Justice B S Patil, Lokayukta 
ಸುದ್ದಿಗಳು

ಲೋಕಾಯುಕ್ತರ ಕುಟುಂಬದಿಂದ ನ್ಯಾಯಾಂಗ, ಲೋಕಾಯುಕ್ತದ ವ್ಯಾಪಕ ದುರ್ಬಳಕೆ: ಖೋಡೆ ಕುಟುಂಬ ಸದಸ್ಯರಿಂದ ಸಿಜೆಗೆ ದೂರು

ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರ ಪತ್ನಿ, ವಕೀಲೆ ಶೋಭಾ ಪಾಟೀಲ್‌, ಪುತ್ರ ಸೂರಜ್‌ ಪಾಟೀಲ್‌ ಮತ್ತು ಪುತ್ರಿ ಮೋನಿಕಾ ಪಾಟೀಲ್‌ ಅವರು ಲೋಕಾಯುಕ್ತ ಮತ್ತು ನ್ಯಾಯಂಗ ಪ್ರಕ್ರಿಯೆಯನ್ನು 'ಕೌಟುಂಬಿಕ ವ್ಯವಹಾರವನ್ನಾಗಿಸಿಕೊಂಡಿದ್ದಾರೆ' ಎಂದು ಆರೋಪ.

Siddesh M S

ಕರ್ನಾಟಕದ ಲೋಕಾಯುಕ್ತ ಬಿ ಎಸ್‌ ಪಾಟೀಲ್‌ ಅವರ ಕುಟುಂಬ ಸದಸ್ಯರು ಲೋಕಾಯುಕ್ತ ಕಚೇರಿಯ ಮೂಲಕ ನ್ಯಾಯಾಂಗ ಪ್ರಕ್ರಿಯೆ ದುರ್ಬಳಕೆ ಮತ್ತು ಅಕ್ರಮ ಹಣ ಗಳಿಕೆಯಲ್ಲಿ ತೊಡಗಿದ್ದಾರೆ ಎಂದು ಗುರುತರ ಆರೋಪ ಮಾಡಿ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಅವರಿಗೆ ಇತ್ತೀಚೆಗೆ ಪ್ರತಿಷ್ಠಿತ ಖೋಡೆ ಕುಟುಂಬದ ಕೆಲವು ಸದಸ್ಯರು ಪತ್ರದ ಮೂಲಕ ದೂರು ಸಲ್ಲಿಸಿದ್ದಾರೆ.

ಖೋಡೆ ಕುಟಂಬ ಸದಸ್ಯರಾದ ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಮತ್ತು ಸಹೋದರ ಎಂ ಎಂ ಅನಂತಮೂರ್ತಿ ಅವರು ಮುಖ್ಯ ನ್ಯಾಯಮೂರ್ತಿಗಳಿಗೆ 2022ರ ಡಿಸೆಂಬರ್‌ 12ರಂದು ಪತ್ರ ಬರೆದಿದ್ದು, ಲೋಕಾಯುಕ್ತರಾದ ಬಿ ಎಸ್‌ ಪಾಟೀಲ್‌ ಮತ್ತು ಅವರ ಕುಟುಂಬ ಸದಸ್ಯರ ಕುರಿತು ಗಂಭೀರ ಆರೋಪ ಮಾಡಿದ್ದಾರೆ.

ಇದಲ್ಲದೆ ವೃತ್ತಿ ದುರ್ನಡತೆಯ ಕುರಿತಾಗಿ ಪಾಟೀಲ್‌ ಅವರ ಪತ್ನಿ, ವಕೀಲೆ ಶೋಭಾ ಮತ್ತು ಪುತ್ರ, ವಕೀಲ ಸೂರಜ್‌ ಪಾಟೀಲ್‌ ಅವರ ವಿರುದ್ಧ ಪ್ರತ್ಯೇಕವಾಗಿ ರಾಜ್ಯ ವಕೀಲರ ಪರಿಷತ್‌ನ (ಕೆಎಸ್‌ಬಿಸಿ) ಶಿಸ್ತು ಸಮಿತಿಗೂ ದೂರು ಸಲ್ಲಿಸಲಾಗಿದೆ.

ಕುಟುಂಬಕ್ಕೆ ಸೇರಿದ ಸಾವಿರಾರು ಕೋಟಿ ಚರ ಮತ್ತು ಸ್ಥಿರ ಆಸ್ತಿ ಇದ್ದು, ಬಿಲ್ಡರ್‌ ಮತ್ತು ಡೆವಲಪರ್‌ಗಳ ಅಕ್ರಮ ಕೂಟು ರಚಿಸಿಕೊಂಡು ಖೋಡೆ ಕುಟುಂಬದ ಪುರುಷರು ಕಾನೂನುನಾತ್ಮಕವಾಗಿ ತಮಗೆ ದಕ್ಕಬೇಕಾದ ಆಸ್ತಿಯ ವಿವಾದವನ್ನು ನ್ಯಾಯಾಲಯದಲ್ಲಿ ವಿಳಂಬಗೊಳಿಸುತ್ತಿದ್ದಾರೆ. ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲದಲ್ಲಿನ ಅಸಲು ದಾವೆಯಲ್ಲಿ 16ನೇ ಪ್ರತಿವಾದಿಯಾಗಿರುವ ಸೋದರ ಮಾವ ಕೆ ಎಲ್‌ ಸ್ವಾಮಿ ಅವರ ಹತ್ತಿರದ ಸಂಬಂಧಿ ಮಹಿಮಾ ಪಟೇಲ್‌ ಅವರ ಜೊತೆ ನಿಕಟ ಸಂಪರ್ಕ ಹೊಂದಿರುವುದನ್ನು ಹಾಗೂ ಪ್ರೆಸ್ಟೀಜ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌ನೊಂದಿಗೆ ಹೊಂದಿರುವ ಸಂಬಂಧವನ್ನು ದಾವೆ ಮುನ್ನಡೆಸುವುದಕ್ಕೂ ಮುನ್ನ ಶೋಭಾ ಅವರು ತಮಗೆ ಬಹಿರಂಗಪಡಿಸಿರಲಿಲ್ಲ. ಆಸ್ತಿಯಲ್ಲಿ ನಮ್ಮ ಪಾಲು ಪಡೆದುಕೊಡುವುದಕ್ಕೆ ಬದಲಾಗಿ, ಈ ದಾವೆಯಿಂದ ಅಕ್ರಮ ಸಂಪಾದನೆ ಮಾಡಿಕೊಳ್ಳುವ ಕ್ರೂರ ಉದ್ದೇಶವನ್ನು ಬಿ ಎಸ್‌ ಪಾಟೀಲ್‌ ಕುಟುಂಬ ಸದಸ್ಯರು ಹೊಂದಿದ್ದರು. ಸಾಂದರ್ಭಿಕ ಘಟನೆಗಳು ಮೇಲೆ ಉಲ್ಲೇಖಿಸಿದ ವ್ಯಕ್ತಿ ಮತ್ತು ಸಂಸ್ಥೆಯ ಜೊತೆಗಿನ ನಂಟನ್ನು ಬಹಿರಂಗಪಡಿಸಿದೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಲಕ್ಷ್ಮಿದೇವಿ ಅವರ ಪುತ್ರಿಯರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಅವರು ಕುಟುಂಬದ ಆಸ್ತಿಯಲ್ಲಿ ಪಾಲು ಪಡೆಯಲು ನ್ಯಾಯಾಲಯದ ಮೆಟ್ಟಿಲೇರಿದ್ದು, ಕುಟುಂಬದ ಇತರ ಸದಸ್ಯರ ಕಿರುಕುಳದಿಂದ ಬೇಸತ್ತಿದ್ದೇವೆ. ನ್ಯಾಯ ಪಡೆಯುವ ಭಾಗವಾಗಿ ಬಿ ಎಸ್‌ ಪಾಟೀಲ್‌ ಅವರ ಪತ್ನಿ ಶೋಭಾ ಪಾಟೀಲ್‌ ಅವರನ್ನು ಸಂಪರ್ಕಿಸಲಾಗಿತ್ತು. ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಬಾಕಿಯಿರುವ ದಾವೆಯ ದಾಖಲೆಯಲ್ಲಿನ ವಕೀಲರಾದ ಶೋಭಾ ಮತ್ತು ಸೂರಜ್‌ ಪಾಟೀಲ್‌ ಅವರು ಪ್ರೆಸ್ಟೀಜ್‌ ಎಸ್ಟೇಟ್ಸ್‌ ಪ್ರೈವೇಟ್‌ ಲಿಮಿಟೆಡ್‌ ಮತ್ತು ಅದರ ಸೋದರ ಸಂಸ್ಥೆಗಳ ಜೊತೆ ಕೈಜೋಡಿಸಿದರು. ಖೋಡೆ ಕುಟುಂಬದ ಹಲವು ಆಸ್ತಿಗಳ ಅಭಿವೃದ್ಧಿಯಲ್ಲಿ ಪ್ರೆಸ್ಟೀಜ್‌ ಸಂಸ್ಥೆ ಭಾಗಿಯಾಗಿದೆ. ಶೋಭಾ ಮತ್ತು ಸೂರಜ್‌ ಅವರು ನಮ್ಮ ಹಿತಾಸಕ್ತಿಯನ್ನು ಕಾಯದೆ ಪ್ರೆಸ್ಟೀಜ್‌ ಸಂಸ್ಥೆಗೆ ಅನುಕೂಲವಾಗುವ ರೀತಿಯಲ್ಲಿ, ನಮ್ಮ ಸಮ್ಮತಿಗೆ ವಿರುದ್ಧವಾಗಿ ಪ್ರಕರಣಕ್ಕೆ ಅಗತ್ಯವಿಲ್ಲದಿದ್ದರೂ ಸಹ ಮೆಮೋವೊಂದನ್ನು ನ್ಯಾಯಾಲಯಕ್ಕೆ ಸಲ್ಲಿಸುವ ಮೂಲಕ ವೈಯಕ್ತಿಕವಾಗಿ ಅಪಾರ ಪ್ರಮಾಣದ ಲಾಭ ಮಾಡಿಕೊಂಡಿದ್ದಾರೆ ಎನ್ನುವುದು ದೂರುದಾರರ ಆರೋಪವಾಗಿದೆ.

ದೂರುದಾರರ ಕೋರಿಕೆ ಏನು?

ಅಕ್ರಮ ಒಪ್ಪಂದಗಳಿಗೆ (ಡೀಲ್‌) ಲೋಕಾಯುಕ್ತರು ಮಧ್ಯಸ್ಥಿಕೆದಾರರ ರೀತಿ ಕೆಲಸ ಮಾಡಿದ್ದು, ಅವರ ಪಾತ್ರದ ಕುರಿತು ತಿಳಿಯಬೇಕು. ಮುಂದೆ ಅಧಿಕಾರ ದುರ್ಬಳಕೆ ತಪ್ಪಿಸಲು ಸೂಕ್ತ ಕ್ರಮಕೈಗೊಳ್ಳಬೇಕು. ಲೋಕಾಯುಕ್ತ ಕುಟುಂಬದ ಅಕ್ರಮ ಆಸ್ತಿ ಸಂಪಾದನೆಗೆ ಸಂಬಂಧಿಸಿದಂತೆ ತನಿಖೆ ನಡೆಸಬೇಕು. ನೂರಾರು ಕೋಟಿ ಮೌಲ್ಯದ ಸ್ವತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕಕ್ಷಿದಾರರಾದ ತಮ್ಮ ಅನುಮತಿ ಪಡೆಯದೇ 2020ರ ಫೆಬ್ರವರಿ 13ರಂದು ನ್ಯಾಯಾಲಯಕ್ಕೆ ಸಲ್ಲಿಸಿದ್ದ ಮೆಮೊ (ನೂರಾರು ಕೋಟಿ ಮೌಲ್ಯದ ಸ್ವತ್ತು ಮಾರಾಟಕ್ಕೆ ಸಂಬಂಧಿಸಿದಂತೆ ಕಕ್ಷಿದಾರರಾದ ಚಂದ್ರಪ್ರಭಾ, ಸತ್ಯಪ್ರಭಾ, ಸಾವಿತ್ರಿ, ಸ್ವಾಮಿಪ್ರಭಾ ಅವರ ಅನುಮತಿ ಪಡೆಯದೇ ನ್ಯಾಯಾಲಯದಲ್ಲಿ ಸಲ್ಲಿಸಲಾಗಿದ್ದ ಮೆಮೊ) ಕುರಿತು ಮೇಲ್ಮನವಿ ಪ್ರಕರಣದ ಆದೇಶದಲ್ಲಿ ಉಲ್ಲೇಖಿಸಿರುವ 49 ಮತ್ತು 50 ಮತ್ತು 61ನೇ ಪುಟದಲ್ಲಿನ ನಿರ್ದಿಷ್ಟ ವಿಚಾರಗಳನ್ನು ತೆಗೆಯಲು ಸ್ವಯಂಪ್ರೇರಿತವಾಗಿ ಪರಿಗಣಿಸಬೇಕು. ಅಲ್ಲದೆ, ನ್ಯಾಯಮೂರ್ತಿಗಳನ್ನು ಬೇಕಾದ ರೀತಿಯಲ್ಲಿ ನಿರ್ವಹಿಸುವ ಪ್ರಭಾವ ತಮಗಿದೆ ಎಂದು ಹೇಳುವ ಮೂಲಕ ನಮ್ಮ ಸಹೋದರ ಎಂ ಎಂ ಅನಂತಮೂರ್ತಿ ಅವರಿಗೆ ವಕೀಲ ಸೂರಜ್‌ ಪಾಟೀಲ್ ಬೆದರಿಕೆಯೊಡ್ಡಿದ್ದಾರೆ ಎನ್ನುವ ವಿಚಾರವನ್ನು ಸಹ ಪತ್ರದಲ್ಲಿ ವಿವರಿಸಲಾಗಿದೆ.

ಲೋಕಾಯುಕ್ತರು ಭ್ರಷ್ಟಾಚಾರದ ಕೂಪ

ಪಾಟೀಲ್‌ ಅವರ ಕುಟುಂಬ ಸದಸ್ಯರಾದ ಶೋಭಾ, ಸೂರಜ್‌ ಮತ್ತು ಮೋನಿಕಾ ಅವರು ತಮ್ಮ ಮೇಲೆ ಇರಿಸಿದ್ದ ನಂಬಿಕೆ ಉಲ್ಲಂಘಿಸಿರುವುದಲ್ಲದೆ, ಇಡೀ ನ್ಯಾಯಾಂಗ ವ್ಯವಸ್ಥೆಯ ಆತ್ಮಸಾಕ್ಷಿಯನ್ನು ಕೆಣಕಿದ್ದಾರೆ. ದಾವೆಯಲ್ಲಿರುವ ಆಸ್ತಿಯು ಕೋಟ್ಯಂತರ ರೂಪಾಯಿ ಬೆಲೆ ಬಾಳುತ್ತಿದ್ದು, ಭ್ರಷ್ಟಚಾರ ನಿಯಂತ್ರಿಸಲು ನೇಮಕಗೊಂಡಿರುವ ಲೋಕಾಯುಕ್ತರು ಭ್ರಷ್ಟಾಚಾರದ ಕೂಪವಾಗಿದ್ದಾರೆ. ಲೋಕಾಯುಕ್ತರ ಪತ್ನಿ ಮತ್ತು ಪುತ್ರ, ಲೋಕಾಯುಕ್ತರ ಸ್ಥಾನದ ದುರ್ಬಳಕೆ ಮಾಡಿಕೊಂಡು ಅಪಾರ ಪ್ರಮಾಣದ ಆಸ್ತಿ ಸಂಪಾದಿಸಿದ್ದು, ದಾವೆದಾರರಿಗೆ ಕಿರುಕುಳ ನೀಡಿದ್ದಾರೆ. ನ್ಯಾಯಾಂಗದ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಅದನ್ನು ಕುಟುಂಬದ ವ್ಯವಹಾರವನ್ನಾಗಿ ಪರಿವರ್ತಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ನ್ಯಾಯಾಂಗದ ದುರ್ಬಳಕೆಯ ಬೆದರಿಕೆ ಇದ್ದು, ಕಕ್ಷಿದಾರರ ಹಿತಾಸಕ್ತಿ ಬಲಿಕೊಟ್ಟು ನ್ಯಾಯಮೂರ್ತಿಗಳ ಹೆಸರನ್ನು ದುರ್ಬಳಕೆ ಮಾಡಲಾಗಿದೆ. ನ್ಯಾಯಮೂರ್ತಿಗಳು ಮತ್ತು ನ್ಯಾಯಾಂಗ ಹಾಗೂ ನಮ್ಮಂಥ ಕಕ್ಷಿದಾರರಿಗೆ ಕಿರುಕುಳ ನೀಡುವ ಮೂಲಕ ಲೋಕಾಯುಕ್ತರ ಇಡೀ ಕುಟುಂಬ ವೈಯಕ್ತಿಕ ಲಾಭ ಮಾಡಿಕೊಳ್ಳುವುದನ್ನು ತಡೆಯಲು ಈ ವಿಚಾರವನ್ನು ತಮ್ಮ ಗಮನಕ್ಕೆ ತರಲಾಗುತ್ತಿದೆ. ಶೋಭಾ ಪಾಟೀಲ್‌ ಅವರು ಅಕ್ರಮ ಸಂಪಾದನೆಗಾಗಿ ಮತ್ತು ತಮ್ಮ ಸ್ಥಾನ ಉಳಿಸಿಕೊಳ್ಳಲು ಯಾವುದೇ ಹಂತಕ್ಕೆ ಹೋಗಲು ಸಿದ್ಧವಿದ್ದಾರೆ. ಪಾಟೀಲ್‌ ಅವರು ಪತ್ನಿಯ ಎಲ್ಲಾ ಅಕ್ರಮದಲ್ಲಿ ಕೈಜೋಡಿಸಿದ್ದಾರೆ. ಈ ಪತ್ರ ಬರೆಯುವ ಮೂಲಕ ನಾವು ಎದೆಗಾರಿಕೆಯನ್ನು ತೋರಿದ್ದು, ಬಹಳಷ್ಟು ಮಂದಿ ಈ ಸಾಹಸ ಮಾಡುವುದಿಲ್ಲ. 2020ರ ಫೆಬ್ರವರಿ 13ರಂದು ಶೋಭಾ ಮತ್ತು ಸೂರಜ್‌ ಪಾಟೀಲ್‌ ಅವರು ನಮ್ಮ ಇಚ್ಛೆಗೆ ವಿರುದ್ಧವಾಗಿ ಆಕ್ಷೇಪಾರ್ಹವಾದ ಮೆಮೊವನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ಇದರ ಹಿಂದಿನ ಉದ್ದೇಶದ ಬಗ್ಗೆ ನಾವು ದೆಹಲಿ ಮತ್ತು ಬೆಂಗಳೂರಿನಲ್ಲಿ ಸಲಹೆ ಪಡೆದ ಹಲವು ಹಿರಿಯ ವಕೀಲರು ಸಂಶಯ ವ್ಯಕ್ತಪಡಿಸಿದ್ದರಿಂದ ಪಾಟೀಲ್‌ ಕುಟುಂಬದ ಪಾತ್ರದ ಬಗ್ಗೆ ಆಳವಾದ ಅಧ್ಯಯನ ನಡೆಸಿ ಪತ್ರ ಬರೆಯಲಾಗುತ್ತಿದೆ ಎಂದು ಪತ್ರದಲ್ಲಿ ವಿವರಿಸಲಾಗಿದೆ.

ಲೋಕಾಯುಕ್ತರ ಪುತ್ರನಿಗೆ ಮಿನಿ ಕೂಪರ್‌ ಕಾರು!

ಪ್ರೆಸ್ಟೀಜ್‌ ಎಸ್ಟೇಟ್‌ ಪ್ರೈವೇಟ್‌ ಲಿಮಿಟೆಡ್‌ನ ವ್ಯವಸ್ಥಾಪಕ ನಿರ್ದೇಶಕ ಮೆಹಮೂದ್‌ ಅಯಾಜ್‌ ಅವರು ಸೂರಜ್‌ ಪಾಟೀಲ್‌ ಸಮೀಪವರ್ತಿ/ಸ್ನೇಹಿತ ಅವಿನಾಶ ಆರ್‌ ಎಂಬವರಿಗೆ ಬಿಎಂಡಬ್ಲ್ಯು ಮಿನಿ ಕೂಪರ್‌ ಕಾರ್‌ ವರ್ಗಾಯಿಸಿದ್ದು, ಆನಂತರ ಅದನ್ನು ಅವರು ಸೂರಜ್‌ ಪಾಟೀಲ್‌ಗೆ ವರ್ಗಾಯಿಸಿದ್ದಾರೆ. ಶೋಭಾ, ಸೂರಜ್‌ ಮತ್ತು ಮೋನಿಕಾ ಪಾಟೀಲ್‌ ಅವರು ಹಲವು ಎಕರೆ ಕೃಷಿ ಭೂಮಿ, ವಾಣಿಜ್ಯ ಸಮುಚ್ಚಯ/ಫ್ಲ್ಯಾಟ್‌ಗಳನ್ನು ಖರೀದಿಸಿದ್ದು, ಇದು ಅಕ್ರಮ ಹಣ ವರ್ಗಾವಣೆಯಲ್ಲದೇ ಬೇರೇನೂ ಅಲ್ಲ ಎಂದು ಸಿಜೆ ಹಾಗೂ ಶಿಸ್ತು ಸಮಿತಿಗೆ ಸಲ್ಲಿಸಿರುವ ದೂರಿನಲ್ಲಿ ವಿವರಿಸಲಾಗಿದೆ.