ್ಷಣಾ ಸಚಿವಾಲಯದ ಭೂಮಿ ಅತಿಕ್ರಮಣದ ಆರೋಪಗಳನ್ನು ಪರಿಶೀಲಿಸಲು ನಿರ್ಧರಿಸಿತು.