Farmer Protest 
ಸುದ್ದಿಗಳು

ರೈತರಿಂದ ದುಬಾರಿ ಮೊತ್ತದ ವೈಯಕ್ತಿಕ ಬಾಂಡ್‌: ಉತ್ತರ ಪ್ರದೇಶ ಸರ್ಕಾರದ ವಿವರಣೆ ಬಯಸಿದ ಅಲಾಹಾಬಾದ್‌ ಹೈಕೋರ್ಟ್‌

ಸಾಮಾಜಿಕ ಕಾರ್ಯಕರ್ತೆ ಅರುಂಧತಿ ಧುರು ಸಲ್ಲಿಸಿದ ತುರ್ತು ಮನವಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ರಮೇಶ್‌ ಸಿಂಘಾ ಮತ್ತು ರಾಜೀವ್‌ ಸಿಂಗ್‌ ಅವರನ್ನೊಳಗೊಂಡ ವಿಭಾಗೀಯ ಪೀಠವು ಸೋಮವಾರ ಆದೇಶ ಹೊರಡಿಸಿದೆ.

Bar & Bench

ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಯಲ್ಲಿ ಟ್ರ್ಯಾಕ್ಟರ್‌ ಹೊಂದಿರುವ ಹಲವು ರೈತರಿಗೆ 50,000 ದಿಂದ 10 ಲಕ್ಷ ರೂಪಾಯಿ ಮೊತ್ತದ ದುಬಾರಿ ವೈಯಕ್ತಿಕ ಬಾಂಡ್‌ ಸಲ್ಲಿಸುವಂತೆ ನೋಟಿಸ್‌ ಜಾರಿ ಮಾಡಿರುವ ಜಿಲ್ಲಾಡಳಿತ ಕ್ರಮದ ಕುರಿತು ವಿವರಣೆ ನೀಡುವಂತೆ ಅಲಾಹಾಬಾದ್‌ ಹೈಕೋರ್ಟ್‌ ಉತ್ತರ ಪ್ರದೇಶ ಸರ್ಕಾರಕ್ಕೆ ಸೂಚಿಸಿದೆ.

ಸಾಮಾಜಿಕ ಕಾರ್ಯಕರ್ತೆ ಅರುಂಧತಿ ಧುರು ಸಲ್ಲಿಸಿದ ತುರ್ತು ಮನವಿಯನ್ನು ಆಧರಿಸಿ ನ್ಯಾಯಮೂರ್ತಿಗಳಾದ ರಮೇಶ್‌ ಸಿಂಘಾ ಮತ್ತು ರಾಜೀವ್‌ ಸಿಂಗ್‌ ಅವರಿದ್ದ ವಿಭಾಗೀಯ ಪೀಠವು ಸೋಮವಾರ ಆದೇಶ ಹೊರಡಿಸಿದೆ.

“ರಿಟ್‌ ಮನವಿ ಮತ್ತು ಟ್ರ್ಯಾಕ್ಟರ್‌ ಹೊಂದಿರುವ ರೈತರಿಗೆ ನೀಡಲಾಗಿರುವ ನೋಟಿಸ್‌ಗಳಲ್ಲಿನ ವಿಚಾರವನ್ನು ಪರಿಗಣಿಸಿ, ಯಾವ ಪರಿಸ್ಥಿತಿಯನ್ನು ಆಧರಿಸಿ ರೈತರಿಂದ ಇಷ್ಟು ದುಬಾರಿ ಮೊತ್ತದ ವೈಯಕ್ತಿಕ ಬಾಂಡ್‌ ಮತ್ತು ಇಬ್ಬರು ಭದ್ರತೆಯನ್ನು ಒದಗಿಸುವಂತೆ ಕೇಳಿರುವುದಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರದ ವಿವರಣೆ ಕೇಳುವುದು ಸೂಕ್ತವಾಗಿದೆ” ಎಂದು ಹೈಕೋರ್ಟ್‌ ಅಭಿಪ್ರಾಯಪಟ್ಟಿದೆ.

ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಸೆಕ್ಷನ್‌ 111ರ ಅಡಿ ರೈತ ಮಹಿಳೆಯರೂ ಸೇರಿದಂತೆ ರೈತರಿಗೆ ಜನವರಿ 19ರಿಂದ ಹಲವು ವಿಧದ ನೋಟಿಸ್‌ಗಳನ್ನು ಸೀತಾಪುರದ ಜಿಲ್ಲಾಡಳಿತ ನೀಡಿದೆ ಎಂದು ಅರ್ಜಿದಾರರು ನ್ಯಾಯಾಲಯಕ್ಕೆ ವಿವರಿಸಿದರು.

ಸಿಆರ್‌ಪಿಸಿ ಸೆಕ್ಷನ್ 111ಕ್ಕೆ ಸಂಬಂಧಿಸಿದ ಆದೇಶಗಳು, ಸಿಆರ್‌ಪಿಸಿಯ 107-109 ಸೆಕ್ಷನ್‌ಗಳಿಗೆ ಸಂಬಂಧಿಸಿದಂತೆ ಮ್ಯಾಜಿಸ್ಟ್ರೇಟ್ ನೀಡಿದ ಆದೇಶಗಳಿಗೆ ಸಂಬಂಧಿಸಿವೆ. ಶಾಂತಿ ಕಾಪಾಡಲು, ದೇಶದ್ರೋಹದ ವಿಚಾರಗಳನ್ನು ಪ್ರಸಾರ ಮಾಡುವ ವ್ಯಕ್ತಿಯಿಂದ ಉತ್ತಮ ನಡವಳಿಕೆ ಮತ್ತು ಪದೇಪದೇ ತಪ್ಪು ಮಾಡುವವರಿಂದ ಉತ್ತಮ ನಡವಳಿಕೆ ನಿರೀಕ್ಷಿಸುವ ಸಂಬಂಧ ಈ ಸೆಕ್ಷನ್‌ಗಳ ಅಡಿ ಆದೇಶ ಹೊರಡಿಸಲಾಗುತ್ತದೆ.

ಸಿಆರ್‌ಪಿಸಿ ಸೆಕ್ಷನ್‌ 111ರಡಿ ನೀಡುವ ನೋಟಿಸ್‌ಗಳಿಂದ ರೈತರಿಗೆ ಹಣಕಾಸಿನ ತೊಂದರೆ ಉಂಟಾಗುತ್ತದೆ. ಅಲ್ಲದೇ, ಪೊಲೀಸರು ರೈತರು ವಾಸಿಸುವ ಸ್ಥಳವನ್ನು ಸುತ್ತುವರಿಯುವುದರಿಂದ ಅವರಿಗೆ ಮುಕ್ತವಾಗಿ ಓಡಾಡುವುದಕ್ಕೂ ಸಮಸ್ಯೆಯಾಗುತ್ತದೆ ಎಂದು ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲಾಗಿದೆ.

ರೈತರ ಹೋರಾಟದ ಹಿನ್ನೆಲೆಯಲ್ಲಿ ಅವರು ಕಾನೂನು ಉಲ್ಲಂಘಿಸಬಹುದು ಎಂಬ ಆತಂಕದ ಹಿನ್ನೆಲೆಯಲ್ಲಿ ವೈಯಕ್ತಿಕ ಬಾಂಡ್‌ ಮತ್ತು ಭದ್ರತೆ ಒದಗಿಸುವಂತೆ ನೋಟಿಸ್‌ ಜಾರಿಗೊಳಿಸಲಾಗಿದೆ. ರೈತರಿಗೆ ನೀಡಲಾಗಿರುವ ನೋಟಿಸ್‌ಗಳು ಆಧಾರರಹಿತವಾಗಿದ್ದು, ಅವರುಗಳ ಮೂಲಭೂತ ಹಕ್ಕುಗಳನ್ನು ಉಲ್ಲಂಘಿಸುತ್ತವೆ. ರೈತರು ತಮ್ಮ ಮನೆಯಿಂದ ಹೊರಬರದಂತೆ ತಡೆಯುವುದು ಇದರ ಉದ್ದೇಶವಾಗಿದೆ ಎಂದು ದೂರಲಾಗಿದೆ. ಸ್ಥಳೀಯ ಪೊಲೀಸರ ಮಾಹಿತಿ ಆಧರಿಸಿ, ರೈತರ ವಾದ ಆಲಿಸದೇ ಬಡ ರೈತರಿಂದ ದುಬಾರಿ ಮೊತ್ತ ಪಾವತಿಸುವಂತೆ ಒತ್ತಾಯಿಸಲಾಗದು ಎಂದು ಹೇಳಲಾಗಿದೆ.

ಸೀತಾಪುರದ ಜಿಲ್ಲಾಡಳಿತದಿಂದ ಮಾಹಿತಿ ಪಡೆದುಕೊಳ್ಳುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸಿರುವ ನ್ಯಾಯಾಲಯವು ಪ್ರಕರಣವನ್ನು ಫೆಬ್ರುವರಿ 2ಕ್ಕೆ ಮುಂದೂಡಿದೆ. ಹಿರಿಯ ವಕೀಲ ಐ ಬಿ ಸಿಂಗ್‌ ಅವರು ಅರ್ಜಿದಾರರ ಪರ ವಾದಿಸಿದರು.